ಬೀದರ: ಬೀದರ ಲೋಕಸಭೆ ಚುನಾವಣೆಗೆ ಏ.23ರಂದು ಶಾಂತಯುತವಾಗಿ ಮತದಾನ ನಡೆದಿದೆ. ಇದಕ್ಕೆ ಸಹಕರಿಸಿದ ಜಿಲ್ಲೆಯ ಎಲ್ಲ ಸಾರ್ವಜನಿಕರು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಅರೇ ಸೇನಾ ಪಡೆಗಳು, ಸ್ವೀಪ್ ಸಮಿತಿ, ಸ್ವಯಂ ಸೇವಕರು ಮತ್ತು ಎಲ್ಲ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಕೃತಜ್ಞತೆ ಸಲ್ಲಿಸಿದ್ದಾರೆ.
ಬೀದರ ಲೋಕಸಭೆ ಕ್ಷೇತ್ರದ ಸಂಸದರ ಆಯ್ಕೆಗಾಗಿ 1,999 ಮತಗಟ್ಟೆಗಳಲ್ಲಿ ಮಂಗಳವಾರ ಮತದಾನ ಪೂರ್ಣಗೊಂಡ ಬಳಿಕ ಎಲ್ಲ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿ ಪ್ಯಾಟ್‌ಗಳು ನಗರದ ಬಿವಿಬಿ ಕಾಲೇಜಿನಲ್ಲಿ ಸ್ಥಾಪಿಸಿದ ಭದ್ರತಾ ಕೋಣೆ ಸೇರಿವೆ.
ಮತದಾನ ನಂತರ ಡಿ-ಮಾಸ್ಟರಿಂಗ್ ಕೇಂದ್ರಗಳಿಗೆ ಸೇರಿದ ಮತಯಂತ್ರಗಳು ಬುಧವಾರ ಬೆಳಗ್ಗೆ ಎಲ್ಲ ಎಂಟು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆಗಳ ಮತಯಂತ್ರಗಳನ್ನು ನಗರದ ಬಿವಿಬಿ ಕಾಲೇಜಿಗೆ ತರಲಾಯಿತು. ಬಸ್ಸಿನಲ್ಲಿ ಬಂದ ಮತಯಂತ್ರಗಳನ್ನು ಸುರಕ್ಷಿತ ಭದ್ರತಾ ಕೋಣೆಯಲ್ಲಿರಿಸಿ ಬೀಗಮುದ್ರೆ ಹಾಕಲಾಯಿತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತ್ತು ಅವರ ಏಜೆಂಟರುಗಳು ಹಾಗೂ ಚುನಾವಣೆ ವೀಕ್ಷಕರ ಸಮ್ಮುಖದಲ್ಲಿ ಎಲ್ಲ ಪ್ರಕ್ರಿಯೆಗಳು ನಡೆದವು. ಭದ್ರತಾ ಕೊಠಡಿಯಿಂದ ಒಳಕ್ಕೆ ಮತಯಂತ್ರ ಕೊಂಡೊಯ್ಯುವ ಪ್ರಕ್ರಿಯೆ ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಯಿತು.
ಬಿಗಿ ಭದ್ರತೆ: ಈ ಭದ್ರತಾ ಕೋಣೆಗಳಿಗೆ ಸಿಐಎಸ್‌ಎಫ್, ಕೆಎಸ್‌ಆರ್‌ಪಿ ಹಾಗೂ ರಾಜ್ಯ ಪೊಲೀಸ್ ತುಕಡಿಗಳಿಂದ ಅಗತ್ಯ ಭದ್ರತೆ ಒದಗಿಸಲಾಗಿದೆ. ಅರೇ ಸೇನಾ ಹಾಗೂ ಪೊಲೀಸ್ ಸಿಬ್ಬಂದಿ ಪ್ರತಿದಿನ ಮೂರು ಸರದಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಭದ್ರತಾ ಕೋಣೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಮತ ಎಣಿಕೆ ದಿನಾಂಕದವರೆಗೆ ಭದ್ರತಾ ಕೋಣೆಗಳು ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಇರಲಿವೆ.
ಈ ಸಂದರ್ಭದಲ್ಲಿ ಚುನಾವಣೆ ಸಾಮಾನ್ಯ ವೀಕ್ಷಕರಾದ ಸವೀನ್ ಬನ್ಸಾಲ್, ಜಿಲ್ಲಾ ಚುನಾವಣಾಧಿಕಾರಿ ಡಾ| ಎಚ್.ಆರ್. ಮಹಾದೇವ, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ಎಂಟು ವಿಧಾನಸಭೆ ಮತಕ್ಷೇತ್ರಗಳ ಸಹಾಯಕ ಚುನಾವಣಾಧಿಕಾರಿಗಳು ಇದ್ದರು.