Advertisement

ಬೀದರ್‌: ಹೆಚ್ಚಿದ ಮನೆ ಮದ್ದು!

05:27 PM Jan 20, 2022 | Team Udayavani |

ಬೀದರ: ಕೋವಿಡ್‌ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದರೂ ಆಸ್ಪತ್ರೆ ಬದಲು ಹೋಂ ಐಸೋಲೇಷನ್‌ ಆಗುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸರ್ಕಾರ ಅಂಥ ಸೋಂಕಿತರ ಚಿಕಿತ್ಸೆಗಾಗಿ ಮನೆ ಬಾಗಿಲಿಗೆ ಔಷಧ ಕಿಟ್‌ ತಲುಪಿಸುವ ಯೋಜನೆ ರೂಪಿಸಿದ್ದು, ಜಿಲ್ಲೆಯಲ್ಲಿಯೂ ಅದಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಗತ್ಯ ಸಿದ್ಧತೆಗಳೊಂದಿಗೆ ಸಜ್ಜಾಗಿದೆ.

Advertisement

ಕೊರೊನಾ ಮೂರನೇ ಅಲೆ ರೂಪದಲ್ಲಿ ಅಪ್ಪಳಿಸಿ ಆತಂಕವನ್ನೇ ಸೃಷ್ಟಿಸಿದೆ. ಆದರೆ, ಹೊಸ ಅಲೆಯಲ್ಲಿ ಸೌಮ್ಯ ಮತ್ತು ಲಕ್ಷಣ ರಹಿತ ಪ್ರಕರಣಗಳೇ ಹೆಚ್ಚಾಗುತ್ತಿರುವುದರಿಂದ ಶೇ.90 ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. ಆದರೆ, ಮನೆಯಲ್ಲಿ ಯಾವ ಮೆಡಿಸನ್‌ ತೆಗೆದುಕೊಳ್ಳಬೇಕೆಂಬ ಗೊಂದಲದಲ್ಲಿದ್ದು, ಮೆಡಿಕಲ್‌ ಅಂಗಡಿಗಳಲ್ಲಿ ಸಿಕ್ಕ ಸಿಕ್ಕ ಮಾತ್ರೆ ಸೇವಿಸಿ ಅಡ್ಡ ಪರಿಣಾಮ ಎದುರಿಸುವ ಸಾಧ್ಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದನ್ನು ಮನಗಂಡ ಆರೋಗ್ಯ ಇಲಾಖೆ ಹೊಸ ಐಸೋಲೇಷನ್‌ ಕಿಟ್‌ ಕಾನ್ಸೆಪ್ಟ್ ರೂಪಿಸಿದೆ.

ಕೊರೊನಾ ಮೊದಲ ಮತ್ತು ಎರಡನೇ ಅಲೆ ವೇಳೆ ಜಿಲ್ಲೆಯಲ್ಲಿ ಎದುರಾಗಿದ್ದ ಔಷಧ, ಆಮ್ಲಜನಕ ಮತ್ತು ಬೆಡ್‌ಗಳ ಕೊರತೆ ಮರುಕಳಿಸದಂತೆ ಅಗತ್ಯ ಆರೋಗ್ಯ ಸೌಲತ್ತು ಹೆಚ್ಚಿಸಿಕೊಳ್ಳಲಾಗಿತ್ತು. ಆದರೆ, ಮೂರನೇ ಅಲೆಯಲ್ಲಿ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯೋದಕ್ಕೆ ಹಿಂದೇಟು ಹಾಕುತ್ತಿದ್ದು, ಅದರಿಂದ ಚಿಕಿತ್ಸಾ ಸ್ವರೂಪವೇ ಬದಲಾಗುತ್ತಿದೆ. ಹಾಗಾಗಿ ಹೊಸ ಸವಾಲಿನೊಂದಿಗೆ ಆರೋಗ್ಯ ಇಲಾಖೆ ಆರೋಗ್ಯ ಸೇವೆಗೆ ಮುಂದಾಗಿದೆ.

ವೈದ್ಯರು, ಸಿಬ್ಬಂದಿ ತಂಡ ರಚನೆ

ಸೋಂಕಿತರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪನೆ ಸರ್ಕಾರದ “ಹಳ್ಳಿಗಳತ್ತ ವೈದ್ಯರ ನಡೆ’ ಭಾಗವಾಗಿದೆ. ಹೋಂ ಐಸೋಲೇಷನ್‌ ನಲ್ಲಿರುವ ರೋಗಿಗಳ ಚಿಕಿತ್ಸೆ ಮತ್ತು ಔಷಧ ಕಿಟ್‌ಗಳ ನೀಡಲು ಆರೋಗ್ಯ ಇಲಾಖೆ ಎರಡು ಪ್ರತ್ಯೇಕ ತಂಡ ರಚಿಸಿದೆ. ಸೋಂಕು ಪತ್ತೆಯಾದ ರೋಗಿಗಳನ್ನು ತಜ್ಞ ವೈದ್ಯರ ತಂಡ ದೂರವಾಣಿ ಮೂಲಕ ಸಂಪರ್ಕಿಸಿ ಸೋಂಕಿತರ ಲಕ್ಷಣಗಳ ಆಧಾರದ ಮೇಲೆ ಹೋಂ ಐಸೋಲೇಷನ್‌ ಆಗಬೇಕೆ ಅಥವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂಬ ನಿರ್ದೇಶನ ನೀಡಲಿದೆ. ಮನೆಯಲ್ಲಿ ಚಿಕಿತ್ಸೆಗೆ ಒಳಪಡುವ ರೋಗಿಗಳನ್ನು ಪಟ್ಟಿ ಮಾಡಿ ಸಂಬಂಧಪಟ್ಟ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. ಸ್ಥಳೀಯ ಮಟ್ಟದಲ್ಲಿ ವೈದ್ಯರು, ಎಎನ್‌ಎಂಗಳು ಮತ್ತು ಸಮುದಾಯ ಆರೋಗ್ಯ ಕಾರ್ಯಕರ್ತರ ಮತ್ತೊಂದು ತಂಡ ಮನೆಯಲ್ಲೇ ಐಸೋಲೇಷನ್‌ ಆದವರಿಗೆ ಔಷಧ ಕಿಟ್‌ ತಲುಪಿಸಲಿದೆ. ವಾರದಲ್ಲಿ ಮೂರು ಬಾರಿ ಮನೆಗೆ ಭೇಟಿ ನೀಡುವ ಈ ತಂಡ ಲಕ್ಷಣಗಳ ಆಧಾರದ ಮೇಲೆ ಯಾವ ಮಾತ್ರೆ, ಹೇಗೆ ತೆಗೆದುಕೊಳ್ಳಬೇಕು ಮತ್ತು ಯಾವೆಲ್ಲ ಮಾರ್ಗಸೂಚಿ ಅನುಸರಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂಬ ಸಲಹೆ ನೀಡಲಿದೆ.

Advertisement

ಕಿಟ್‌ನಲ್ಲಿರುವ ಔಷಧ ಯಾವುವು?

ಕೋವಿಡ್‌ ಸೋಂಕಿತರಲ್ಲಿ ಹೆಚ್ಚು ಕೆಮ್ಮು, ಶೀತದ ಜತೆಗೆ ಕಡಿಮೆ ಪ್ರಮಾಣದ ಜ್ವರ ಕೂಡ ಕಾಣಿಸಿಕೊಳ್ಳುತ್ತಿದೆ. ಈ ಎಲ್ಲ ರೋಗಲಕ್ಷಣ ಗಮನದಲ್ಲಿಟ್ಟುಕೊಂಡು ತಜ್ಞ ವೈದ್ಯರ ಸಲಹೆಯಂತೆ ಔಷಧಗಳನ್ನು ಒಳಗೊಂಡ ಕಿಟ್‌ ಸಿದ್ಧಪಡಿಸಲಾಗಿದ್ದು, ಅದರಲ್ಲಿ ಪ್ಯಾರಾಸಿಟಮಾಲ್‌, ಝಿಂಕ್‌ ಸಲ್ಪೆ„ಟ್‌ ಮತ್ತು ವಿಟಮಿನ್‌ ಸಿ ಸೇರಿ ಐದು ಬಗೆಯ ಮಾತ್ರೆಗಳು ಹಾಗೂ ಒಂದು ಕಪ್‌ ಸಿರಪ್‌ ಇರಲಿದೆ. ಅಷ್ಟೇ ಅಲ್ಲ ಮೂರು ಪದರಿನ ಮಾಸ್ಕ್ ಸಹ ಇರಲಿದೆ.

ಒಟ್ಟು 1074 ಸಕ್ರಿಯ ಕೇಸ್‌

ಬೀದರ ಜಿಲ್ಲೆಯಲ್ಲಿ ಒಟ್ಟು 1074 ಕೋವಿಡ್‌ ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 1062 ಜನ ಸೋಂಕಿತರು ಮನೆಯಲ್ಲೇ ಐಸೋಲೇಷನ್‌ ಆಗಿ ಚಿಕಿತ್ಸೆ ಪಡೆಯುತ್ತಿದ್ದರೆಕೇವಲ 12 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬುಧವಾರ ಜಿಲ್ಲೆಯಲ್ಲಿ 291ಹೊಸ ಪಾಸಿಟಿವ್‌ಕೇಸ್‌ಗಳು ಪತ್ತೆಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 25,785ಕ್ಕೆ ಏರಿಕೆ ಆಗಿದೆ. ಇಂದು 5 ಜನ ಸೇರಿ ಈವರೆಗೆ 24,302 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.

ಕೋವಿಡ್‌ ಮೂರನೇ ಅಲೆಯಲ್ಲಿ ಸೌಮ್ಯ ಮತ್ತು ಲಕ್ಷಣರಹಿತ ಪ್ರಕರಣಗಳೇ ಹೆಚ್ಚಾಗುತ್ತಿರುವುದರಿಂದ ಸೋಂಕಿತರು ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂಥವರ ಮನೆಗೆ ಔಷಧಕಿಟ್‌ ನೀಡಲು ಸರ್ಕಾರ ಯೋಜನೆ ರೂಪಿಸಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿಯೂ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಪ್ರತ್ಯೇಕ ತಂಡ ರಚಿಸಿ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. -ಡಾ| ರತಿಕಾಂತ ಸ್ವಾಮಿ, ಡಿಎಚ್‌ಒ, ಬೀದರ

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next