ಸಾಗರ: ಕಳೆದ ಕೆಲವು ದಿನಗಳಿಂದ ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಯಾಗಿರುವ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ಈ ವರದಿ ವಿರೋಧಿಸುವುದನ್ನು ಬಿಟ್ಟು ಗೊತ್ತು ಗುರಿ ಇಲ್ಲದೆ ದಿನಕ್ಕೊಂದು ಹೇಳಿಕೆ ನೀಡುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಕಸ್ತೂರಿ ರಂಗನ್ ವರದಿ ಮಲೆನಾಡಿನಲ್ಲಿ ಅನುಷ್ಠಾನವಾಗಲು ಬಿಡುವುದಿಲ್ಲ . ಈ ಬಗ್ಗೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ವರದಿ ಜಾರಿಯಾಗಬೇಕಾದರೆ 545 ದಿನ ಸಮಯಾವಕಾಶ ಇರುತ್ತದೆ. ಅಂತಹ ಸಂದರ್ಭದಲ್ಲಿ ಜನರಿಗೆ ಆಗುವಂತ ತೊಂದರೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟರೆ ವರದಿ ಅನುಷ್ಠಾನಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಪಶ್ಚಿಮಘಟ್ಟ ಅತಿ ಸೂಕ್ಷ್ಮ ವಲಯ ಎಂದು ಈ ಹಿಂದೆಯೇ ಕೇಂದ್ರ ಸರ್ಕಾರ ಘೋಷಿಸಿತ್ತು. ಇದರಲ್ಲಿ ದೇಶದ ಬೇರೆ ಬೇರೆ ರಾಜ್ಯಗಳೂ ಸೇರಿದ್ದವು. ಆದರೆ ಕೇರಳ ಅದನ್ನು ವಿರೋಧಿಸಿದ್ದರಿಂದ ಆ ರಾಜ್ಯ ಕೈಬಿಡಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪತ್ರ ವ್ಯವಹಾರ ಮಾಡುತ್ತಿದೆಯೇ ವಿನಃ ಮುಂಜಾಗ್ರತಾ ಕ್ರಮ ಅನುಸರಿಸದೇ ಇರುವುದರಿಂದ ಮತ್ತೂಮ್ಮೆ ಕಸ್ತೂರಿ ರಂಗನ್ ವರದಿ ಜಾರಿಯಾಗಿದೆ ಎಂದು ದೂಷಿಸಿದರು.
ಮಲೆನಾಡಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಮಾರಕ ಎಂದು ಕಾಂಗ್ರೆಸ್ ನಾಯಕರು ಹಾಗೂ ಸಚಿವರು ಹೇಳಿಕೆ ನೀಡಿದರೆ ಸಾಲದು. ಎಲ್ಲ ಸಚಿವರೊಳಗೊಂಡು ನಿಯೋಗ ತೆರಳಿ ಕೇಂದ್ರ ಸರ್ಕಾರಕ್ಕೆ ವರದಿಯಾಗುವ ಪರಿಣಾಮದ ಬಗ್ಗೆ ವಿವರಣೆ ನೀಡಬೇಕು. ವರದಿ ವ್ಯಾಪ್ತಿಯಿಂದ ರಾಜ್ಯವನ್ನು ಕೈಬಿಡಲು ಒತ್ತಡ ಹೇರಬೇಕು. ಈ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ಸಂಸದರೊಂದಿಗೆ ಸದ್ಯದಲ್ಲೇ ಕೇಂದ್ರದ ಪರಿಸರ ಮಂತ್ರಿಗಳನ್ನು ಹಾಗೂ ಪ್ರಧಾನಿಯನ್ನು ಭೇಟಿ ಮಾಡಿ ವರದಿ ಅನುಷ್ಠಾನ ಮಾಡಬೇಡಿ ಎಂದು ಮನವಿ ಸಲ್ಲಿಸಲಾಗುವುದು ಎಂದರು.