Advertisement

ಕದನ ಕಲಿಗಳ ಮೇಲೆ ಬೆಟ್ಟಿಂಗ್‌

12:44 PM Apr 25, 2019 | Naveen |

ಔರಾದ: ಲೋಕಸಭೆ ಚುನಾವಣೆ ಮತದಾನ ಮುಗಿದ ಬೆನ್ನಲ್ಲೇ ಗಡಿ ತಾಲೂಕಿನಲ್ಲಿ ಇದೀಗ ಮಗ ಗೆಲ್ತಾನಾ? ಅಥವಾ ಮೊಮ್ಮಗ ಗೆಲ್ತಾನಾ ಎನ್ನುವ ರಾಜಕೀಯ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

Advertisement

ತಾಲೂಕಿನೊಂದಿಗೆ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ರಕ್ತ ಸಂಬಂಧವಿದೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಔರಾದ ಪಟ್ಟಣದ ಮಗ ಹಾಗೂ ನಿವಾಸಿ. ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ತಾಲೂಕಿನ ನಾಗೂರ ಗ್ರಾಮದ ಮೊಮ್ಮಗ. ಹೀಗಾಗಿ ತಾಲೂಕಿನಲ್ಲಿ ಮಗ ಗೆಲ್ತಾನಾ? ಇಲ್ಲವೇ ಮೊಮ್ಮಗ ಗೆಲ್ತಾನಾ ಎಂಬ ರಾಜಕೀಯ ಚರ್ಚೆ ಬಿರುಸುಗೊಂಡಿದೆ.

ಚುನಾವಣೆ ಘೋಷಣೆಯಾದ ದಿನದಿಂದ ಯಾವ ಗ್ರಾಮದಲ್ಲಿ ಎಷ್ಟು ಮತದಾರರು ಇದ್ದಾರೆ?, ಎಷ್ಟು ಮತಗಳು ನಮ್ಮ ಪಕ್ಷಕ್ಕೆ ಬೀಳುತ್ತವೆ? ಮತದಾರರನ್ನು ನಮ್ಮ ಪಕ್ಷದ ಕಡೆಗೆ ಸೆಳೆಯಲು ಏನು ಮಾಡಬೇಕೆಂದು ಬಿಜೆಪಿ-ಕಾಂಗ್ರೆಸ್‌ ಮುಖಂಡರು ಹಾಕುತ್ತಿದ್ದ ಲೆಕ್ಕಾಚಾರಕ್ಕೆ ಮಂಗಳವಾರ ತೆರೆ ಬಿದ್ದಿದ್ದು, ಮತದಾರ ಯಾರಿಗೆ ಮಣೆ ಹಾಕಲಿದ್ದಾನೆ ಎನ್ನುವುದು ಫಲಿತಾಂಶದ ನಂತರವೇ ಗೊತ್ತಾಗಲಿದೆ.

ಮಂಗಳವಾರವಷ್ಟೇ ಮತದಾನ ಮಾಡಿದ ಮತದಾರರು ಹಾಗೂ ತಿಂಗಳಿಂದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎರಡು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ನಾಯಕರ ಸೋಲು-ಗೆಲುವಿನ ಲೆಕ್ಕಾಚಾರದ ಮೇಲೆ ಟ್ರಬಲ್ ಆಗಿ ಮಾತಾಡುತ್ತಿರುವುದು ಒಂದೆಡೆಯಾದರೆ, ಇನ್ನೊಂದಡೆ ಎರಡೂ ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್‌ ಕೂಡ ಜೋರಾಗಿದೆ ಎನ್ನುವ ಸದ್ದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಭಾದಗಲ್ಲಿನ ಎರಡು ಪಕ್ಷದ ಮುಖಂಡರು ನಮ್ಮ ನಾಯಕರೇ ಗೆಲ್ಲುತ್ತಾರೆ ಎಂದು ಆತ್ಮವಿಶ್ವಾಸದಿಂದ ಹೇಳುವುದಲ್ಲದೆ ಹೋಟೆಲ್ ಅಂಗಡಿ, ಬಸ್‌ ನಿಲ್ದಾಣ,ಪ್ರಮುಖ ವೃತ್ತಗಳ ಬಳಿ ಹಾಗೂ ಸಾರ್ವಜನಿಕ ಸ್ಥಳದಲ್ಲಿನ ಕಟ್ಟೆಯಲ್ಲಿ ಕುಳಿತು ತಮ್ಮ ವಾರ್ಡ್‌ ಬೂತ್‌ನಲ್ಲಿ ಮತದಾನ ನಡೆದ ಬಗ್ಗೆ ಯಾವ ಪಕ್ಷಕ್ಕೆ ಎಷ್ಟು ಮತಗಳು ಬೀಳುತ್ತದೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿವೆ.

Advertisement

ಬೀಗುತ್ತಿರುವ ಉಭಯ ಮುಖಂಡರು: ಬಿಜೆಪಿ ಮುಖಂಡರು ಪ್ರಧಾನಿ ಮೋದಿ ಅಲೆಯಲ್ಲಿ ಗೆಲುವು ನಮ್ಮದೇ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಧರಂಸಿಂಗ್‌ ಸೋಲಿಸಿದ ನಮ್ಮ ನಾಯಕರು ಈ ಬಾರಿ ಭಾಲ್ಕಿ ತಾಲೂಕಿನ ಶಾಸಕರಿಗೆ ಸೋಲುಣಿಸುವುದರಲ್ಲಿ ಎರಡು ಮಾತಿಲ್ಲವೆಂದು ಬೀಗುತ್ತಿದ್ದಾರೆ.

ಆದರೆ ಇತ್ತ ತಾಲೂಕಿನ ಇತಿಹಾಸದಲ್ಲಿಯೇ ಕೈ ಪಕ್ಷದ ನಾಯಕರು ಕಠಿಣ ಪರಿಶ್ರಮ ಮಾಡಿದ್ದಾರೆ. ಅತಿ ಹೆಚ್ಚು ಶಾಸಕರು ನಮ್ಮ ಪಕ್ಷದವರೇ ಆಗಿದ್ದಾರೆ. ಈಶ್ವರ ಖಂಡ್ರೆ ಉತ್ತಮ ವ್ಯಕ್ತಿತ್ವ ಉಳ್ಳ ನಾಯಕರಾಗಿದ್ದಾರೆ. ತಂದೆ ಭೀಮಣ್ಣ ಖಂಡ್ರೆ ಸಾರಿಗೆ ಸಚಿವರಾಗಿದ್ದಾಗ ಮಾಡಿದ ಅಭಿವೃದ್ಧಿ ಕೆಲಸ ಹಾಗೂ ಈಶ್ವರ ಖಂಡ್ರೆ ಸಚಿವರಾಗಿದ್ದಾಗ ಮಾಡಿದ ಕೆಲಸಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎನ್ನುತ್ತಿದ್ದಾರೆ.

ಆದರೆ ವಿಜಯಲಕ್ಷ್ಮೀ ಯಾರ ಪಾಲಿಗೆ ಒಲಿಯುತ್ತಾಳೆ ಎನ್ನುವುದು ಮಾತ್ರ ಇನ್ನೂ ಇನ್ನೂ ಒಂದು ತಿಂಗಳ ನಂತರವೇ ತಿಳಿದುಬರಬೇಕಿದೆ.

ಬೆಟ್ಟಿಂಗ್‌ ಹಾವಳಿ: ಬಿಜೆಪಿ ಹಾಗೂ ಕಾಂಗ್ರೆಸ್‌ ಮುಖಂಡರು ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಖಚಿತವಾಗಿದೆ ಎಂದು ಸಾರ್ವಜನಿಕ ಸ್ಥಳದಲ್ಲಿಯೇ ಕುಳಿತು ಬೆಟ್ಟಿಂಗ್‌ ಹಚ್ಚುತ್ತಿರುವುದು ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನಡೆಯುತ್ತಿವೆ. ಇನ್ನೂ ವಿವಿಧ ಪಕ್ಷದ ಮುಖಂಡರು ತಮ್ಮ ನಾಯಕರಿಗೆ ತಮ್ಮ ವಾರ್ಡ್‌ ಹಾಗೂ ಗ್ರಾಮದಲ್ಲಿನ ನಡೆದ ಮತದಾನದ ಪ್ರಮಾಣ ತಿಳಿಸಲು ಅವರಿರುವ ಸ್ಥಳಕ್ಕೆ ಹೋಗಿದ್ದಾರೆ ಎನ್ನುವ ಮಾತುಗಳಿವೆ.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆ ಇದೆ. ಈ ಅಲೆಯಲ್ಲಿ ನಮ್ಮ ಅಭ್ಯರ್ಥಿಗೆ ಗೆದ್ದೇ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ರೀತಿಯ ಸಂದೇಹ ಬೇಡ.
•ಸತೀಶ ಪಾಟೀಲ,
ಬಿಜೆಪಿ ತಾಲೂಕು ಅಧ್ಯಕ್ಷ

ಬೀದರ ಜಿಲ್ಲೆಯಲ್ಲಿ ಮೋದಿ ಮೋಡಿ ನಡೆಯುವುದಿಲ.್ಲ ಇಲ್ಲಿನ ಜನರು ಉತ್ತಮ ಅಭಿವೃದ್ಧಿ ಕೆಲಸ ಮಾಡುವ ವ್ಯಕ್ತಿ ಆಯ್ಕೆ ಮಾಡುತ್ತಾರೆ. ಬಿಜೆಪಿ ಪಕ್ಷದವರು ಏನೇ ಹೇಳಿದ್ರೂ ಗೆಲುವು ಖಂಡಿತವಾಗಿ ನಮ್ಮದೇ. ಇದರಲ್ಲಿ ಅನುಮಾನವೇ ಬೇಡ.
•ರಾಜಕುಮಾರ ಹಲ್ಬರ್ಗೆ,
ಕಾಂಗ್ರೆಸ್‌ ತಾಲೂಕು ಅಧ್ಯಕ್ಷ

ರವೀಂದ್ರ ಮುಕ್ತೇದಾರ್‌

Advertisement

Udayavani is now on Telegram. Click here to join our channel and stay updated with the latest news.

Next