ಬೀದರ: ಶ್ರಮ ಜೀವಿಗಳಾದ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ನ್ಯಾಯುಯುತವಾಗಿ ಸಿಗಬೇಕಾದ ಎಲ್ಲ ಸೌಕರ್ಯಗಳು ಲಭ್ಯವಾಗಬೇಕು ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಯಮನಪ್ಪ ಕೆ. ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಇತರ ನಿರ್ಮಾಣ ಮತ್ತು ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆ ನಿಮಿತ್ತ ಕಾನೂನು ಅರಿವು-ನೆರವು ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಬೇಕು. ಜತೆಗೆ ಗುರುತಿನ ಚೀಟಿ ಪಡೆದುಕೊಳ್ಳಬೇಕು. ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ನೀಡಬೇಕು. ತಾವು ಕೆಲಸ ಮಾಡುವ ಕಂಪನಿಗಳಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಿರಂತರ ತಮ್ಮ ಜತೆಗೆ ಇರುತ್ತದೆ ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಪ್ರಸನ್ನಕುಮಾರ ಮಾತನಾಡಿ, ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ ಅನೇಕ ಕಾಯ್ದೆ ರೂಪಿಸಿದ್ದು, ಹತ್ತು ಹಲವು ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. 1ನೇ ತರಗತಿಯಿಂದ ಸ್ವಾತಕೋತ್ತರ ತರಗತಿವರೆಗೆ ಪ್ರತಿ ವರ್ಷ ಇಲಾಖೆಯಿಂದ ಹಣ ನೀಡಲಾಗುತ್ತದೆ. ಮದುವೆಗಾಗಿ ಕೂಡ ಆರ್ಥಿಕ ಸಹಾಯ ಕೊಡಲಾಗುತ್ತಿದೆ ಎಂದು ಹೇಳಿದರು.
ಬೀದರ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ ವಾಗರಾಜ, ಖಜಾಂಚಿ ಬಸಮ್ಮ ಮಾತನಾಡಿದರು.
ವಕೀಲರ ಸಂಘದ ಉಪಾಧ್ಯಕ್ಷ ಪ್ರಕಾಶ ವಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಧನರಾಜ ಬಿರಾದಾರ, ಕರ್ನಾಟಕ ಕಟ್ಟಡ ಇತರೆ ನಿರ್ಮಾಣ ಮತ್ತು ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪಂಢರಿ ಪೂಜಾರಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕ ಶಂಕ್ರಪ್ಪ ಜನಕಟ್ಟಿ ಮತ್ತು ಕೂಲಿ ಕಾರ್ಮಿಕರು ಇದ್ದರು.