Advertisement

ವಿವಿಧೆಡೆ ಡಿಸಿ ದಿಢೀರ್‌ ಭೇಟಿ-ಪರಿಶೀಲನೆ

07:58 PM Dec 12, 2019 | Naveen |

ಬೀದರ: ನಗರದ ವಿವಿಧೆಡೆ ಬುಧವಾರ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ್‌ ದಿಢೀರ್‌ ಭೇಟಿ ನೀಡಿ, ಆಯಾ ಇಲಾಖೆಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು.

Advertisement

ಚಿದ್ರಿಯ ಕ್ರಾಸ್‌ ಬಳಿ ಡಾ| ಅಂಬೇಡ್ಕರ ಕಲ್ಚರಲ್‌ ಆ್ಯಂಡ್‌ ವೆಲ್ಫೇರ್‌ ಸೊಸೈಟಿ ಅಡಿ ನಡೆಯುವ ಜ್ಯೋತಿಬಾ ಫುಲೆ ವೃದ್ಧಾಶ್ರಮ ಮತ್ತು ಮಂಗಲಪೇಟ ಹತ್ತಿರದ ಮದರ್‌ ಥೆರೆಸಾ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ವೃದ್ಧಾಶ್ರಮದಲ್ಲಿನ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲಿದ್ದ ವೃದ್ಧರನ್ನು ಆಪ್ತತೆಯಿಂದ ಮಾತನಾಡಿಸಿದರು.

ಎಲ್ಲಿಂದ ಬಂದಿದ್ದೀರಿ?, ನಿಮಗೆ ಮಾಸಾಶನ ಸಿಗುತ್ತಾ? ಎಂದು ಕೇಳಿ ಅವರ ಯೋಗಕ್ಷೇಮ ವಿಚಾರಿಸಿದರು. ಎಲ್ಲ ವೃದ್ಧರಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲು ಅಧಿ ಕಾರಿಗಳಿಗೆ ಸೂಚಿಸಿದರು. ಬಾಲಕರ ಬಾಲಮಂದಿರಕ್ಕೆ ಭೇಟಿ: ಇದಕ್ಕೂ ಮೊದಲು ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿ ಪರಿಶೀಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಂಜೂರಾದ ಹುದ್ದೆಗಳು ಮತ್ತು ಖಾಲಿ ಹುದ್ದೆಗಳ ಮಾಹಿತಿ ಪಡೆದು ಕಚೇರಿ ಶಿಸ್ತಾಗಿ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಬಾಲಮಂದಿರದಲ್ಲಿನ ವಸತಿ, ಅಡುಗೆ ಕೋಣೆಗಳನ್ನು ಜಿಲ್ಲಾಧಿ ಕಾರಿಗಳು ವೀಕ್ಷಿಸಿದರು.

ಅಲ್ಲಲ್ಲಿ ಮೇಲ್ಛಾವಣೆ, ಗೋಡೆಗಳು ಹಾಳಾಗಿದ್ದನ್ನು ಕಂಡು, ಇದನ್ನು ದುರಸ್ತಿ ಮಾಡಿಸಲು ಏನಾಗಿದೆ? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿ, ಬಾಲಮಂದಿರವನ್ನು ಅಚ್ಚುಕಟ್ಟಾಗಿ ಇಡುವಂತೆ ಸೂಚಿಸಿದರು.

ಸೂಪರಿಟೆಂಡೆಂಟ್‌ಗೆ ಎಚ್ಚರಿಕೆ: ಅಲ್ಲಿದ್ದ ಬಾಲಕರಿಗೆ ಇಟ್ಟಿದ್ದ ಸಂಗೀತ ಸಲಕರಣೆಗಳು ಧೂಳು ಹತ್ತಿರುವುದನ್ನು ಮತ್ತು ಕೆಲವು ಕೋಣೆಗಳು ಎಲ್ಲೆಂದರಲ್ಲಿ ಕಸ ಬಿದ್ದಿರುವುದನ್ನು ಕಂಡು, ಇದು ನಿಮಗೆ ಕಣ್ಣಿಗೆ ಕಾಣುವುದಿಲ್ಲವೇ?, ನಿಮ್ಮ ಕಾರ್ಯವೈಖರಿ ಸರಿಪಡಿಸಿಕೊಳ್ಳದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಾಲಮಂದಿರದ ಸೂಪರಿಟೆಂಡೆಂಟ್‌ ಅವರಿಗೆ ಎಚ್ಚರಿಕೆ ನೀಡಿದರು.

Advertisement

ಅಲ್ಲಿದ್ದ ಕೆಲವು ಮಕ್ಕಳನ್ನು ಮಾತನಾಡಿಸಿ ಅವರ ಓದು, ಆರೋಗ್ಯದ ಬಗ್ಗೆ ವಿಚಾರಿಸಿದರು. ಇಲ್ಲಿ ಮೂಲಭೂತ ಸೌಕರ್ಯ ಇರುವಂತೆ ನೋಡಿಕೊಳ್ಳಿ. ಈ ಕಟ್ಟಡದ ದುರಸ್ತಿ ಕಾರ್ಯ ತುರ್ತಾಗಿ ಆಗುವ ನಿಟ್ಟಿನಲ್ಲಿ ಅಂದಾಜು ಪತ್ರಿಕೆ ಸಿದ್ಧಪಡಿಸಿ ಸಲ್ಲಿಸಿ, ಅನುಮತಿ ಪಡೆದು, ಕೆಲಸ ಆರಂಭಿಸಿರಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಬಾಲಕಿಯರ ಬಾಲಮಂದಿರಕ್ಕೆ ಭೇಟಿ: ಹತ್ತಿದಲ್ಲಿದ್ದ ಸರ್ಕಾರಿ ಬಾಲಕಿಯರ ಬಾಲಮಂದಿರಕ್ಕೂ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಸ್ಥಳದಲ್ಲೇ ದೂರವಾಣಿ ಮೂಲಕ ನಗರಸಭೆ ಪೌರಾಯುಕ್ತರಿಗೆ ಮಾತನಾಡಿ, ಆವರಣದಲ್ಲಿನ ಕಸ ವಿಲೇವಾರಿಗೆ ಮತ್ತು ಅಲ್ಲಿದ್ದ ಬಾವಿಯನ್ನು ಶುಚಿಗೊಳಿಸಿ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ನಮಗೆ ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು ಎಂದು ಅಲ್ಲಿದ್ದ ಸಿಬ್ಬಂದಿ ಕೋರಿದರು. ಬಾಲಕಿಯರ ಬಾಲಮಂದಿರದ ಬೇಡಿಕೆ ಪಟ್ಟಿ ಪಡೆದು, ಅದಕ್ಕೂ ಕೂಡ ಅಂದಾಜು ಪತ್ರಿಕೆ ಸಿದ್ಧಪಡಿಸಿ ಎಲ್ಲ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ವೀಕ್ಷಣಾಲಯಕ್ಕೆ ಭೇಟಿ: ಬಸವನಗರದ ಜಂಗಲಕೋಯಿನಲ್ಲಿ ಇರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ವೀಕ್ಷಣಾಲಯಕ್ಕೂ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ವೀಕ್ಷಣಾಯಲಯದ ಆಪ್ತ ಸಮಾಲೋಚಕರಿಂದ, ಅಲ್ಲಿದ್ದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಸೂರ್ಯಕಾಂತ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಸಿ.ಎನ್‌. ಜಾಧವ, ಜಿಲ್ಲಾ ವಿಕಲಚೇತನರ ಇಲಾಖಾ ಅಧಿಕಾರಿ ಜಗದೀಶ, ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ ಪರತಾಪುರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಧೀಕ್ಷಕ ಶಂಭುಲಿಂಗ ಹಿರೇಮಠ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next