ಬೀದರ: ಕಲ್ಯಾಣ ನಾಡಿನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 30 ಸಾವಿರ ಲೀಡ್ ನೀಡಿದ ಮತದಾರರು, ಈ ಬಾರಿ ಕೂಡ ಕಮಲಕ್ಕೆ ಸಾಥ್ ನೀಡುತ್ತಾರೆಯೇ ಎಂಬ ಚರ್ಚೆಗಳು ಎಲ್ಲಕಡೆ ನಡೆಯುತ್ತಿವೆ.
ಕಳೆದ ಕೆಲ ವಿಧಾನ ಸಭಾ ಚುನಾವಣೆಗಳಲ್ಲಿ ಕಲ್ಯಾಣ ನಾಡಿನ ಜನರು ಬೇರೆ ಬೇರೆ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಒಂದು ಅಭ್ಯರ್ಥಿಗೆ ಅಥವಾ ಒಂದೇ ಪಕ್ಷಕ್ಕೆ ಹೆಚ್ಚಾಗಿ ಇಲ್ಲಿನ ಜನರು ಅಧಿಕಾರ ನೀಡುತ್ತಿಲ್ಲ. ಜಿಲ್ಲೆಯಲ್ಲಿಯೇ ಜಾಣ ಮತದಾರರು ಎಂದು ಕೂಡ ಕಲ್ಯಾಣ ನಾಡಿನ ಜನರು ಕರೆಸಿಕೊಳ್ಳುತ್ತಿದ್ದಾರೆ. ಇಲ್ಲಿನ ಜನರು ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿಗೆ ಬಹುಮತ ನೀಡಿದ್ದು, ಇದೀಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಗೆ ಹೆಚ್ಚು ಮತಗಳು ಬರಬಹುದೆಂಬ ಚರ್ಚೆಯನ್ನು ಗ್ರಾಮೀಣ ಭಾಗಗಳ ಜನರು ಮಾಡುತ್ತಿದ್ದಾರೆ.
2009ರ ಲೋಕ ಸಭೆ ಚುನಾವಣೆಯಲ್ಲಿ ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದಿ|ಗುರುಪಾದಪ್ಪ ನಾಗಮಾರಪಳ್ಳಿ ಅವರಿಗೆ 44,913 ಮತಗಳು ಬಂದಿದ್ದವು. ಅದೇರೀತಿ ಕಾಂಗ್ರೆಸ್ ಅಭ್ಯರ್ಥಿ ದಿ| ಎನ್.ಧರ್ಮಸಿಂಗ್ ಅವರಿಗೆ 37,519 ಮತಗಳು ಬಂದಿದ್ದವು. ಅಲ್ಲದೆ, ಜೆಡಿಎಸ್ ಅಭ್ಯರ್ಥಿ ಸುಭಾಷ ತಿಪ್ಪಣ್ಣಾ ನೆಲಗೆ ಅವರು 5,303 ಮತಗಳನ್ನು ಪಡೆದಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ 71,705 ಮತಗಳು ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿ| ಎನ್.ಧರ್ಮಸಿಂಗ್ ಅವರಿಗೆ 41,686 ಮತಗಳ ಬಂದಿದ್ದವು. ಸರಿ ಸುಮಾರು 30,019 ಮತಗಳ ಅಂತರದ ಲೀಡ್ ಬಿಜೆಪಿಗೆ ಈ ಕ್ಷೇತ್ರದಲ್ಲಿ ಬಂದಿತ್ತು.
ಸದ್ಯ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷದ ಬಿ.ನಾರಾಯಣರಾವ್ ಶಾಸಕರಾಗಿದ್ದಾರೆ. ವಿಧಾನ ಸಭೆ ಚುನಾವಣೆಯಲ್ಲಿ ಬಿ.ನಾರಾಯಣರಾವ್ 61,425 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ 44,153 ಮತಗಳನ್ನು ಪಡೆದಿದ್ದರು. ಸದ್ಯ ಕ್ಷೇತ್ರದ ಎಲ್ಲಾಕಡೆಗಳಲ್ಲಿ ಲೋಕಸಭೆ ಚುನಾವಣೆ ಫಲಿತಾಂಶದ ಮಾತುಗಳು ಕೇಳಿಬರುತ್ತಿವೆ. ಬೂತ್ ಮಟ್ಟದ ಕಾರ್ಯಕರ್ತರು ಜಾತಿ, ಧರ್ಮವಾರು ಮತಗಳ ವಿಂಗಡನೆ ಮಾಡಿ ಪಕ್ಷದ ಮುಖಂಡರಿಗೆ ವರದಿ ನೀಡಿದ್ದಾರೆ. ಮತದಾನ ದಿನದಂದು ಜಾತಿವಾರು ಮತದಾರರ ಲೆಕ್ಕ ಹಾಕಿ ಸದ್ಯ ಕಾಂಗ್ರೆಸ್- ಬಿಜೆಪಿ ಪಕ್ಷದವರು ತಾವು ಹೆಚ್ಚಿನ ಲೀಡ್ ಪಡೆಯುವುದಾಗಿ ಹೇಳಿಕೊಳ್ಳುತ್ತಿದ್ದಾರೆ.
ಬಸವಕಲ್ಯಾಣ ಅಭಿವೃದ್ಧಿಗಾಗಿ ಖಂಡ್ರೆ ಕಟುಂಬ ಶ್ರಮಿಸಿದೆ. ಅಲ್ಲದೆ, ಕಲ್ಯಾಣ ಕ್ಷೇತ್ರದಲ್ಲಿ ಖಂಡ್ರೆ ಕುಟುಂಬದವರೊಂದಿಗೆ ಉತ್ತಮ ಬಾಂಧವ್ಯ ಇರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಲೀಡ್ ಬರುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಮೋದಿ ಅಲೆ ಹೆಚ್ಚಾಗಿದ್ದು, ಬಿಜೆಪಿ ಮತ್ತೆ ಲೀಡ್ ಪಡೆಯಲಿದೆ ಎಂದು ಹೇಳುತ್ತಿದ್ದಾರೆ. ಅಲ್ಲದೆ, ದೇಶಕ್ಕೆ ಉತ್ತಮ ಪ್ರಧಾನಿ ಆಯ್ಕೆಗೆ ಬಸವಕಲ್ಯಾಣ ಮತ್ತೂಮ್ಮೆ ಲೀಡ್ ನೀಡುವ ಮೂಲಕ ಇತಿಹಾಸ ಸೃಷ್ಟಿಸಲ್ಲಿದೆ ಎಂಬ ಅಭಿಪ್ರಾಯಗಳು ಇಲ್ಲಿ ಕೇಳಿ ಬರುತ್ತಿವೆ.
ಬೀದರ್ ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಏ.23ರಂದು ಮತದಾನ ನಡೆದಿದ್ದು, ಮೇ.23ರಂದು ಫಲಿತಾಂಶ ಹೊರಬರಲಿದೆ. ಬಸವಕಲ್ಯಾಣ ಯಾವ ಪಕ್ಷಕ್ಕೆ ಬಹುಮತ ನೀಡುತ್ತದೆ ಎಂಬುದನ್ನು ಕ್ಷೇತ್ರದ ಜನರು ಕಾತುರದಿಂದ ಕಾಯುತ್ತಿದ್ದಾರೆ.
ದುರ್ಯೋಧನ ಹೂಗಾರ