Advertisement

Bidar Lok Sabha constituency; 18 ಸಲ ಚುನಾವಣೆಯಾದರೂ ಸಂಸದರಾಗಿದ್ದು ಆರೇ ಮಂದಿ

11:43 PM Mar 20, 2024 | Team Udayavani |

ಬೀದರ್‌: ಕರ್ನಾಟಕದ ಮುಕುಟ ಬೀದರ ಲೋಕಸಭೆ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಸಮಾನ ನೆಲೆ ಒದಗಿಸಿದ ಕ್ಷೇತ್ರ. ಸತತ ಐದು ಬಾರಿ, ಹ್ಯಾಟ್ರಿಕ್‌ ಗೆಲುವು ಮತ್ತು ಮಾಜಿ ಸಿಎಂ ಸೇರಿ ಘಟಾನುಘಟಿಗಳ ಸ್ಪರ್ಧೆಯಿಂದ ರಾಜಕಾರಣದ ಗಮನ ಸೆಳೆದಿರುವ ಈ ಕ್ಷೇತ್ರ ಈವರೆಗೆ 18 ಚುನಾವಣೆಗಳನ್ನು ಎದುರಿಸಿದ್ದು, ಆಯ್ಕೆಯಾದದ್ದು ಕೇವಲ 6 ಜನರಷ್ಟೇ. ಈ ಸಲ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಂದ ಅಖಾಡಕ್ಕೆ ಯಾರು ಇಳಿಯುತ್ತಾರೆ ಎಂಬುದು ಕುತೂಹಲ ಇದೆ.

Advertisement

ಕಲಬುರ್ಗಿ ಜಿಲ್ಲೆಯ ಎರಡು ಕ್ಷೇತ್ರ ಸೇರಿ ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಐವರು ಬಿಜೆಪಿ ಮತ್ತು ಮೂವರು ಕಾಂಗ್ರೆಸ್‌ ಶಾಸಕರಿದ್ದಾರೆ. 2019ರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಶಾಸಕರಿದ್ದರು.

ಐವತ್ತು ವರ್ಷಗಳ ಕಾಲ ಮೀಸಲು ಕ್ಷೇತ್ರವಾಗಿದ್ದ ಬೀದರ್‌ ಲೋಕಸಭೆ ಭಾರತೀಯ ಸಂಸತ್ತಿನಲ್ಲಿ ಹಲವು ದಾಖಲೆಗಳಿಂದ ಗುರುತಿಸಿಕೊಂಡಿದೆ. ಸಂವಿಧಾನ ರಚನೆ ಅನಂತರದ 1952ರ ಮೊದಲ ಚುನಾವಣೆಯಲ್ಲಿ ಜವಾಹರಲಾಲ್‌ ನೆಹರೂ ಅವರ ಆಪ್ತ ಗೆಳೆಯ ಶೌಕತುಲ್ಲಾ ಶಾ ಅನ್ಸಾರಿ ಗೆದ್ದಿದ್ದರು. ಎರಡು ಗಡಿ ರಾಜ್ಯಗಳನ್ನು ಹಂಚಿಕೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 18 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್‌, 7 ಬಾರಿ ಬಿಜೆಪಿ ಗೆಲುವು ಸಾಧಿಸಿದೆ.

ಸತತ 10 ಬಾರಿ ಗೆದ್ದು ಕಾಂಗ್ರೆಸ್‌ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲಿ ಅನಂತರ ದಿ| ರಾಮಚಂದ್ರ ವೀರಪ್ಪ ಸತತ ಐದು ಬಾರಿ ಕಮಲ ಅರಳಿಸಿದ್ದರು. ಬಳಿಕ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಎರಡು ಬಾರಿ ಕ್ಷೇತ್ರದಲ್ಲಿ ಹಿಡಿತ ಸಾಧಿ ಸಿವೆ. ಸದ್ಯ ಕೇಂದ್ರದಲ್ಲಿ ಸಚಿವರಾಗಿರುವ ಭಗವಂತ ಖೂಬಾ ಕ್ಷೇತ್ರದ ಸಂಸದರಾಗಿದ್ದಾರೆ. ಶೌಕತುಲ್ಲಾ ಅನ್ಸಾರಿ (ಒಂದು ಬಾರಿ), ಶಂಕರದೇವ (ಮೂರು), ರಾಮಚಂದ್ರಪ್ಪ ವೀರಪ್ಪ (7 ಬಾರಿ), ನರಸಿಂಗರಾವ್‌ ಹುಲ್ಲಾ (ನಾಲ್ಕು ಬಾರಿ), ಧರಂಸಿಂಗ್‌ (ಒಂದು ಬಾರಿ) ಮತ್ತು ಭಗವಂತ ಖೂಬಾ ಎರಡು ಬಾರಿ ಗೆದಿದ್ದಾರೆ.

ಬಿಜೆಪಿ ಪಕ್ಷ ಜೆಡಿಎಸ್‌ನ ಬೆಂಬಲದೊಂದಿಗೆ ಮತ್ತೆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್‌ ತನ್ನ ಹಿಡಿತ ಸಾಧಿಸಲು ತಂತ್ರ ರೂಪಿಸುತ್ತಿದೆ.

Advertisement

ಜಾತಿ ಲೆಕ್ಕಾಚಾರ ಹೇಗಿದೆ?
ಪ್ರಮುಖ ಎಲ್ಲ ಧರ್ಮಿಯರಿಗೆ ಸಂಸತ್‌ ಪ್ರವೇಶಿಸಲು ಕ್ಷೇತ್ರ ಅವಕಾಶ ನೀಡಿದೆ. ಕ್ಷೇತ್ರದಲ್ಲಿ ಅಧಿ ಕ ಸಂಖ್ಯೆಯಲ್ಲಿ ಇರುವ ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಈ ಎರಡು ಸಮುದಾಯ ಯಾವ ಪಕ್ಷದ ಕಡೆಗೆ ಒಲವು ತೋರಿಸುತ್ತದೆಯೋ ಅವರಿಗೆ ಗೆಲುವು ಖಚಿತ. ಈ ಬಾರಿ ಎರಡೂ ಪಕ್ಷಗಳಿಂದ ಲಿಂಗಾಯತ ಅಭ್ಯರ್ಥಿಗಳೇ ಮುಖಾಮುಖೀಯಾಗುವುದಂತು ನಿಶ್ಚಿತ.

-ಶಶಿಕಾಂತ ಬಂಬುಳಗೆ

 

Advertisement

Udayavani is now on Telegram. Click here to join our channel and stay updated with the latest news.

Next