ನಗರ: ಸರಕಾರಿ ಅಧಿಕಾರಿಗಳು ತಮ್ಮ ಹುದ್ದೆಗೆ ಅನುಗುಣವಾಗಿ ಸರಕಾರಿ ವ್ಯವಸ್ಥೆಗಳನ್ನೇ ಬಳಸಿಕೊಳ್ಳುವುದು ಮಾಮೂಲು. ಆದರೆ ಕೆ.ಎ.ಎಸ್. ಹಿರಿಯ ಶ್ರೇಣಿಯ ಅಧಿಕಾರಿ ಪುತ್ತೂರು ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಮಾತ್ರ ಇದಕ್ಕೆ ವಿಭಿನ್ನವಾಗಿ ಕಾಣಸಿಗುತ್ತಾರೆ.
ಖಾಸಗಿ ಜೀವನ ಮತ್ತು ಸರಕಾರಿ ಸೇವಾ ಜೀವನದಲ್ಲಿ ಸರಳತೆಗೆ ಮಾದರಿಯಾಗುವ ಅಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಅವರು, ಸರಕಾರಿ ರಜಾ ದಿನಗಳಲ್ಲಿ ತಮ್ಮ ಸ್ವಂತ ಸೈಕಲ್‌ನಲ್ಲಿ ಓಡಾಡುತ್ತಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದವರು. ಕನ್ನಡ ಮಾಧ್ಯಮದಲ್ಲಿ ಎಸೆಸೆಲ್ಸಿ ಓದಿದವರು. ಪ್ರಥಮ ಯತ್ನದಲ್ಲಿಯೇ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣತೆ ಪಡೆದು ಸರಕಾರಿ ಸೇವೆಗೆ ಸೇರಿದ್ದರು.
ರಜಾ ದಿನಗಳಲ್ಲಿ ಸರಕಾರಿ ವಾಹನಗಳನ್ನು ಬಳಸುವುದು ಸರಿಯಲ್ಲ. ನಮ್ಮ ಅಗತ್ಯಗಳಿಗೆ ಸ್ವಂತ ವಾಹನ ಇದ್ದರೆ ಅದನ್ನು ಬಳಸಬಹುದು. ಸೈಕಲ್ ಜನಸಾಮಾನ್ಯರ ವಾಹನ ಎಂದು ಹೇಳುವ ಎಚ್.ಕೆ. ಕೃಷ್ಣಮೂರ್ತಿ ಅವರಿಗೆ ಬಾಲ್ಯದಿಂದಲೂ ಸೈಕಲ್ ಮೇಲೆ ಹೋಗುವ ಅಭ್ಯಾಸ ಇತ್ತು. ಸರಕಾರಿ ಸೇವೆಗೆ ಸೇರಿದ ಬಳಿಕವೂ ಇದನ್ನು ಮುಂದುವರಿಸಿದ್ದೇನೆ ಎಂದವರು ಹೇಳುತ್ತಾರೆ.
ಸಂತೆಗೂ ಸೈಕಲ್‌ನಲ್ಲೇ
ರಜಾ ದಿನಗಳಲ್ಲಿ ಸೈಕಲ್ ಸವಾರಿಯನ್ನು ಇಷ್ಟ ಪಡುತ್ತೇನೆ. ಸೋಮವಾರ ಪುತ್ತೂರು ಸಂತೆಗೆ ತರಕಾರಿ ಖರೀದಿಸಲೂ ಸೈಕಲ್ ಮೇಲೆ ಬರುತ್ತೇನೆ. ಆದರೆ ಸುದ್ದಿಯಾಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಸಂದರ್ಭಗಳಲ್ಲಿ ಸೈಕಲ್ ಬಳಕೆ ಸಾಧ್ಯವಾಗುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಸರಳ ಉತ್ತರ ನೀಡಿದ್ದಾರೆ.