ಬೀದರ: ಜಿಲ್ಲೆಯ ಕೆಲವು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಕೋಣೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯವನ್ನು ಬೇರೆ ಏಜೆನ್ಸಿಗೆ ವಹಿಸಿ ಕೆಲಸ ಆರಂಭಿಸಿ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತ್ ಚಿದ್ರಿ ತಿಳಿಸಿದರು.
ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಅವರು ಮಾತನಾಡಿದರು.
ಎರಡು ವರ್ಷಗಳಿಂದ ಅನುದಾನ ಲಭ್ಯವಿದ್ದರೂ ಜಿಲ್ಲೆಯ ಕೆಲವು ಸರ್ಕಾರಿ ಪ್ರಾಥಮಿಕ ಶಾಲೆಯ 43 ಕೋಣೆಗಳು ಮತ್ತು 20 ಪ್ರೌಢಶಾಲೆಗಳ 29 ಶಾಲಾ ಕೋಣೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯವು ಕೆಆರ್‌ಐಡಿಎಲ್‌ನಿಂದ ಆಗುತ್ತಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಕೆಆರ್‌ಐಡಿಎಲ್‌ಗೆ ನೀಡಿದ ಹಣವನ್ನು ಮರಳಿ ಪಡೆದು, ಬೇರೆ ಏಜೆನ್ಸಿಗೆ ನೀಡಿ, ಶಾಲಾ ಕೋಣೆಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯವನ್ನು ಪುನಾರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.
ತೋಟಗಾರಿಕಾ ಬೆಳೆಯ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕೊಳವೆಬಾವಿಗಳಲ್ಲಿ ಇದುವರೆಗೆ ನೀರು ಬಾರದ ಕಾರಣ ನೀರಾವರಿ ಪ್ರಗತಿ ಕುಂಠಿತವಾಗಿದೆ. ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಹಣಕಾಸಿನ ಯಾವುದೇ ಕೊರತೆ ಇಲ್ಲ. ಹನಿ ನೀರಾವರಿ ಮಾಡಬಯಸುವವರಿಗೆ ಇಲಾಖೆಯಲ್ಲಿ ಸಾಕಷ್ಟು ಅನುದಾನ ಲಭ್ಯವಿದೆ. ನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಇನ್ನೂವರೆಗೆ ಕೂಡ ಕಾಲವಕಾಶವಿದೆ. ಆಸಕ್ತಿ ಇರುವ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕ ಮಾಡಿದರೆ ಪಾಲಿಹೌಸ್ ಯೋಜನೆ ಫಲಾನುಭವಿಯಾಗಲು ಅವಕಾಶವಿದೆ.
ತೋಟಗಾರಿಕಾ ಬೆಳೆ ಬೆಳೆಯುವ ರೈತರಿಗೆ ಯಾಂತ್ರೀಕರಣದಲ್ಲಿ ಸಹಾಯಧನ ಲಭ್ಯವಿದೆ. ರೈತರು ಆಯಾ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿ, ಯೋಜನೆಗಳ ಲಾಭವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಾವುಗೆ ಸಭೆಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ಅವರು ಕೃಷಿ ಇಲಾಖೆಯ ಯೋಜನೆಯಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಜಿಪಂ ಉಪಾಧ್ಯಕ್ಷ ಲಕ್ಷ್ಮಣ ಬುಳ್ಳಾ, ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಜ್ಞಾನೇಂದ್ರಕುಮಾರ ಗಂಗವಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.