ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಟ್ರೆಂಡ್ ಮತ್ತೆ ಜನಪ್ರಿಯವಾಗುತ್ತಿದ್ದು, ಆ ಸಾಲಿಗೆ ಈಗ “ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ’ ಐತಿಹಾಸಿಕ ಕಾದಂಬರಿ ಸೇರ್ಪಡೆಯಾಗುತ್ತಿದೆ. ಕನ್ನಡದ ಜನಪ್ರಿಯ ಲೇಖಕ ಮತ್ತು ಕಾದಂಬರಿಕಾರ ಬಿ.ಎಲ್ ವೇಣು ಅವರ, ಹದಿನೈದನೇ ಶತಮಾನದ ಚಿತ್ರದುರ್ಗದ ನಾಯಕ ಅರಸರ ಪರಂಪರೆಯನ್ನು ಸಾರುವ ರಾಜಾ ಬಿಚ್ಚುಗತ್ತಿ ಭರಮಣ್ಣ ನಾಯಕ ಐತಿಹಾಸಿಕ ಕಾದಂಬರಿ ಈಗ “ಬಿಚ್ಚುಗತ್ತಿ’ ಹೆಸರಿನಲ್ಲಿ ಚಿತ್ರವಾಗಿ ಬೆಳ್ಳಿತೆರೆಮೇಲೆ ಬರಲು ತಯಾರಾಗುತ್ತಿದೆ.
ಬಿ.ಎಲ್ ವೇಣು ಅವರೇ “ಬಿಚ್ಚುಗತ್ತಿ’ ಚಿತ್ರಕ್ಕೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆಯುತ್ತಿದ್ದು, “ಡವ್’, “ಕಾಲೇಜ್ ಕುಮಾರ’, “ವಿಕ್ಟರಿ-2′ ಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ಹರಿ ಸಂತೋಷ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುಮಾರು ಒಂದೂವರೆ ವರ್ಷಗಳಿಂದ “ಬಿಚ್ಚುಗತ್ತಿ’ ಚಿತ್ರದ ಕಥೆ, ಚಿತ್ರಕಥೆ ಮತ್ತು ಇನ್ನಿತರ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಚಿತ್ರತಂಡ ಯೋಜನೆಯ ಪ್ರಕಾರ ಮುಂದಿನ ಡಿಸೆಂಬರ್ ವೇಳೆಗೆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.
ಸಾಯಿಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಿಗ್ ಬಜೆಟ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಹದಿನೈದನೇ ಶತಮಾನದ ಚಿತ್ರದುರ್ಗದ ಅರಸರ ಜೀವನ ಚಿತ್ರಣ ತೆರೆಮೇಲೆ ಅನಾವರಣವಾಗಲಿದೆ. ಇನ್ನು “ಬಿಚ್ಚುಗತ್ತಿ’ ಚಿತ್ರದ ಬಗ್ಗೆ ಒಂದಷ್ಟು ಸಂಗತಿಗಳನ್ನು ಬಿಚ್ಚಿಟ್ಟಿರುವ ನಿರ್ದೇಶಕ ಹರಿ ಸಂತೋಷ್, “ಗಂಡುಗಲಿ ಮದಕರಿ ನಾಯಕನಿಗಿಂತ ಸುಮಾರು ಎರಡು ತಲೆಮಾರು ಹಿಂದಿನ ಕಥೆ ಈ ಚಿತ್ರದಲ್ಲಿದೆ.
ಹದಿನೈದನೇ ಶತಮಾನದ ದುರ್ಗದ ಜನ-ಜೀವನ, ಪರಿಸರ, ಸಂಸ್ಕೃತಿ-ಶೈಲಿ ಎಲ್ಲವೂ ತೆರೆಮೇಲೆ ಬರುತ್ತದೆ. ಈ ಕಥೆಯನ್ನು ರಜನಿಕಾಂತ್, ಉಪೇಂದ್ರ, ಪ್ರಕಾಶ್ ರೈ ಅವರಂಥ ನಟರು ಮೆಚ್ಚಿಕೊಂಡಿದ್ದರು. ಟಿ.ಎಸ್ ನಾಗಾಭರಣ ಅವರಂಥ ನಿರ್ದೇಶಕರು ಈ ಕಥೆಯನ್ನು ಚಿತ್ರ ಮಾಡಲು ಯೋಚಿಸಿದ್ದರು. ಸುಮಾರು ಎಂಟು ವರ್ಷಗಳಿಂದ ಈ ಕಥೆಯನ್ನು ಚಿತ್ರ ಮಾಡಲು ಹಲವು ಪ್ರಯತ್ನಗಳು ನಡೆದಿದ್ದರೂ, ಕಾರಣಾಂತರಗಳಿಂದ ಚಿತ್ರವಾಗಿರಲಿಲ್ಲ.
ಆದರೆ ಈಗ ಇಂಥ ಅಪರೂಪದ ಕಥೆಯನ್ನು ಚಿತ್ರರೂಪದಲ್ಲಿ ನಿರ್ದೇಶನ ಮಾಡುವ ಅವಕಾಶ, ಅದೃಷ್ಟ ನನಗೆ ಸಿಕ್ಕಿದೆ’ ಎನ್ನುತ್ತಾರೆ. ಚಿತ್ರದ ಪೂರ್ವ ತಯಾರಿ ಬಗ್ಗೆ ಮಾತನಾಡುವ ಸಂತು, “ಇದೊಂದು ಐತಿಹಾಸಿಕ ಕಥೆಯಾಗಿದ್ದರಿಂದ ಚಿತ್ರದ ಸ್ಕ್ರಿಪ್ಟ್ ಕೆಲಸಕ್ಕೆ ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡಿದ್ದೇವೆ. ಚಿತ್ರದ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಮೂಲ ಲೇಖಕರಾದ ಬಿ.ಎಲ್ ವೇಣು ಅವರೆ ಬರೆಯುತ್ತಿದ್ದಾರೆ.
ಸದ್ಯಕ್ಕೆ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಅಂತಿಮವಾಗಿದ್ದು, ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ. ಕೆಲ ದಿನಗಳಲ್ಲಿ ಚಿತ್ರತಂಡದ ಸಂಪೂರ್ಣ ಮಾಹಿತಿ ನೀಡಲಿದ್ದೇವೆ’ ಎನ್ನುತ್ತಾರೆ. ಮೂಲಗಳ ಪ್ರಕಾರ ಹಿರಿಯ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದ್ದು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಂದ ಮೇಲಷ್ಟೆ ಚಿತ್ರದ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.
ಇತ್ತೀಚೆಗಷ್ಟೆ ಬಿ.ಎಲ್ ವೇಣು ಅವರ ಗಂಡುಗಲಿ ಮದಕರಿ ನಾಯಕ ಕಾದಂಬರಿ ಚಲನಚಿತ್ರವಾಗಿ ತೆರೆಗೆ ಬರಲು ಘೋಷಣೆಯಾಗಿತ್ತು. ಅದರ ಬೆನ್ನಲ್ಲೆ ಬಿ.ಎಲ್ ವೇಣು ಅವರ ಮತ್ತೂಂದು ಕಾದಂಬರಿ ಚಿತ್ರರೂಪ ಪಡೆದುಕೊಳ್ಳುತ್ತಿದೆ. ಒಟ್ಟಾರೆ ಕಾದಂಬರಿಗಳು ದೃಶ್ಯರೂಪದಲ್ಲಿ ತೆರೆಗೆ ಬರುತ್ತಿರುವುದು ಕನ್ನಡದ ಮಟ್ಟಿಗೆ ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ.