Advertisement

ಪಶು ವಿವಿಗೂ ತಟ್ಟಿತು ನೀರಿನ ಬರ

11:02 AM May 13, 2019 | Team Udayavani |

ಬೀದರ: ಜಿಲ್ಲೆಗೆ ಭೀಕರ ಬರ ಆವರಿಸಿದ್ದು, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯಕ್ಕೂ ಇದರ ಬಿಸಿ ಮುಟ್ಟಿರುವುದರಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ.

Advertisement

ವಿಶ್ವ ವಿದ್ಯಾಲಯದ ವಸತಿ ನಿಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ವಿಶ್ವ ವಿದ್ಯಾಲಯದ ಸಿಬ್ಬಂದಿಗೆ ನೀರಿನ ಬರ ಎದುರಾಗಿದೆ. ದಿನಬಳಕೆ ಹಾಗೂ ಕುಡಿವ ನೀರಿಗೆ ಬರ ಬಂದಿದ್ದು, ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿನ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದು, 15 ದಿನಗಳಿಂದ ನೀರಿನ ಭೀಕರ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ.

ವಿವಿ ಪ್ರಾಂಗಣದಲ್ಲಿ ಒಟ್ಟು 5 ವಿದ್ಯಾರ್ಥಿ ವಸತಿ ನಿಲಯಗಳಿದ್ದು, 62 ವಿದ್ಯಾರ್ಥಿನಿಯರು, 200ಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಉಳಿದುಕೊಂಡಿದ್ದಾರೆ. ಅಲ್ಲದೆ, 20 ಸಿಬ್ಬಂದಿಗಳ ವಸತಿ ನಿಲಯಗಳು ಕೂಡ ಇದ್ದು, ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿ ಪ್ರಾಂಗಣದ ಒಂದು ತೆರೆದ ಬಾವಿ ಹಾಗೂ ಎರಡು ಕೊಳವೆ ಬಾವಿಗಳು ಬತ್ತಿದ್ದು, ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣ ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.

ಒಂದು ವಾರದಿಂದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ನೀರು ಪೂರೈಕೆ ಮಾಡಲು ಟ್ಯಾಂಕರ್‌ಗೆ ಟೆಂಡರ್‌ ಕರೆದಿದ್ದು, ನೀರು ತರಿಸಿಕೊಳ್ಳಲಾಗುತ್ತಿದೆ. ಪ್ರತಿದಿನ ಸುಮಾರು 5ರಿಂದ 8 ಟ್ಯಾಂಕ್‌ ನೀರನ್ನು ವಿವಿಗೆ ಪೂರೈಕೆ ಮಾಡಲಾಗುತ್ತಿದೆ. ಒಂದು ಟ್ಯಾಂಕರ್‌ನಲ್ಲಿ ಸುಮಾರು 12 ಸಾವಿರ ಲೀಟರ್‌ ನೀರು ಬರುತ್ತಿದ್ದು, ಒಂದು ಟ್ಯಾಂಕರ್‌ ನೀರಿಗೆ 1,500 ಪಾವತಿ ಮಾಡಲಾಗುತ್ತಿದೆ. ದಿನಕ್ಕೆ ಸುಮಾರು 10,500 ರೂ. ನೀರಿಗಾಗಿ ವಿವಿ ಖರ್ಚು ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೇಸಿಗೆ ಕಾರಣ ತರಗತಿಗಳು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಸತಿ ನಿಲಯದ ವಿದ್ಯಾರ್ಥಿಗಳು ಸ್ನಾನಕ್ಕೂ ಹಾಗೂ ಶೌಚಾಲಯಕ್ಕೂ ನೀರಿನ ಸಮಸ್ಯೆ ಎದುರಿಸುವಂತೆ ಆಗಿದೆ. ಬೇರೆ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಇಲ್ಲಿನ ನೀರಿನ ಬರ ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಹೀಗೆ ಆದರೆ, ಮುಂದಿನ ಗತಿ ಏನು ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Advertisement

ಒಂದು ವಾರದಿಂದ ನೀರಿನ ಸಮಸ್ಯೆ ಉಂಟಾಗಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ, ಲ್ಯಾಬ್‌ ಬಳಕೆಗೆ ಟ್ಯಾಂಕರ್‌ ನೀರು ಬಳಸಲಾಗುತ್ತಿದೆ. ದಿನಕ್ಕೆ ಕನಿಷ್ಠ 7 ಟ್ಯಾಂಕರ್‌ ನೀರು ಪೂರೈಕೆ ಆಗುತ್ತಿದೆ. ಅಗತ್ಯಕ್ಕೆ ಅನುಸಾರ ನೀರು ತರಿಸಿಕೊಳ್ಳಲಾಗುತ್ತಿದೆ. ವಿವಿಗೆ ಕನಿಷ್ಟ 2 ಲಕ್ಷ ಲೀಟರ್‌ ನೀರು ಬೇಕು. ಆದರೆ, ಸದ್ಯ 70 ಸಾವಿರ ಲೀ. ನೀರು ಪೂರೈಕೆ ಮಾಡಲಾಗುತ್ತಿದೆ. ಹೆಚ್ಚಿನ ಬೇಡಿಕೆ ಬಂದಲ್ಲಿ ಮುಖ್ಯಸ್ಥರ ಗಮನಕ್ಕೆ ತರಲಾಗುವುದು.
ರಾಹುಲ್ ದೊಡ್ಡಿ,
ವಿವಿ ಸಹ ಇಂಜಿನಿಯರ್‌

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next