ಬೀದರ್; ಮಹಾರಾಷ್ಟ್ರ ಕಂಟಕದಿಂದಾಗಿ ಗಡಿ ನಾಡು ಬೀದರ್ ನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕು ಆರ್ಭಟ ಹೆಚ್ಚುತ್ತಿದ್ದು, ಮತ್ತೆ ಗುರುವಾರ ಜಿಲ್ಲೆಯಲ್ಲಿ 6 ವರ್ಷದ ಬಾಲಕ ಸೇರಿ 12 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಈಗ 120ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದ ಮುಂಬೈ ಮತ್ತು ಪೂನಾ ಸಂಪರ್ಕದಿಂದ ಬೀದರ್ ಜಿಲ್ಲೆಯ ಹಳ್ಳಿ ಹಳ್ಳಿಗೂ ವೈರಾಣು ಹಬ್ಬುತ್ತಿದ್ದು, ಬಸವಕಲ್ಯಾಣ ತಾಲೂಕಿನಲ್ಲಿ ಅತಿಯಾಗಿ ಬಾಧಿಸುತ್ತಿರುವುದು ಕ್ಷೇತ್ರದ ಜನರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ಒಂದೇ ವಾರದಲ್ಲಿ ಈ ತಾಲೂಕಿನಲ್ಲಿ 37 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲ ಕೇಸ್‌ಗಳಿಗೂ ಮಹಾರಾಷ್ಟ್ರದ ಸಂಪರ್ಕವೇ ಕಾರಣ.
ಜಿಲ್ಲೆಯಲ್ಲಿ ಗುರುವಾರ ಪತ್ತೆಯಾಗಿರುವ 12 ಪಾಸಿಟಿವ್ ಪ್ರಕರಣಗಳಲ್ಲಿ ಮೂವರು ಬಾಲಕರು ಸೇರಿದ್ದಾರೆ. ಬಸವಕಲ್ಯಾಣ ತಾಲೂಕಿ ಚಿಟ್ಟಾ ಗ್ರಾಮ 5, ರಾಜೇಶ್ವರ, ಮಂಠಾಳ ತಲಾ 3 ಮತ್ತು ಹತ್ಯಾಳ ಗ್ರಾಮದಲ್ಲಿ 1 ಕೇಸ್ ಪತ್ತೆಯಾಗಿದ್ದು, ಎಲ್ಲರೂ ಮಹಾರಾಷ್ಟ್ರದಿಂದ ವಾಪಸ್ ಬಂದಿರುವ ವಲಸೆ ಕಾರ್ಮಿಕರಾಗಿದ್ದು, ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಸೋಂಕು ಪತ್ತೆಯಾಗಿರುವ ಗ್ರಾಮಗಳಿಗೆ ತಾಲೂಕು ಆಡಳಿತ ಮತ್ತು ಆರೋಗ್ಯ ಅಧಿಕಾರಿಗಳ ತಂಡ ಭೇಟಿ ನೀಡಿ ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಆಗಿ ಲಾಕ್‌ಡೌನ್ ಮಾಡಿದ್ದಾರೆ.
34 ವರ್ಷದ ವ್ಯಕ್ತಿ ಪಿ- 2722, 22 ವರ್ಷದ ಯುವಕ ಪಿ-2723, 17 ವರ್ಷದ ಯುವಕ ಪಿ-2724, 32 ವರ್ಷದ ಮಹಿಳೆ ಪಿ- 2725, 59 ವರ್ಷದ ವೃದ್ದ ಪಿ- 2726, 30 ವರ್ಷದ ವ್ಯಕ್ತಿ ಪಿ- 2727, 31 ವರ್ಷದ ಮಹಿಳೆ ಪಿ- 2728, 20 ವರ್ಷದ ಯುವತಿ ಪಿ- 2829, 51 ವರ್ಷದ ವ್ಯಕ್ತಿ ಪಿ- 2730, 20 ವರ್ಷದ ಯುವಕ ಪಿ- 2731, 10 ವರ್ಷದ ಬಾಲಕ ಪಿ- 2732 ಮತ್ತು 6 ವರ್ಷದ ಬಾಲಕ ಪಿ- 2733 ರೋಗಿಯಲ್ಲಿ ಸೋಂಕು ಪತ್ತೆಯಾಗಿರುವುದು ಆರೋಗ್ಯ ಇಲಾಖೆ ಮಿಡಿಯಾ ಬುಲೇಟಿನ್ ದೃಢಪಡಿಸಿದೆ.
ಬೀದರ್ ಜಿಲ್ಲೆಯಲ್ಲಿ ಈವರೆಗೆ 120 ಪಾಸಿಟಿವ್ ಪ್ರಕರಣಗಳು ವರದಿಯಾದಂತಾಗಿದೆ. ಅದರಲ್ಲಿ ಮೂವರು ಮೃತಪಟ್ಟಿದ್ದರೆ, 24 ಮಂದಿ ಡಿಸ್ಚಾರ್ಜ್ ಆಗಿದ್ದು, 93 ಸಕ್ರೀಯ ಪ್ರಕರಣಗಳು ಇವೆ.
ಮಹಿಳೆ ಸಾವು, ಕೊರೊನಾ ಶಂಕೆ ?
ಚಿಟಗುಪ್ಪ ತಾಲೂಕಿನ ಫಾತ್ಮಾಪೂರ್ ಗ್ರಾಮದಲ್ಲಿ ಗುರುವಾರ 47 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಕೋವಿಡ್ ಶಂಕೆ ವ್ಯಕ್ತವಾಗಿದೆ. ಆದರೆ, ಆರೋಗ್ಯ ಇಲಾಖೆ ಮಿಡಿಯಾ ಬುಲೇಟಿನ್ ದೃಢಪಡಿಸಬೇಕಿದೆ. ಪಾಸಿಟಿವ್ ಖಚಿತವಾದರೆ ಜಿಲ್ಲೆಯಲ್ಲಿ ಕೋವಿಡ್ ಗೆ ನಾಲ್ಕನೇ ಬಲಿಯಾದಂತಾಗುತ್ತದೆ.
ಪಾಶ್ವವಾಯು ರೋಗದಿಂದ ಬಳಲುತ್ತಿದ್ದ ಮಹಿಳೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಮಹಿಳೆಯ ಅಂತ್ಯಕ್ರಿಯೆಯನ್ನು ಕೋವಿಡ್- 19 ವಿಧಾನದ ಮೂಲಕವೇ ನೆರವೇರಿಸಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಮೃತರ ಕುಟುಂಬಸ್ಥರನ್ನು ಸಹ ಪಟ್ಟಣದಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.