Advertisement

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ 19ನೆಯ ಶತಮಾನದಲ್ಲಿ ಶ್ರೀನಾಗಲಿಂಗಸ್ವಾಮಿ ಗಳೆಂಬ ಸಾಧುಗಳಿಂದ ಪ್ರವರ್ತಿತವಾದ ಮಠವಿದೆ.

Advertisement

ನಾಗಲಿಂಗಸ್ವಾಮಿಗಳು ಜನಿಸಿದ್ದು ರಾಯ ಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಿ ಗ್ರಾಮದ ಮೌನಾಚಾರ್ಯ ಮತ್ತು ನಾಗಮ್ಮ ದಂಪತಿಗೆ. ಇವರು ವಿಶ್ವಕರ್ಮ ಸಮುದಾಯದವರಾಗಿ ಕಮ್ಮಾರ ವೃತ್ತಿ ನಡೆಸು ತ್ತಿದ್ದರು. ಮೈಸೂರು ಪ್ರಾಂತದಲ್ಲಿದ್ದ ಕರಸ್ಥಲ ನಾಗ ಲಿಂಗಸ್ವಾಮಿ ಎಂಬ ಮಹಾಪುರುಷರ ಕಥೆಗಳನ್ನು ಮೌನಾಚಾರ್ಯರು ಹೇಳುತ್ತಿರುವಾಗ “ಪುತ್ರ ನೆಂದರೆ ನಿನ್ನಂತಿರಬೇಕು ಕರಸ್ಥಲಸ್ವಾಮಿಯೇ’ ಎಂದು ನಾಗಮ್ಮ ಬಯಸುತ್ತಿದ್ದರಂತೆ. ಅವರು ಸ್ವಪ್ನದಲ್ಲಿ ಕಾಣಿಸಿಕೊಂಡು ಕೊಟ್ಟ ಸೂಚನೆಯಂತೆ 1812ರಲ್ಲಿ ಹುಟ್ಟಿದ ಪುತ್ರರತ್ನಕ್ಕೆ ನಾಗಲಿಂಗನೆಂದೇ ನಾಮಕರಣ ಮಾಡಿದರು.

ಯಾವುದಕ್ಕೂ ಒಂದು ತಿರುವು ಬೇಕಲ್ಲ? ಒಂದು ದಿನ ಶಾಲೆಯಿಂದ ಮನೆಗೆ ಬಂದ ನಾಗಲಿಂಗ ಸ್ನಾನಕ್ಕೆಂದು ಸ್ನಾನಗೃಹದ ಕದತಟ್ಟಿ ಒಳಗೆ ಕಾಲಿಟ್ಟ. ಆ ಹೊತ್ತಿನಲ್ಲಿ ತಾಯಿ ನಾಗಮ್ಮ ಸ್ನಾನಕ್ಕೆ ಇಳಿದಿದ್ದಳು. ಏಕಾಏಕಿಯಾಗಿ ನಾಗಲಿಂಗ ಬಂದದ್ದರಿಂದ ಕೋಪಗೊಂಡಳು, ಬೈದಳೂ ಸಹ. ಆಗ ನಾಗಲಿಂಗ ಕೊಟ್ಟ ಉತ್ತರ ಮಾತ್ರ ಚಿಂತನೀಯ: “ನಾನು ಮೂಡಿಬಂದ ಹಾದಿಯನ್ನು, ಹಾಲುಂಡ ಹಾದಿಯನ್ನು ನೋಡಿದರೆ ನಿನಗೇನು ಕೇಡಾಯಿತು?’. ಮುಂದೆ ಶ್ರೀನಾಗಲಿಂಗ ಸ್ವಾಮಿ ಗಳೆಂದು ಪ್ರಸಿದ್ಧರಾಗಿ ಅವಧೂತಚರ್ಯೆ ಯಲ್ಲಿದ್ದು ನಿರಂತರ ಪ್ರವಾಸದ ಬಾಳನ್ನು ಸವೆಸಿದರು.

ಬೈಬಲ್‌ ಕೃತಿಯ ಮೂಲಕಥೆ ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮಕ್ಕೆ ಸಂಬಂಧಿಸಿದ್ದು. ಕಾಳಪ್ಪ ಬಡಿಗೇರ ಅವರು ಗ್ರಾಮದೇವತೆ ದ್ಯಾಮವ್ವನ ಅರ್ಚಕರೂ ಆಗಿದ್ದರು. ಮಂಗಳೂರಿ ನಲ್ಲಿ ಕ್ರೈಸ್ತ ಮಿಶನರಿಗಳು ಕ್ರೈಸ್ತ ಧರ್ಮ ಪ್ರಚಾರ ನಡೆಸಲು ಮುದ್ರಿಸಿದ ಬೈಬಲ್‌ ಪ್ರತಿ ಕಾಳಪ್ಪರಿಗೂ ತಲುಪಿತ್ತು. ದೇವಸ್ಥಾನದಲ್ಲಿ ಕಾಳಪ್ಪ ಬೈಬಲ್‌ ಪ್ರತಿ ಓದುವಾಗ ನಾಗಲಿಂಗಸ್ವಾಮಿಗಳು ಆಗಮಿಸಿದರು. ಸ್ವಾಮಿಗಳಿಗೆ ತಿಳಿಯಬಾರದೆಂದು ಕಾಳಪ್ಪ ಪುಸ್ತಕವನ್ನು ಬಚ್ಚಿಟ್ಟು ಸ್ವಾಮಿಗಳನ್ನು ಬರಮಾಡಿಕೊಂಡರು. ಸ್ವಾಮಿಗಳು ಬಚ್ಚಿಟ್ಟ ಸ್ಥಳದಿಂದ ಆ ಪುಸ್ತಕವನ್ನು ತಂದು ಅಲ್ಲೇ ಇದ್ದ ತೆಂಗಿನಕಾಯಿ ಸಿಪ್ಪೆ ಸುಲಿಯುವ ಕಬ್ಬಿಣದ ಗಡಾರಿಯಿಂದ “ನಡುರಾಜ್ಯಕ್ಕೆ ಜಡಿಯುತ್ತೇನೆ’ ಎಂದು ಹೇಳಿ ಪುಸ್ತಕದ ಮಧ್ಯಭಾಗಕ್ಕೆ ಜಡಿದು ರಂಧ್ರ ಮಾಡಿದರು. ಒಂದು ನಾಣ್ಯ ಹಾಕಿದರೆ ಆ ತೂತಿನಲ್ಲಿ ಹೊರಬರುತ್ತಿತ್ತು. “ತೂತಿನ ಭಾಗ ತನ್ನಷ್ಟಕ್ಕೆ (ಹಾಳೆಗಳು ಬೆಳೆದು) ಮುಚ್ಚಿಕೊಳ್ಳುತ್ತವೆ. ಸಂಪೂರ್ಣ ಮುಚ್ಚಿಕೊಂಡಾಗ ನಾನು ಮತ್ತೆ ಅವತರಿಸಿ ಬರುತ್ತೇನೆ’ ಎಂದು ಸ್ವಾಮಿಗಳು ತಿಳಿಸಿದರಂತೆ.

ಒಮ್ಮೆ ನವಲಗುಂದ ಸಮೀಪದ ಅಣ್ಣಿಗೇರಿ ಗ್ರಾಮಕ್ಕೆ ಸ್ವಾಮಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮುಸ್ಲಿಮರ ಮೊಹರಂ ಹಬ್ಬದ ಮೆರ ವಣಿಗೆ ನಡೆಯುತ್ತಿತ್ತು. ಇದರಲ್ಲಿ “ಪಂಜಾ’ ದೇವರನ್ನು (ಲೋಹದ ಆಕೃತಿ) ಹೊತ್ತು ಕುಣಿ ಯುವುದು ವಾಡಿಕೆ. “ಇದನ್ನು ಹೊತ್ತವರಿಗೆ ಮೈದುಂಬುವು ದಾದರೆ ನನಗೂ ಒಮ್ಮೆ ಕೊಡಿ. ನಾನೂ ಕುಣಿ ಯುತ್ತೇನೆ’ ಎಂದು ನಾಗಲಿಂಗಸ್ವಾಮಿಗಳು ಹೇಳಿದಾಗ ಕೊಡಲು ಒಪ್ಪಲಿಲ್ಲ. ಆಗ ಮುನ್ನುಗ್ಗಿ ಪಂಜಾದೇವರನ್ನು ಕೈಗೆತ್ತಿಕೊಂಡು ನವಲಗುಂದದತ್ತ ಓಡಿದರು. ಇತ್ತ ಇವರು ಮಠದ ಗುಹೆಯಲ್ಲಿರಿಸಿದರೆ, ಅತ್ತ ಮುಸ್ಲಿಮರು ಸಕಲಾಯುಧಗಳಿಂದ ಸಜ್ಜಿತರಾಗಿ ಓಡಿ ಬಂದರು. “ನಿಮ್ಮ ದೇವರಾದರೆ ಹೊತ್ತು ಹೋಗಿ, ನಮ್ಮ ದೇವರಾದರೆ ಬಿಟ್ಟು ಹೋಗಿ’ ಎಂದು ಬೆನ್ನಟ್ಟಿ ಬಂದ ಮುಸ್ಲಿಮರಿಗೆ ಸ್ವಾಮಿ
ಗಳು ಹೇಳಿದರಂತೆ. ಪಂಜಾ ದೇವರನ್ನು ಕೊಂಡೊಯ್ಯಲು ಪ್ರಯತ್ನಿಸಿ ದರೂ ಸಫ‌ಲವಾಗಲಿಲ್ಲವಂತೆ. ಘಟನೆಯ ಕುರುಹಾಗಿ ಇಂದಿಗೂ ಪಂಜಾ ದೇವರು ಪೂಜೆಗೊಳ್ಳುತ್ತಿದೆ. ಮೊಹರಂ ಹಬ್ಬದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ. ಮಠದ ಬಳಿಯ ಹಜರತ್‌ ಮೆಹಬೂಬ್‌ ಸುಬಾನಿ ದರ್ಗಾದ ಉರೂಸು ಹಬ್ಬಕ್ಕೆ ಮಠದ ಸ್ವಾಮೀಜಿಯವರನ್ನು ಸ್ವಾಗತಿಸುವ ಪರಂಪರೆ ಇದೆ.
ನಾಗಲಿಂಗಸ್ವಾಮಿಗಳು 30-6-1881ರಂದು ಇಹಲೋಕವನ್ನು ತ್ಯಜಿಸಿದರು. ಬೈಬಲ್‌ ಪುಸ್ತಕವನ್ನು ಕಾಪಿಟ್ಟುಕೊಂಡ ಕಾಳಪ್ಪ ಬಡಿಗೇರ ಸಾಧನೆಯಲ್ಲಿ ಮುಂದುವರಿದು ಇಹಲೋಕ ತ್ಯಜಿಸಿದರು. ಬಳಿಕ ಅವರ ಪುತ್ರ ನೀಲಕಂಠ ಪುಸ್ತಕವನ್ನು ನಾಗಲಿಂಗಸ್ವಾಮಿಗಳ ಗದ್ದುಗೆಗೆ ಸಮರ್ಪಿಸಿದರು. ಕ್ರೈಸ್ತರು ಕ್ರಿಸ್ಮಸ್‌ ದಿನದಂದು ಮಠದಲ್ಲಿ ಪುಸ್ತಕಕ್ಕೆ ಪೂಜೆ ಸಲ್ಲಿಸುತ್ತಾರೆ.

Advertisement

ನಾಗಲಿಂಗಸ್ವಾಮಿ ಮಠವೆಂಬ ಹೆಸರು ಬರುವ ಮೊದಲು ಮೌನೇಶ್ವರ ಮಠವೆಂಬ ಹೆಸರಿತ್ತು. ನಾಗಲಿಂಗಸ್ವಾಮಿಗಳ ಅನಂತರ ಕ್ರಮವಾಗಿ ಶ್ರೀಸಿದ್ದಯ್ಯಸ್ವಾಮಿಗಳು, ಶ್ರೀವೀರಯ್ಯ ಸ್ವಾಮಿಗಳು, ಇವರ ಪೂರ್ವಾಶ್ರಮದ ಮೊಮ್ಮಗ ಶ್ರೀಅಭಿನವ ನಾಗಲಿಂಗಸ್ವಾಮಿಗಳು ಪೀಠವನ್ನು ಅಲಂಕರಿಸಿದ್ದಾರೆ. ಅಭಿನವ ನಾಗಲಿಂಗಸ್ವಾಮಿಗಳ ಪೂರ್ವಾಶ್ರಮದ ಪುತ್ರ ಶ್ರೀವೀರೇಂದ್ರ ಸ್ವಾಮಿಗಳು 2007ರಿಂದ ಐದನೆಯ ಪೀಠಾಧಿ ಪತಿಗಳಾಗಿ ಧಾರ್ಮಿಕ ಕೈಂಕರ್ಯಗಳ ಜತೆ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಬೈಬಲ್‌ ಕೃತಿಯನ್ನು ವೀಕ್ಷಿಸಬಹುದಾಗಿದೆ. ಪುಸ್ತಕದ ರಂಧ್ರ ನಿಧಾನವಾಗಿ ಮುಚ್ಚಿಕೊಳ್ಳುತ್ತಿದೆ ಎಂಬ ನಂಬಿಕೆ ಭಕ್ತರಲ್ಲಿದೆ.

ಲಾಗಾಯ್ತಿನ ಸೋಜಿಗ!
ದೇವನೊಬ್ಬನೇ ಎಂದು ಎಲ್ಲರೂ ಹೇಳುವುದು ಹೌದಾದರೂ, ಯಾವುದನ್ನು ಸಾಬೀತುಪಡಿಸಲು ಅಸಾಧ್ಯವೋ ಅದು ಊಹೆಗೆ ಮಾತ್ರ ನಿಲುಕುವುದಾದರೂ, ಪುರಾತನ ವಟವೃಕ್ಷದಿಂದ ನಾನಾ ಟಿಸಿಲು-ಟೊಂಗೆ-ಬೀಳಲುಗಳು ಬಹಳ ದೂರ (ಮೂಲವೃಕ್ಷವನ್ನೇ ಮರೆಯುವಂತೆ) ಬೆಳೆಯುವಂತೆ ಎಲ್ಲ ಧರ್ಮಗಳಲ್ಲಿ ಬೆಳವಣಿಗೆಗಳಾಗಿ, ಅದೇ ಹೆಸರಿನಲ್ಲಿ ಒಳಿತುಗಳೂ ಕೆಡುಕು, ಕಾದಾಟಗಳೂ ಲಾಗಾಯ್ತಿನಿಂದ ನಿತ್ಯಸತ್ಯವಾಗಿರುವುದು ಮಾತ್ರ ಸೋಜಿಗ!

Advertisement

Udayavani is now on Telegram. Click here to join our channel and stay updated with the latest news.

Next