ಬೀದರ: ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಮುಂಚಿತವಾಗಿ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್.
ಮಹಾದೇವ ಅವರು ಚುನಾವಣಾ ಮಾಸ್ಟರ್ ಟ್ರೇನರ್‌ಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣಾ ಅ ಧಿಕಾರಿಗಳ 3ನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತಗಟ್ಟೆ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮನವರಿಕೆ ಮಾಡಿಕೊಡಬೇಕು. ಮತದಾನದಂದು ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಮತಗಟ್ಟೆಗಳ ತಯಾರಿ, ಮತದಾರರೊಂದಿಗೆ ವರ್ತನೆ ಸೇರಿದಂತೆ ಚುನಾವಣೆ ಸುವ್ಯವಸ್ಥಿತವಾಗಿ ನಡೆಸಲು ಬೇಕಾಗುವ ಎಲ್ಲಾ ರೀತಿಯ ತರಬೇತಿ ನೀಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಮಾತನಾಡಿ, ಲೋಕಸಭೆ ಚುನಾವಣೆಗೆ ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಚುನಾವಣೆಯ ದಿನದಂದು ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿ ಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿ ಕಾರಿಗಳಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗದಂತೆ ನೋಡಿಕೋಳ್ಳಬೇಕು. ಈ ಬಗ್ಗೆ ಮತ್ತೂಂದು ಹಂತದಲ್ಲಿ ತರಬೇತಿ ಕಾರ್ಯಕ್ರಮ ನಡೆಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಚುನಾವಣಾ ಮಾಸ್ಟರ್ ಟ್ರೇನರ್ ಗೌತಮ ಅರಳಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಎರಡು ಬ್ಯಾಲೇಟ್‌ಗಳಿರುತ್ತವೆ. ಮತಗಟ್ಟೆ ಕೇಂದ್ರದಲ್ಲಿ ಅಂಗವಿಕಲರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆಗೆ ಸಂಬಂಧಿ ಸಿದ ಯಾವುದೇ ರೀತಿಯ ಗೊಂದಲಗಳಿದ್ದರೆ ಮುಂಚಿತವಾಗಿಯೇ ಪರಿಹರಿಸಿಕೊಳ್ಳಿರಿ ಎಂದು ಸಲಹೆ ನೀಡಿದರು.
ವಿದ್ಯುನ್ಮಾನ ಮತಯಂತ್ರಗಳ ಕಾರ್ಯನಿರ್ವಹಣೆ ವಿಧಾನ, ಅಣಕು ಮತದಾನ, ಮತಗಟ್ಟೆಯಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು, ಅರ್ಜಿ
ನಮೂನೆಗಳನ್ನು ಭರ್ತಿ ಮಾಡುವುದು. ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಬಗ್ಗೆ ವಿವರಣೆ ನೀಡಿದರು. ಜಿಲ್ಲೆಯ ಎಲ್ಲಾ ಚುನಾವಣಾ ಅಧಿಕಾರಿಗಳು, ಮಾಸ್ಟರ್ ಟ್ರೇನರ್‌ಗಳು ಇದ್ದರು.