Advertisement

Udupi-Chikkamagaluru ಲೋಕಸಭಾ ಕ್ಷೇತ್ರ: ಹಳೇ ಹುಲಿಗಳ ನಡುವೆ ಹೊಸ ಯುದ್ಧ

12:40 AM Apr 17, 2024 | Team Udayavani |

ಉಡುಪಿ: ದಶಕಗಳ ಹಿಂದೆ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಯಾಗಿದ್ದವರೇ ಇದೀಗ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಕಣದಲ್ಲಿ ರಾಷ್ಟ್ರೀಯ ಪಕ್ಷಗಳ ಸ್ಪರ್ಧಾಳುಗಳು. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಈವರಿರ್ವರಿಗೂ ಉಡುಪಿ ರಾಜಕೀಯ ಕರ್ಮಭೂಮಿ.

Advertisement

ಈ ಲೋಕಸಭಾ ಕ್ಷೇತ್ರದ ಭಾಗವಾದ ಉಡುಪಿ ವಿಧಾನ ಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. 2008ರಿಂದ 2023ರವರೆಗೆ ಕಾಂಗ್ರೆಸ್‌ಗೆ ಲೀಡ್‌ ಬಂದಿರುವುದು ಎರಡು ಚುನಾವಣೆಯಲ್ಲಿ ಮಾತ್ರ. 2012ರ ಲೋಕಸಭೆ ಉಪಚುನಾವಣೆಯಲ್ಲಿ 11,423 ಹಾಗೂ 2013ರ ವಿಧಾನಸಭೆ ಚುನಾವಣೆಯಲ್ಲಿ 39,524 ಮತಗಳ ಲೀಡ್‌ ಕಾಂಗ್ರೆಸ್‌ಗೆ ದೊರೆತಿತ್ತು. ಉಳಿದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿಯೇ ಮುನ್ನಡೆ ಸಾಧಿಸಿದೆ.

2019ರ ಲೋಕಸಭೆ ಚುನಾವಣೆಯಲ್ಲಿ ದಾಖಲೆಯ 44,261 ಮತಗಳ ಲೀಡ್‌ ಬಿಜೆಪಿ ಪಡೆದಿತ್ತು. 2023ರ ವಿಧಾನಸಭೆ ಚುನಾವಣೆಯಲ್ಲಿ 32,775 ಮತಗಳ ಲೀಡ್‌ ಬಿಜೆಪಿಗೆ ಬಂದಿತ್ತು.

2008ರಿಂದ ಈವರೆಗೂ ನಡೆದ 1 ಉಪಚುನಾವಣೆ ಹಾಗೂ 7 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯೇ ಮೇಲುಗೈ ಸಾಧಿಸಿದ್ದರಿಂದ ಈವರೆಗೂ ಈ ಕ್ಷೇತ್ರ ಬಿಜೆಪಿಗೆ ಭದ್ರಕೋಟೆಯಾಗಿತ್ತು. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳಿಂದ ಕಣದಲ್ಲಿರುವ ಅಭ್ಯರ್ಥಿಗಳು ಜನಮನ್ನಣೆಯನ್ನು ಗಳಿಸಿದವರೇ ಆಗಿರುವುದರಿಂದ ಫ‌ಲಿತಾಂಶ ಹೇಗಿರಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಉತ್ಸಾಹ ಏರುತ್ತಿದೆ
ಅಂಬೇಡ್ಕರ್‌ ಜಯಂತಿಯನ್ನು ಚುನಾವಣೆ ಪ್ರಚಾರದ ಪ್ರಮುಖ ಅಸ್ತ್ರವಾಗಿ ಎರಡೂ ಪಕ್ಷಗಳು ಬಳಸಿಕೊಂಡಿವೆ. ಕಾಂಗ್ರೆಸ್‌ ಬೂತ್‌ ಮಟ್ಟದಲ್ಲಿ ಜಯಂತಿಯಂದು ವಿಶೇಷ ಪ್ರಚಾರ ನಡೆಸಿದರೆ, ಬಿಜೆಪಿ ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರದಲ್ಲಿ ಅಂಬೇಡ್ಕರ್‌ ಜಯಂತಿ ನಡೆಸಿದೆ. ಕ್ಷೇತ್ರಾದ್ಯಂತ ಎರಡೂ ಪಕ್ಷಗಳಿಂದಲೂ ಬಿರುಸಿನ ಪ್ರಚಾರ ಆರಂಭವಾಗಿದೆ. ಜನಪ್ರತಿನಿಧಿಗಳು, ಮುಖಂಡರು ಪ್ರಚಾರ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜ್ಯ, ರಾಷ್ಟ್ರನಾಯಕರು ಒಂದು ಹಂತದ ಟಾನಿಕ್‌ ನೀಡಿ ಹೋಗಿದ್ದಾರೆ.

Advertisement

ಒಮ್ಮೆ ಟ್ರೆಂಡ್‌ ಬದಲಾಗಿತ್ತು
ಪ್ರತೀ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಲೀಡ್‌ ಹೆಚ್ಚುತ್ತಲೇ ಬಂದಿದೆ. ಆದರೆ 2012ರ ಉಪ ಚುನಾವಣೆಯು ಕಾಂಗ್ರೆಸ್‌ಗೆ ಹೆಚ್ಚು ಲೀಡ್‌ ಕೊಟ್ಟಿದೆ. 2009ರಲ್ಲಿ ಬಿಜೆಪಿಯ ಡಿ.ವಿ.ಸದಾನಂದ ಗೌಡರಿಗೆ 5,225, ಶೋಭಾ ಕರಂದ್ಲಾಜೆಯವರಿಗೆ 2014ರಲ್ಲಿ 32,674, 2019ರಲ್ಲಿ 44,261 ಲೀಡ್‌ ನೀಡಿತ್ತು. 2012ರ ಉಪಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆಯವರಿಗೆ 11,423 ಲೀಡ್‌ ಸಿಕ್ಕಿತ್ತು.

ಕಳೆದ ಚುನಾವಣೆಯಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿತ್ತು. ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕಣದಲ್ಲಿದ್ದರು. ಈ ಬಾರಿ ಕಾಂಗ್ರೆಸ್‌ನ ಅಭ್ಯರ್ಥಿಯೇ ಕಣದಲ್ಲಿದ್ದಾರೆ ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿಯಾಗಿದ್ದರೂ ಬಿಜೆಪಿ ತನ್ನ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಿದೆ. ಆದರೆ ಈ ಜೆಡಿಎಸ್‌ ಮತ ತೀರಾ ಕಡಿಮೆಯಿದೆ. ಈ ಬಾರಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಜಾತಿಯೂ ಚುನಾವಣೆಯ ಪ್ರಮುಖ ಅಸ್ತ್ರವಾಗುವ ಸಾಧ್ಯತೆಯಿದೆ.

ಪರಿಚಿತ ಮುಖ
ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್‌ ಹೆಗ್ಡೆ ಹಾಗೂ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಇಬ್ಬರಿಗೂ ಈ ಕ್ಷೇತ್ರದ ಮೇಲೆ ಹಿಡಿತವಿದೆ. ಕಾರಣ ದಶಕಗಳಿಂದ ಇಲ್ಲಿಯೇ ಇದ್ದು ರಾಜಕಾರಣ ಮಾಡಿಕೊಂಡು ಬಂದವರು. ಕ್ಷೇತ್ರಕ್ಕೆ ಇಬ್ಬರೂ ಹೊಸಬರಲ್ಲ ಹಾಗೂ ಕ್ಷೇತ್ರದಲ್ಲಿ ಇಬ್ಬರ ಹೆಸರು ಕೇಳದವರೂ ಇರಲಿಕ್ಕೆ ಇಲ್ಲ. ಹೀಗಾಗಿ ಮತದಾರರಿಗೆ ಮುಖ ಪರಿಚಯ ಮಾಡುವ ಆವಶ್ಯಕತೆ ಎರಡೂ ಪಕ್ಷಕ್ಕೂ ಇಲ್ಲ. ಇನ್ನೊಂದು ಸಾಮ್ಯತೆಯೆಂದರೆ ಇಬ್ಬರೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next