Advertisement

ಬೀದರ್‌:ಮತದಾರರನ್ನು ಸೆಳೆಯಲು ಬಿಜೆಪಿ-ಕಾಂಗ್ರೆಸ್‌ ಕಸರತ್ತು

12:30 AM Mar 08, 2019 | |

ಬೀದರ್‌: ಹೈದರಾಬಾದ್‌-ಕರ್ನಾಟಕ ಭಾಗದ ಬೀದರ್‌ನಲ್ಲಿ ಬಿಸಿಲ ಝಳ ಏರುತ್ತಿದ್ದಂತೆ, ಲೋಕಸಭಾ ಚುನಾವಣೆಯ ಕಾವು ಹೆಚ್ಚಾಗತೊಡಗಿದೆ. ಪ್ರಚಾರದ ಅಬ್ಬರ ತುರುಸು ಪಡೆದಿದ್ದು, ತಂತ್ರ, ಪ್ರತಿತಂತ್ರ ಹೆಣೆಯುವಲ್ಲಿ ರಾಜಕೀಯ ನಾಯಕರು ನಿರತರಾಗಿದ್ದಾರೆ. 

Advertisement

ಕಾಂಗ್ರೆಸ್‌ ಅಸ್ತ್ರವೇನು?
ಬೀದರ್‌-ಕಲಬುರಗಿ ರೈಲು, ಹೈದ್ರಾಬಾದ್‌ ಕರ್ನಾಟಕ 371(ಜೆ), ಹೆದ್ದಾರಿ ನಿರ್ಮಾಣ, ಬೀದರ್‌-ಯಶವಂತಪುರ ರೈಲು ಸಂಚಾರ ಸಹಿತ ಹಲವು ವಿಷಯಗಳ ಆಧಾರದಲ್ಲಿ ಈ ಹಿಂದಿನ ಲೋಕಸಭಾ ಚುನಾವಣೆಗಳು ನಡೆದಿದ್ದವು. ಇದೀಗ ಅವುಗಳ ಸಾಧನೆ ಹಿಡಿದುಕೊಂಡು ಕಾಂಗ್ರೆಸ್‌ ಪ್ರಚಾರಕ್ಕೆ ಮುಂದಾಗಲಿದೆ. ರಾಜ್ಯದಲ್ಲಿನ ಈ ಹಿಂದಿನ ಕಾಂಗ್ರೆಸ್‌ ಸರಕಾರ ಮತ್ತು ಈಗಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದಲ್ಲಿನ ಯೋಜನೆಗಳನ್ನೂ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಹೊಸ ಸೂತ್ರಗಳನ್ನು ಕಾಂಗ್ರೆಸ್‌ ನಾಯಕರು ಹೆಣೆಯುತ್ತಿದ್ದಾರೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಜಯ ಗಳಿಸಿದರೆ, 371(ಜೆ) ಸಮಸ್ಯೆಗಳನ್ನು ಬಗೆಹರಿಸಿ, ಈ ಭಾಗದ ಜನರಿಗೆ ಅದರ ಲಾಭ ಕಲ್ಪಿಸುವುದು, ಬೀದರ್‌ನ್ನು 
ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಸೇರಿಸುವುದು, ಸಂವಿಧಾನ ತಿದ್ದುಪಡಿ ಹೇಳಿಕೆಗಳು ಈ ಬಾರಿಯ ಕಾಂಗ್ರೆಸ್‌ನ ಪ್ರಚಾರದ ಅಸ್ತ್ರಗಳಾಗುವ ಸಾಧ್ಯತೆಗಳು ಹೆಚ್ಚಿವೆ.

ಕೇಂದ್ರದ ಸಾಧನೆಗಳೇ ಬಿಜೆಪಿಗೆ ಶ್ರೀರಕ್ಷೆ
ಬಿಜೆಪಿ ಕೂಡ ಕಳೆದ ಐದು ವರ್ಷಗಳ ಕೇಂದ್ರ ಸರಕಾರದ ಸಾಧನೆಗಳು ಮತ್ತು ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಫಸಲ್‌ಬಿಮಾ ಯೋಜನೆ, ಅಮೃತ್‌ ಯೋಜನೆ, ಪಾಸ್‌ಪೋರ್ಟ್‌ ಸೇವಾ ಕೇಂದ್ರ, ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಪ್ರಧಾನ ಮಂತ್ರಿ ಮುದ್ರಾ ಯೋಜನೆ, ಉಜ್ವಲ ಯೋಜನೆ ಸಹಿತ ಇತರ ಯೋಜನೆಗಳ ಲಾಭ ಪಡೆದಿರುವ ಫಲಾನುಭವಿಗಳನ್ನು ಸಂಪರ್ಕಿಸಿ, ಪಕ್ಷದ ಕಡೆಗೆ ಸೆಳೆಯುವ ಕಾರ್ಯ ನಡೆಸಿದೆ. ಅಲ್ಲದೆ ಕಳೆದ ಎರಡು ತಿಂಗಳುಗಳಿಂದ ಜಿಲ್ಲೆಯ ಮತದಾರರಿಗೆ ಕರೆ ಮಾಡಿ, ಸಂಸದರ ಸಾಧನೆ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಕೂಡ ನಡೆಯುತ್ತಿದೆ. ಇದಕ್ಕಾಗಿ ವಿಶೇಷ ಕಾಲ್‌ ಸೆಂಟರ್‌ ನಿರ್ಮಿಸಲಾಗಿದೆ. ಹಾಲಿ ಸಂಸದರ ಐದು ವರ್ಷಗಳ ಸಾಧನೆಗಳ ಪುಸ್ತಕವೊಂದನ್ನು ತಯಾರಿಸಲಾಗಿದ್ದು, ಕೇಂದ್ರ ಸರಕಾರದ ಅನುದಾನದಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳು, ಯೋಜನೆಗಳ ಬಗೆಗಿನ ಮಾಹಿತಿಯನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾಡುತ್ತಿದ್ದಾರೆ.

ಕ್ಷೇತ್ರವ್ಯಾಪ್ತಿ
ಬೀದರ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹುಮ್ನಾಬಾದ್‌, ಚಿಂಚೊಳ್ಳಿ, ಔರಾದ್‌, ಭಾಲ್ಕಿ, ಬಸವಕಲ್ಯಾಣ, ಬೀದರ್‌ ದಕ್ಷಿಣ, ಬೀದರ್‌, ಆಳಂದ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಬಿಜೆಪಿಯ ಭಗವಂತ ಖೂಬಾ ಪ್ರಸ್ತುತ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಗೆಲುವಿಗಾಗಿ ಲೆಕ್ಕಾಚಾರ
ಸದ್ಯ ಜಿಲ್ಲೆಯಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ ಹೆಚ್ಚಿದ್ದು, ಈ ಬಾರಿ ಲೋಕಸಭಾ ಸ್ಥಾನವನ್ನು ಸುಲಭವಾಗಿ ಪಡೆಯಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ನಲ್ಲಿದೆ. ಆದರೂ ಅದು ಅಷ್ಟು ಸುಲಭದ ಕೆಲಸವಲ್ಲ ಎಂಬುದನ್ನು ಅರಿತು, ಕಾಂಗ್ರೆಸ್‌ ವರಿಷ್ಠರಿಂದ ಪ್ರಚಾರ ನಡೆಸಿ ಪ್ರಮುಖ ವರ್ಗಗಳ ಮತ ಸೆಳೆಯುವ ತವಕದಲ್ಲಿ ಪಕ್ಷದ ನಾಯಕರಿದ್ದಾರೆ. ಸದ್ಯ ಎರಡೂ ಪಕ್ಷಗಳು ಚುನಾವಣೆಯ ಪೂರ್ವ ಸಿದ್ಧತೆಗೆ ಹೆಚ್ಚು ಮಹತ್ವ ನೀಡುತ್ತಿವೆ. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಗಳನ್ನು ಪಕ್ಷದ ನಾಯಕರು ನಡೆಸುತ್ತಿದ್ದಾರೆ. ಏನಾದರಾಗಲಿ, ತಮ್ಮ ಪಕ್ಷ ಅಧಿಕ ಮತಗಳನ್ನು ಪಡೆಯಬೇಕು. ಯಾವುದೇ ಕಾರಣಕ್ಕೂ ಪಕ್ಷದ ಅಭ್ಯರ್ಥಿಗೆ ಸೋಲಾಗಬಾರದು. ಭರ್ಜರಿ ಜಯ ದಾಖಲಿಸುವತ್ತ ಕಾಯತಂತ್ರ ರೂಪಿಸಬೇಕು ಎಂಬ ನಿಟ್ಟಿನಲ್ಲಿ ಚುನಾವಣ ರೂಪುರೇಷೆಗಳನ್ನು ತಯಾರಿಸುತ್ತಿದ್ದಾರೆ.

Advertisement

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next