ಮೈಸೂರು: ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರದಲ್ಲಿ ಆರಂಭಿಸಲು ಉದ್ದೇಶಿಸಿರುವ ಟ್ರಿಣ್ ಟ್ರಿಣ್ ಸೈಕಲ್ ಯೋಜನೆಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸೈಕಲ್ ಸವಾರಿ ಮಾಡುವ ಮೂಲಕ ಸೈಕಲ್ ಯೋಜನೆಯ ಸಿದ್ಧತೆ ಪರಿಶೀಲನೆ ಮಾಡುವ ಜತೆಗೆ ಪ್ರಾಯೋಗಿಕವಾಗಿ ಚಾಲನೆಯನ್ನು ನೀಡಿದರು.
ನಗರದ ಆರ್‌ಟಿಒ ವೃತ್ತದಿಂದ ಪರಿಶೀಲನೆ ಆರಂಭಿಸಿದ ಜಿಲ್ಲಾಧಿಕಾರಿಗಳು, ನಗರದ ಪ್ರಮುಖ ಕಡೆಗಳಲ್ಲಿ ನಿರ್ಮಿಸಿರುವ ಟ್ರಿಣ್ ಟ್ರಿಣ್ ಸೇಕಲ್ ಸೇವಾ ಕೇಂದ್ರಗಳಿಗೆ ತೆರಳಿ ಅಲ್ಲಿನ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರಂದೀಪ್, ದೇಶದಲ್ಲಿ ಪ್ರಥಮ ಹಂತವಾಗಿ ಪಬ್ಲಿಕ್ ಬೈಸಿಕಲ್ ಶೇರಿಂಗ್ ಸೆಂಟರ್ ಆರಂಭವಾಗಿದ್ದು, ಇದು ನಗರವನ್ನು ಮಾಲಿನ್ಯ ಮುಕ್ತ ನಗರವನ್ನಾಗಿಸಲು ಸಹಾಯಕವಾಗಲಿದೆ ಎಂದು ಹೇಳಿದರು.
ಈ ಯೋಜನೆಯು ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಮೈಸೂರು ನಗರ ಪಾಲಿಕೆ ವತಿಯಿಂದ ವಿಶ್ವಬ್ಯಾಂಕ್‌ನ ಜಾಗತಿಕ ಪರ್ಯಾವರಣ ಸೌಲಭ್ಯ ಯೋಜನೆ ಅಡಿಯಲ್ಲಿ ನೀಡಿರುವ ಸಹಾಯಧನದಲ್ಲಿ ಜಾರಿಗೆ ತರಲಾಗುತ್ತಿದೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಮೇಯರ್ ಎಂ.ಜೆ.ರವಿಕುಮಾರ್, ಪಾಲಿಕೆ ಆಯುಕ್ತ ಜಿ.ಜಗದೀಶ್, ಅವರೊಂದಿಗೆ ಗ್ರೀನ್ ವ್ಹೀಲ್ ರೈಡ್ ಸಂಸ್ಥೆ ಎಂಜಿನಿಯರ್ ಸೈಕಲ್ ಸವಾರಿ ಮಾಡಿದ್ದು, ಎಲ್ಲರ ಗಮನ ಸೆಳೆಯಿತು.
ಗ್ರೀನ್ ವ್ಹೀಲ್ ರೈಡ್ ಕಂಪನಿಯು ನಗರದ 25 ಕಡೆಗಳಲ್ಲಿ ಸೈಕಲ್ ಡಾಕಿಂಗ್ ಕೇಂದ್ರಗಳನ್ನು ನಿರ್ಮಿಸಿದ್ದು, ನಿರ್ಮಾಣ ಮಾಡಿದ್ದಾರೆ, ಎಲ್ಲಾ ಡಾಕಿಂಗ್ ಹಬ್ ಸೆಂಟರ್‌ಗಳಲ್ಲಿ ಈಗಾಗಲೇ 32 ಕಡೆ ಪೂರ್ಣಗೊಂಡಿದ್ದು. ಪ್ರಾಯೋಗಿಕವಾಗಿ ಜನರಿಗೆ ಅರಿಯುವ ಮೂಡಿಸಲು ಸೇವೆ ಪ್ರಾರಂಭಿಸಲಾಗಿದ್ದು, ನಗರಾದ್ಯಂತ ಒಟ್ಟು 450 ಬೈಸಿಕಲ್‌ಗಳನ್ನು ತಯಾರು ಮಾಡಲಾಗಿದೆ. ಈ ಸೈಕಲ್‌ಗಳನ್ನು ಟ್ರಾಕ್ ಮಾಡುವ ಯಂತ್ರವನ್ನು ಸೈಕಲ್‌ಗೆ ಅಳವಡಿಸಿಲಾಗಿದ್ದು, ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಇರಲಿದೆ. ಬೈಸಿಕಲ್ ಸೆಂಟರ್‌ಗಳಲ್ಲಿ ಮಾಹಿತಿ ಫಲಕ ಅಳವಡಿಸಿ ಅದರ ಮೂಲಕ ರೋಟ್ ಮ್ಯಾಪ್ ಇದ್ದು, ಅದರ ಅನ್ವಯ ಬೈಸಿಕಲ್ ಸವಾರರು ಸವಾರಿ ಮಾಡಬಹುದಾಗಿದೆ.