ಬೀದರ: ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿತದಿಂದ ನಲುಗಿದ್ದ ಅನ್ನದಾತನ ಆಸರೆಗೆ ಕೇಂದ್ರ-ರಾಜ್ಯ ಸರ್ಕಾರಗಳು ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಕೇಂದ್ರಗಳನ್ನು ಸ್ಥಾಪಿಸಿವೆ ಆದರೆ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲು ಆದೇಶಿಸಿ 11 ದಿನ ಕಳೆದರೂ ಈವರೆಗೆ ಪ್ರಕ್ರಿಯೆ ಆರಂಭಗೊಳ್ಳದೇ ಇರುವುದರಿಂದಅನ್ನದಾತ ಆತಂಕದಲ್ಲಿದ್ದಾನೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಕ್ವಿಂಟಲ್ ತೊಗರಿ ಖರೀದಿಗೆ ಕೇಂದ್ರ ಸಕಾರದ ಕನಿಷ್ಠ ಬೆಂಬಲ
5800 ರೂ.ಗಳ ಜತೆ ಪ್ರೋತ್ಸಾಹ ಧನ 300ರೂ. ಸೇರಿ ರೈತರಿಂದ ಪ್ರತಿ ಕ್ವಿಂಟಲ್ ತೊಗರಿಯನ್ನು 6100 ರೂ.ಗಳಿಗೆ ಖರೀದಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಳೆದ ಡಿ. 21ರಿಂದ ಜ.10ರವರೆಗೆ ರೈತರು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸುವಂತೆ ಮತ್ತು ನಂತರ 30 ದಿನಗಳ ಕಾಲ ಖರೀದಿ ಪ್ರಕ್ರಿಯೆ ನಡೆಸಲು ಆದೇಶ ಹೊರಡಿಸಿದೆ.
ತೊಗರಿ ಖರೀದಿಗಾಗಿ ನೋಂದಣಿಗೆ ಸರ್ಕಾರ ಕೇವಲ 21 ದಿನಗಳು ಮಾತ್ರ ಕಾಲಾವಕಾಶ ಕಲ್ಪಿಸಿದೆ. ಆದರೆ, ರೈತರು ಹೆಸರು ನೋಂದಣಿ ಆರಂಭಗೊಂಡು 11 ದಿನಗಳು ಕಳೆದರೂ ಇದುವರೆಗೂ ಖರೀದಿ ಪ್ರಕ್ರಿಯೆಗೆ ಚಾಲನೆ ಮಾತ್ರ ಸಿಕ್ಕಿಲ್ಲ. ಈಗ ಉಳಿದಿರುವ 10
ದಿನಗಳಲ್ಲಿ ಎಲ್ಲ ರೈತರ ನೋಂದಣಿ ಕಾರ್ಯ ನಡೆಯುವುದು ಕಷ್ಟ ಸಾಧ್ಯವೆಂಬುದು ರೈತ ಸಮೂಹದ ಅಳಲು.
ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 82 ಸಾವಿರ ಕ್ವಿಂಟಲ್ ತೊಗರಿ ಬೆಳೆಯಲಾಗಿದ್ದು, ಎರಡ್ಮೂರು ವಾರಗಳಲ್ಲಿ ಕಟಾವು ಶುರುವಾಗಲಿದೆ. ಜಿಲ್ಲೆಯಲ್ಲಿ ಒಟ್ಟು 78 ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಈ ಬಾರಿ ಉತ್ತಮ ಮಳೆ ಮತ್ತು ಕೀಟ ಬಾಧೆ ಇಲ್ಲವಾದ್ದರಿಂದ ಬಂಪರ್ ಇಳುವರಿ ಸಿಗಬಹುದೆಂಬ ನಿರೀಕ್ಷೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಸರ್ಕಾರ ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಘೋಷಿಸಿರುವುದು ರೈತರಲ್ಲಿ ಸಂತಸ ಇಮ್ಮಡಿಗೊಳಿಸಿತ್ತು. ಆದರೆ ಇವತ್ತಿಗೂ ನೋಂದಣಿ ಪ್ರಕ್ರಿಯೆ ಆರಂಭಗೊಂಡಿಲ್ಲ. ಇದಕ್ಕೆ ಎನ್‌ಇಎಂಎಲ್ ಸಾಫ್ಟವೇರ್‌ನಲ್ಲಿ ತಾಂತ್ರಿಕ ಸಮಸ್ಯೆಯೇ ಕಾರಣವೆಂದು ಹೇಳಲಾಗಿದೆ.
ತೊಗರಿ ಖರೀದಿಗೆ ನಾಫೆಡ್ ಹಾಗೂ ಎಫ್‌ಸಿಐ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿ ಮತ್ತು ಮಾರ್ಕ್‌ಫೆಡ್, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿಯನ್ನು ರಾಜ್ಯದ ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಮಾರ್ಗಸೂಚಿಯನ್ವಯ ಬೀದರ ಸೇರಿ ತೊಗರಿ ಬೆಳೆಯುವ 9 ಜಿಲ್ಲೆಗಳಲ್ಲಿ ಎಕರೆಗೆ 5 ಕ್ವಿಂ. ಮತ್ತು ಪ್ರತಿ ರೈತರಿಂದ ಗರಿಷ್ಠ 10 ಕ್ವಿಂ. ತೊಗರಿ ಖರೀದಿಗೆ ಅವಕಾಶ ನೀಡಲಾಗಿದೆ. ಮಳೆಯಾಶ್ರಿತ ಪ್ರದೇಶವಾಗಿರುವ ಬೀದರ ಜಿಲ್ಲೆಯಲ್ಲಿ ತೊಗರಿ ಬಿತ್ತನೆ ತಡವಾಗಿ ನಡೆಯುವುದರಿಂದ ಬೆಳೆ ಕಟಾವು ಸಹ ವಿಳಂಬ ಆಗುತ್ತದೆ. ಅಲ್ಪ ಅವಧಿಯಲ್ಲಿಯೇ ಎಲ್ಲ
ರೈತರು ನೋಂದಣಿ ಮಾಡಿಸಬೇಕಿರುವುದರಿಂದ ಸರ್ವರ್ ಮೇಲೆ ಒತ್ತಡ, ನೂಕು ನುಗ್ಗಲು ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ನೋಂದಣಿ ಪ್ರಕ್ರಿಯೆ ವಿಸ್ತರಿಸಬೇಕೆಂಬುದು ರೈತರ ಒತ್ತಾಸೆಯಾಗಿದೆ.
ಉತ್ತಮ ಮಳೆ ಹಿನ್ನೆಲೆಯಲ್ಲಿ ಬಂಪರ್ ಬೆಳೆ ಬರುವ ನಿರೀಕ್ಷೆ ಇದೆ. ಸರ್ಕಾರದಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಮುಂದಾಗಿರುವುದರಿಂದ ಖುಷಿಯಲ್ಲಿದ್ದೆವು. ತೊಗರಿ ಖರೀದಿ ನೋಂದಣಿ ಪ್ರಕ್ರಿಯೆಗೆ ಕೇವಲ 21 ದಿನಗಳ ಅಲ್ಪ ಸಮಯ
ನೀಡಲಾಗಿದೆ. ಆದರೆ ಇವತ್ತಿಗೂ ನೋಂದಣಿ ಆರಂಭಿಸಿಲ್ಲ. ಇದಕ್ಕಾಗಿ ನಾವು ಕಾಯ್ದು ಕುಳಿತಿದ್ದೇವೆ. ಇನ್ನೂ ಖರೀದಿ ಯಾವಾಗ
ಮಾಡುತ್ತಾರೆಂಬ ಆತಂಕ ಮೂಡಿದೆ.
ಸಿದ್ರಾಮ ಬೇಲೂರೆ, ರೈತ
ಬೀದರ ಜಿಲ್ಲೆಯಲ್ಲಿ ತೊಗರಿ ಖರೀದಿಸಲು ಒಟ್ಟು 78 ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಡಿ.21ರಿಂದಲೇ ನೋಂದಣಿ ಆರಂಭಗೊಳ್ಳಬೇಕಿತ್ತು. ಆದರೆ, ಎನ್ ಇಎಂಎಲ್ ಸಾಫ್ಟವೇರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ. ಇಂದು ಅಥವಾ ನಾಳೆ ಪ್ರಕ್ರಿಯೆ ಶುರುವಾಗಲಿದೆ. ನೋಂದಣಿ ದಿನಾಂಕ ವಿಸ್ತರಿಸುವ ಕುರಿತಂತೆ ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ.
ಪ್ರಭಾಕರ, ಶಾಖಾ ವ್ಯವಸ್ಥಾಪಕರು,
ರಾಜ್ಯ ಸಹಕಾರಿ ಮಾರಾಟ ಮಹಾಮಂಡಳ,
ಬೀದರ
ಶಶಿಕಾಂತ ಬಂಬುಳಗೆ