Advertisement

ಲೋಕ ಸಮರ: ಶುರುವಾಯ್ತು ಲೆಕ್ಕಾಚಾರ

12:34 PM Apr 25, 2019 | Naveen |

ಬೀದರ: ಜಿದ್ದಾಜಿದ್ದಿನ ಕಣ ಎಂದೇ ಗುರುತಿಸಿಕೊಂಡ ಬೀದರ ಲೋಕಸಭೆ ಚುನಾವಣೆ ಮತದಾನ ಮಂಗಳವಾರ ಮುಗಿದಿದ್ದು, ಇದೀಗ ರಾಜಕೀಯ ಪಕ್ಷಗಳು ಫಲಿತಾಂಶದ ಲೆಕ್ಕಾಚಾರ ಶುರು ಮಾಡಿವೆ.

Advertisement

ಈ ಚುನಾವಣೆಯಲ್ಲಿ ಕ್ಷೇತ್ರದಿಂದ ಒಟ್ಟು 22 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಚುನಾವಣೆ ಕಣದಲ್ಲಿ ಉಳಿದುಕೊಂಡಿದ್ದರು. ಈ ಮಧ್ಯೆ ಮರು ಆಯ್ಕೆ ಬಯಸಿದ ಬಿಜೆಪಿ ಪಕ್ಷದ ಹಾಲಿ ಸಂಸದ ಭಗವಂತ ಖೂಬಾ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶತಾಯಗತಾಯ ಗೆಲುವು ಸಾಧಿಸಲೇಬೇಕು ಎಂದು ಇಬ್ಬರು ಅನೇಕ ರಾಜಕೀಯ ರಣತಂತ್ರಗಳು ಈ ಚುನಾವಣೆಯಲ್ಲಿ ಹೆಣೆದಿದ್ದರು. ಮತದಾನದ ಕೊನೆಯವರೆಗೂ ಇಬ್ಬರು ಅಭ್ಯರ್ಥಿಗಳು ಕ್ಷೇತ್ರದ ಎಲ್ಲ ಮತ ಕೇಂದ್ರಗಳ ಕಡೆ ನಿಗಾವಹಿಸಿದ್ದು ವಿಶೇಷವಾಗಿತ್ತು.

ರಾಜಕೀಯ ವಿಭಿನ್ನ ಲೆಕ್ಕಾಚಾರ: ಈ ಚುನಾವಣೆಯಲ್ಲಿ 1,72,949 ಹೊಸ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಯುವ ಮತದಾರರ ಕುರಿತು ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನ ಲೆಕ್ಕಾಚಾರ ನಡೆಯುತ್ತಿದೆ. ಹೆಚ್ಚಿನ ಮತದಾನಕ್ಕೆ ಯುವ ಮತದಾರರು ಕಾರಣ ಎಂಬ ನಂಬಿಕೆ ಬಿಜೆಪಿ ಮುಖಂಡರು ವಾದಿಸುತ್ತಿದ್ದಾರೆ. ಯುವ ಮತದಾರರು ಪ್ರಧಾನಿ ಮೋದಿ ಬಗ್ಗೆ ಗೌರವ ಹೊಂದಿದ್ದು, ಅವರು ಬಿಜೆಪಿ ಪರವಾಗಿ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಪಕ್ಷ ಈ ಬಾರಿ ಮುನ್ನಡೆ ಸಾಧಿಸುವುದು ಖಚಿತ ಎಂಬ ವಾದ ಬಿಜೆಪಿ ಮುಖಂಡರು ಮಂಡಿಸುತ್ತಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಮತದಾನದ ಪ್ರಮಾಣದಲ್ಲಿ ಏರಿಕೆ ಆಗಿದ್ದು, ಇದು ಬಿಜೆಪಿಗೆ ಲಾಭವಾಗುತ್ತದೆ ಎಂದು ಹೇಳುತ್ತಿದ್ದಾರೆ.

ಆದರೆ, ಈ ಬಾರಿ ಮತದಾನದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಕ್ಕೆ ರಾಜ್ಯದ ಮೈತ್ರಿ ಸರ್ಕಾರದ ಜನಪ್ರಿಯ ಯೋಜನೆಗಳು ಕಾರಣ ಎಂಬ ವಾದ ಕೂಡ ಕಾಂಗ್ರೆಸ್‌ ನಾಯಕರದ್ದಾಗಿದೆ. ಮತದಾನದಲ್ಲಿ ಏರಿಕೆಯಿಂದ ಬಿಜೆಪಿಗೆ ಲಾಭವಾಗದು. ಯುವ ಮತದಾರರು ಒಂದಷ್ಟು ಸಂಖ್ಯೆಯಲ್ಲಿ ಅತ್ತ ವಾಲಿದರೂ, ಮತದಾರರಲ್ಲಿ ಹೆಚ್ಚಿನವರು ಕಾಂಗ್ರೆಸ್‌ನತ್ತ ಇದ್ದಾರೆ ಎಂಬುವುದು ಕೈ ಪಾಳೆಯದ ನಾಯಕರ ವಾದವಾಗಿದೆ.

ಆಯಾ ಪ್ರದೇಶಗಳಲ್ಲಿ ಚಲಾವಣೆ ಆಗಿರುವ ಮತಗಳ ಸಂಖ್ಯೆ ಆಧರಿಸಿ ಫಲಿತಾಂಶ ಲೆಕ್ಕ ಹಾಕುವ ಕಸರತ್ತು ಎರಡು ಪಕ್ಷದವರು ಮಾಡುತ್ತಿದ್ದಾರೆ. ಒಂದೇ ಧರ್ಮದ ಜನರು ಹೆಚ್ಚು ಸಂಖ್ಯೆಯಲ್ಲಿರುವ ಪ್ರದೇಶದಲ್ಲಿ ನಡೆದಿರುವ ಮತದಾನ, ವಿವಿಧ ಜಾತಿಗಳ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಮತದಾನಕ್ಕೆ ವ್ಯಕ್ತವಾಗಿರುವ ಪ್ರತಿಕ್ರಿಯೆ ಇವೆಲ್ಲವನ್ನೂ ಆಧರಿಸಿ ಫಲಿತಾಂಶ ಊಹೆ ಮಾಡಲಾಗುತ್ತಿದೆ. ಆದರೂ ಕೂಡ ಎರಡು ಪಕ್ಷದವರು ಖಚಿತವಾಗಿ ನಾವೇ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುವುದು ಕಂಡು ಬರುತ್ತಿಲ್ಲ.

Advertisement

ಪ್ರಯಾಣ ವ್ಯವಸ್ಥೆ ವರವಾಗುವುದೇ?
ಚುನಾವಣೆ ಕಣದಲ್ಲಿನ ಅಭ್ಯರ್ಥಿಗಳು ಬೆಂಗಳೂರು, ಮುಂಬೈ, ಪುಣೆ, ಹೈದ್ರಾಬಾದ ಸೇರಿದಂತೆ ಮತ್ತಿತರ ನಗರಗಳಲ್ಲಿರುವ ಇಲ್ಲಿನ ಮತದಾರರಿಗೆ ಊರಿಗೆ ಬಂದು, ಮತ ಚಲಾಯಿಸಿ ಹೋಗುವುದಕ್ಕೆ ಪ್ರಯಾಣ ವ್ಯವಸ್ಥೆ ಮಾಡಿರುವುದು ತಿಳಿದುಬಂದಿದ್ದು, ಕೆಲವರು ಬಸ್ಸಿನಲ್ಲಿ ಪ್ರಯಾಣಿಸಿ ಬಂದರೆ, ಇನ್ನು ಕೆಲವರು ರೈಲು ಮಾರ್ಗವಾಗಿ ಬಂದು ಹಕ್ಕು ಚಲಾಯಿಸಿದ್ದಾರೆ. ಈ ತಂತ್ರಗಾರಿಕೆ ಯಾವ ಪಕ್ಷಕ್ಕೆ ಲಾಭ ತಂದುಕೊಡುವುದೇ ಎಂಬ ಕುತೂಹಲವೂ ರಾಜಕೀಯ ಪಕ್ಷಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಹೆಚ್ಚಿದ ಕುತೂಹಲ
ಲೋಕಸಭೆ ಚುನಾವಣೆಯಲ್ಲಿ ಸ್ವಲ್ಪಮಟ್ಟಿಗೆ ಮತದಾರರಲ್ಲಿ ಉತ್ಸಾಹ ವ್ಯಕ್ತವಾಗಿದೆ. ಇಲ್ಲಿ ಮತದಾನದ ಪ್ರಮಾಣದಲ್ಲಿ ಶೇ.2.65 ಹೆಚ್ಚಳ ದಾಖಲಾಗಿದೆ. ಇದು ಈ ಕ್ಷೇತ್ರದ ಫಲಿತಾಂಶ ಕುರಿತು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮೊದಲ ಬಾರಿಗೆ ಲೋಕಸಭೆ ಚುನಾವಣೆ ಅಖಾಡಕ್ಕಿಳಿದಿರುವ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾಗೆ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಮತದಾನದಲ್ಲಿ ಏರಿಕೆ ಯಾರಿಗೆ ಅನುಕೂಲ ಮಾಡಿಕೊಡಬಹುದು ಎಂಬ ಕುತೂಹಲ ಜಿಲ್ಲೆಯಾದ್ಯಂತ ಮೂಡಿದೆ.

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next