ಬೀದರ: ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬೇಕಾದರೆ ರಾಜಕಾರಣಿಗಳ ಶಿಫಾರಸ್ಸು ಮಾಡಿಸುವ ಕಾಲ ಇತ್ತು. ಆದರೆ, ಇದೀಗ ಸರ್ಕಾರಿ ಕಾಲೇಜುಗಳ ಕಡೆ ಮುಖ ಮಾಡುವುದೇ ಬೇಡ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಅದರಲ್ಲೂ ಪಿಯು ಕಾಲೇಜ್‌ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವವರೆ ಹೆಚ್ಚಾಗಿದ್ದಾರೆ.
ಮುಂದಿನ ಕೆಲ ದಿನಗಳಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯ ಫಲಿತಾಂಶ ಹೊರಬರಲಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳು ಯಾವ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕು ಎಂಬ ಲೆಕ್ಕಾಚಾರ ನಡೆಸುತ್ತಿದ್ದಾರೆ. ಯಾವ ಕಾಲೇಜಿನಲ್ಲಿ ಯಾವ ಸೌಲಭ್ಯಗಳು ಇವೆ. ಜಿಲ್ಲೆಯಲ್ಲಿ ಪಿಯು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದ ಸಂಸ್ಥೆಗಳು ಯಾವುವು? ಅಲ್ಲಿನ ವಾರ್ಷಿಕ ಶುಲ್ಕ ಎಷ್ಟು? ಇತರೆ ಜಿಲ್ಲೆಗೆ ಹೋಲಿಸಿದರೆ ಏನು ವ್ಯತ್ಯಾಸ ಹಾಗೂ ಏನು ವಿಶೇಷತೆ ಇದೆ ಎಂದು ಪಾಲಕರು ಪರಸ್ಪರ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಅಲ್ಲದೆ, ಅನೇಕ ಪಾಲಕರು ಜಿಲ್ಲೆಯ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿ ಪ್ರಥಮ ಪಿಯು ಕುರಿತು ವಿವರಣೆ ನಡೆಸುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಯ ಸರ್ಕಾರಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದ ಹಿನ್ನೆಲೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳ ಪ್ರವೇಶ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದು ಎಂದರೆ ತೀರಾ ಬಡವರು ಎಂದು ಗುರುತಿಸುವ ಸ್ಥಿತಿ ನಿರ್ಮಾಣವಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಕೆಲ ಬುದ್ಧಿವಂತ ಯುವಕರು ಸರ್ಕಾರಿ ಕಾಲೇಜುಗಳಲ್ಲಿ ಉತ್ತಮ ಉಪನ್ಯಾಸಕರು ಇರುತ್ತಾರೆ ಎಂಬ ಭಾವನೆಯಿಂದ ಪ್ರವೇಶ ಪಡೆಯಬೇಕು ಎಂದು ಪಾಲಕರಿಗೆ ತಿಳಿಸಿದರೆ, ಪಾಲಕರು ಮಾತ್ರ ಮಕ್ಕಳ ಭವಿಷ್ಯ ನಿರ್ಮಾಣವಾಗುವುದಿಲ್ಲ. ಲಕ್ಷ ಲಕ್ಷ ಸಂಬಳ ಪಡೆದು ಮನೆಗೆ ತೆರಳುವ ಉಪನ್ಯಾಸಕರು ಹೆಚ್ಚಿದ್ದಾರೆ. ಜವಾಬ್ದಾರಿಯಿಂದ ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರ ಸಂಖ್ಯೆ ಇಂದಿನ ದಿನಗಳಲ್ಲಿ ಇಲ್ಲ ಎಂದು ಮಕ್ಕಳಿಗೆ ಮನವರಿಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ.
ರಾಜಕಾರಣಿಗಳ ನಿರಾಸಕ್ತಿ: ಸರ್ಕಾರಿ ಕಾಲೇಜು ಉಪನ್ಯಾಸಕರ ಮಕ್ಕಳು ಸರ್ಕಾರಿ ಕಾಲೇಜುಗಳಲ್ಲಿ ಯಾಕೆ ಓದುವುದಿಲ್ಲ ಎಂಬ ಪ್ರಶ್ನೆಗೆ ಅನೇಕ ಉಪನ್ಯಾಸಕರು ಉತ್ತರಿಸಲು ಮುಂದಾಗುತ್ತಿಲ್ಲ. ನಿಮಗೆ ಎಲ್ಲವೂ ಗೊತ್ತೆ ಇದೆ ಎಂದು ಪತ್ರಕರ್ತರಿಗೆ ಉತ್ತರಿಸದೆ ಜಾರಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಫಲಿತಾಂಶ ಕಡಿಮೆಯಾಗಲು ಜಿಲ್ಲೆಯ ರಾಜಕಾರಣಿಗಳು ಕೂಡ ಮುಖ್ಯ ಕಾರಣರಾಗಿದ್ದಾರೆ. ಬಹುತೇಕ ಉಪನ್ಯಾಸಕರು ರಾಜಕೀಯ ನಾಯಕರ ಬೆಂಬಲಿಗರಾಗಿ ಗುರುತಿಸಿಕೊಳ್ಳುತ್ತಿದ್ದು, ಶಿಕ್ಷಣಕ್ಕೆ ಧಕ್ಕೆ ಉಂಟಾಗುತ್ತಿದೆ. ಚುನಾಯಿತ ಜನಪ್ರತಿನಿಧಿಗಳು ಸರ್ಕಾರಿ ಕಾಲೇಜುಗಳಿಗೆ ಭೇಟಿ ನೀಡಿ, ವರ್ಗಗಳನ್ನು ಸುತ್ತಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸುವ ಕಾರ್ಯ ಮಾಡದಿರುವುದು ಫಲಿತಾಂಶ ಹೊಡೆತಕ್ಕೆ ಕಾರಣ. ಕಾಲ ಕಾಲಕ್ಕೆ ಶಾಸಕರು ಹಾಗೂ ಸ್ಥಳೀಯ ಪ್ರತಿನಿಧಿಗಳು ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರೆ ಸರ್ಕಾರಿ ಕಾಲೇಜುಗಳ ಸ್ಥಿತಿ ಹೀನಾಯ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಜನರಿಂದ ಕೇಳಿ ಬರುತ್ತಿವೆ.
ಫಲಿತಾಂಶದಲ್ಲಿ ಕಳಪೆ ಸಾಧನೆ: ಸರ್ಕಾರಿ ಕಾಲೇಜುಗಳಲ್ಲಿ ಕಳೆದ ಕೆಲ ವರ್ಷಗಳಿಂದ ಶೇ.50ಕ್ಕೂ ಅಧಿಕ ವಿದ್ಯಾರ್ಥಿಗಳು ಫೇಲಾಗುತ್ತಿರುವುದು ವಾಸ್ತವ ಸತ್ಯ. ಬಸವಕಲ್ಯಾಣ ಸರ್ಕಾರಿ ನೀಲಾಂಬಿಕಾ ಕಾಲೇಜಿನಲ್ಲಿ 322 ವಿದ್ಯಾರ್ಥಿಗಳು ದಾಖಲೆಯಾಗಿ 292 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಈ ಪೈಕಿ 124 ವಿದ್ಯಾರ್ಥಿಗಳು ಮಾತ್ರ ಪಾಸ್ ಆಗಿದ್ದಾರೆ. ಬಸವಕಲ್ಯಾಣದ ಸರ್ಕಾರಿ ಬಾಲಕರ ಕಾಲೇಜಿನ ಒಟ್ಟು 104 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 37 ವಿದ್ಯಾರ್ಥಿಗಳು ಮಾತ್ರ ಪಾಸ್ ಆಗಿದ್ದಾರೆ. ಬೀದರ ಸರ್ಕಾರಿ ಬಾಲಕರ ಕಾಲೇಜಿನ ಒಟ್ಟು 66 ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬೀದರ್ ಬಾಲಕಿಯರ ಕಾಲೇಜಿನ ಒಟ್ಟು 250 ವಿದ್ಯಾರ್ಥಿಗಳ ಪೈಕಿ 83 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಹುಮನಾಬಾದ ಬಾಲಕರ ಕಾಲೇಜಿನ ಒಟ್ಟು 131 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಅದೇ ರೀತಿ ಬಾಲಕಿಯರ ಕಾಲೇಜಿನ ಒಟ್ಟು 51 ವಿದ್ಯಾರ್ಥಿಗಳ ಪೈಕಿ 13 ಪಾಸ್, ಭಾಲ್ಕಿ ಸರ್ಕಾರಿ ಕಾಲೇಜಿನ 111 ವಿದ್ಯಾರ್ಥಿಗಳ ಪೈಕಿ ಕೇವಲ 29 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಆದರೆ, ದುಬಲಗುಂಡಿ ಕಾಲೇಜಿನಲ್ಲಿ ಕೇವಲ 6 ವಿದ್ಯಾರ್ಥಿಗಳು ಪರಿಕ್ಷೆ ಬರೆದು 3 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಚಿಟಗುಪ್ಪ ಸರ್ಕಾರಿ ಕಾಲೇಜಿನ ಒಟ್ಟು 28 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಉಳಿದಂತೆ ಇತರೆ ಸರ್ಕಾರಿ ಕಾಲೇಜುಗಳಲ್ಲಿ ಸ್ವಲ್ಪ ಪ್ರಮಾಣದ ಗುಣಮಟ್ಟ ಉಳಿದುಕೊಂಡಿದೆ ಎನ್ನಬಹುದು.
ಜಿಲ್ಲಾಡಳಿತದ ಕಠಿಣ ಕ್ರಮ ಅಗತ್ಯ: ಕಾಲೇಜಿನಲ್ಲಿ ಯಾವ ವಿಷಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ಫೇಲ್ ಆಗುತ್ತಾರೊ ಆ ಉಪನ್ಯಾಸಕರಿಗೆ ವಿಶೇಷ ತರಬೇತಿ ನೀಡಿ ಬೇರೆಕಡೆ ವರ್ಗಾವಣೆ ಮಾಡಬೇಕು. ಹೆಚ್ಚು ಉಪನ್ಯಾಸಕರು ಒಂದೇ ಕಡೆಗೆ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವುದು ಕೂಡ ಫಲಿತಾಂಶ ಕಡಿಮೆಯಾಗಲು ಪ್ರಮುಖ ಕಾರಣ ಎಂಬ ವಿಶ್ಲೇಷಣೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರ್ಕಾರದ ಗಮನ ಸೆಳೆದು, ಪಿಯು ಪರೀಕ್ಷೆಯಲ್ಲಿ ಉತ್ತಮ ಸಾಧನೆಗೆ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಕೆಲವು ಕಠಿಣ ಕ್ರಮ ಕೈಗೊಂಡಲ್ಲಿ ಮಾತ್ರ ಸುಧಾರಣೆ ಸಾಧ್ಯ ಎನ್ನುತ್ತಾರೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರು.
ಸರ್ಕಾರಿ ಪಿಯು ಕಾಲೇಜಿನಲ್ಲಿ ಈ ಹಿಂದೆ ಹೆಚ್ಚು ಸಂಖ್ಯೆಯ ದಾಖಲಾತಿ ಇತ್ತು. ಆದರೆ ನಗರದಲ್ಲಿ 32 ಖಾಸಗಿ ಕಾಲೇಜುಗಳು ಮಾನ್ಯತೆ ಪಡೆದುಕೊಂಡಿರುವ ಕಾರಣ ವಿದ್ಯಾರ್ಥಿಗಳು ಹಾಗೂ ಪಾಲಕರು ಖಾಸಗಿ ಕಾಲೇಜುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆ ಆಗುತ್ತಿದೆ. ಖಾಸಗಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆ ಅವರಲ್ಲಿ ಇದೆ. ಸರ್ಕಾರಿ ಕಾಲೇಜುಗಳಲ್ಲಿ ವಿಷಯವಾರು ಉಪನ್ಯಾಸಕರ ಭರ್ತಿ ಆದರೆ ಸರ್ಕಾರಿ ಕಾಲೇಜಿನಲ್ಲಿ ಕೂಡ ಉತ್ತಮ ಬೋಧನೆ ಸಾಧ್ಯವಿದೆ.
• ರಮೇಶ ಬೇಜಗಂ,
ಪ್ರಾಚಾರ್ಯರು ಸರ್ಕಾರಿ ಕಾಲೇಜು
ಸರ್ಕಾರಿ ಕಾಲೇಜುಗಳಲ್ಲಿ ಕಡಿಮೆ ಫಲಿತಾಂಶ ಪಡೆದ ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿದ್ದಾರೆ. ಇದು ಫಲಿತಾಂಶ ಕುಸಿತಕ್ಕೆ ಕಾರಣ. ಅಲ್ಲದೆ, ಕಾಲೇಜು ದಿನಗಳು ಆರಂಭಗೊಂಡ ನಂತರ ಅತಿಥಿ ಉಪನ್ಯಾಸಕರ ನೇಮಕಾತಿಗಳು ನಡೆಯುತ್ತಿರುವ ಕಾರಣ ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಾಗುತ್ತಿದೆ. ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆ ಇದೆ ಎಂದು ಭಾವಿಸಿ ಅನೇಕರು ಸರ್ಕಾರಿ ಕಾಲೇಜುಗಳ ಕಡೆಗೆ ಮುಖ ಮಾಡುತ್ತಿಲ್ಲ. ಆದರೆ, ಸರ್ಕಾರಿ ಕಾಲೇಜುಗಳಲ್ಲಿ ಕೂಡ ಉತ್ತಮ ಫಲಿತಾಂಶ ಬರುತ್ತಿರುವುದು ನಾವು ನೋಡಬಹುದಾಗಿದೆ. ತಾಳಮಡಗಿ ಕಾಲೇಜು ಉತ್ತಮ ಫಲಿತಾಂಶ ಪಡೆಯುತ್ತಿದೆ.
•
ಪಂಢರಿನಾಥ ಹುಗ್ಗಿ,
ಪ್ರಾಚಾರ್ಯರು ತಾಳಮಡಗಿ
•ದುರ್ಯೋಧನ ಹೂಗಾರ