ಬೀದರ: ಹಿಂದಿಗಿಂತ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ರೈತರು ಫಸಲ್ ಬಿಮೆ ಮಾಡಿಸಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಈ ಕುರಿತು ಅಧಿಕಾರಿಗಳು ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ವಾರ್ಷಿಕ ಸಾಲ ಯೋಜನೆ 2020-21 ಬಿಡುಗಡೆ ಮತ್ತು ಜಿಲ್ಲಾ ಸಲಹಾ, ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಫಸಲ್ ಬಿಮಾ ಯೋಜನೆ ಯಶಸ್ಸಿಗೆ ಬ್ಯಾಂಕಿನವರು ರೈತರಿಗೆ ಸ್ಪಂದಿಸಬೇಕು. ರೈತರ ಹೆಸರು ನೋಂದಣಿಗೆ ಸಹಕರಿಸಬೇಕು. ರೈತರು ಬ್ಯಾಂಕಿಗೆ ಹೋಗುವ ಹಾಗೆ ಮಾಡುವ ಕಾರ್ಯವನ್ನು ಮಾಡಬೇಕು ಎಂದು ಯುನಿವರ್ಸಲ್ ಸೋಂಪು ವಿಮಾ ಕಂಪನಿ ಸಂಯೋಜಕರಿಗೆ ತಿಳಿಸಿದರು.
ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಕಂಪನಿಯ ಸಿಬ್ಬಂದಿಗಳಿದ್ದು, ಶೀಘ್ರ ಕಚೇರಿ ಆರಂಭಗೊಳ್ಳಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಫಸಲ್‌ಬಿಮಾ ಯೋಜನೆಗೆ ಹೆಸರು ನೋಂದಾಯಿಸಬೇಕು. ಈ ನಿಟಇಟನಲ್ಲಿ ಬ್ಯಾಂಕ್ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಚಾರ ಮಾಡಲಾಗುವುದು ಎಂದು ಕಂಪನಿ ಸಂಯೋಜಕರು ಹೇಳಿದರು. ಬಿಮಾ ಯೋಜನೆಯಡಿ ಜಿಲ್ಲೆಯಲ್ಲಿ ಏನೇನು ಮಾಡುತ್ತೀರಿ ಎನ್ನುವ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸಿ ಸಲ್ಲಿಸಬೇಕು ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಂಸದರು, ವರ್ಕ್ ಆರ್ಡರ್‌ನಲ್ಲಿ ಇರುವಂತೆಯೇ ಎಲ್ಲ ಕಾರ್ಯಗಳು ಅಚ್ಚುಕಟ್ಟಾಗಿ ಜಿಲ್ಲೆಯಲ್ಲಿ ಅನುಷ್ಠಾನವಾಗಬೇಕು. ಇಲ್ಲದಿದ್ದರೆ ತಮ್ಮ ಬದಲಿಗೆ ಬೇರೊಬ್ಬರನ್ನು ಪಡೆದುಕೊಳ್ಳಲು ವರದಿ ಮಾಡುವುದಾಗಿ ಸಂಯೋಜಕರಿಗೆ ಎಚ್ಚರಿಕೆ ನೀಡಿದರು.
ರೈತರು, ಕಾರ್ಮಿಕರು, ಮಹಿಳೆಯರು, ನಿರುದ್ಯೋಗಿಗಳು, ವಿಕಲಚೇತನರು, ವಿದ್ಯಾರ್ಥಿಗಳು ಸೇರಿದಂತೆ ಸರ್ಕಾರ ನಾನಾ ಯೋಜನೆಗಳನ್ನು ರೂಪಿಸುತ್ತಿದೆ. ಈ ಕುರಿತು ಬ್ಯಾಂಕ್‌ಗಳು ಜನರಲ್ಲಿ ಅರಿವು ಮೂಡಿಸಿ ನೆರವು ನೀಡುವಂತಾಗಬೇಕು ಎಂದರು. ಗೃಹಸಾಲ, ಶೈಕ್ಷಣಿಕ ಸಾಲ ನೀಡಲು ಬ್ಯಾಂಕ್‌ಗಳು ಒತ್ತು ಕೊಡಬೇಕು. ಸಾಲ ಪಡೆಯಲು ಬೇಕಾದ ಅರ್ಹತೆಯ ಮಾಹಿತಿ ಕರಪತ್ರ ಮುದ್ರಿಸಿ ಆಗಸ್ಟ್‌ದೊಳಗೆ ಬ್ಯಾಂಕ್‌ಗಳು ಗೃಹಸಾಲ ಮೇಳ ನಡೆಸಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮುದ್ರಾ ಯೋಜನೆಯಲ್ಲಿ ಇನ್ನಷ್ಟು ಪ್ರಗತಿ ಆಗಬೇಕು ಎಂದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ. ಕಮತಗಿ ಮಾತನಾಡಿದರು. ನಬಾರ್ಡ್‌ನ ರಾಮರಾವ್, ಡಿಸಿಸಿ ಬ್ಯಾಂಕಿನ ಸಿಇಒ ಮಲ್ಲಿಕಾರ್ಜುನ, ಕೆಜಿಬಿ ಪ್ರಾದೇಶಿಕ ವ್ಯವಸ್ಥಾಪಕ ಮಂಜುನಾಥ ಭಾಗವತ್, ಎಸ್‌ಬಿಐನ ಶ್ರೀನಿವಾಸ, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್. ಹಾಗೂ ಬ್ಯಾಂಕ್‌ಗಳ ವ್ಯವಸ್ಥಾಪಕರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.