ಹೊಸದಿಲ್ಲಿ: ಭಾರತದಲ್ಲಿ ಧಾರ್ಮಿಕ ಅಲ್ಪ ಸಂಖ್ಯಾಕರ ಮೇಲೆ ಹಲ್ಲೆ, ಹತ್ಯೆ ಮತ್ತು ಕಿರುಕುಳಗಳಾಗುತ್ತಿವೆ ಎಂಬ ಅಮೆರಿಕದ ವಿದೇಶಾಂಗ ಇಲಾಖೆಯ ವರದಿಯನ್ನು ಭಾರತ ತಿರಸ್ಕರಿಸಿದೆ.
ಪಕ್ಷಪಾತದಿಂದ ಕೂಡಿದ ವರದಿಗಳನ್ನು ಆಧರಿಸಿ ನೀವು ಈ ವರದಿ ತಯಾರಿಸಿದ್ದೀರಿ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಓಟ್ ಬ್ಯಾಂಕ್ ರಾಜಕಾರಣ ನಡೆಯುತ್ತಿದೆ ಎಂದು ವಿದೇಶಾಂಗ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
ನಮ್ಮದು ಬಹುಪಕ್ಷೀಯ ಸಮಾಜ. ಭಾರತ ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳಿಗೆ ಬೆಲೆ ಕೊಡುತ್ತದೆ. ಅಮೆರಿಕದೊಂದಿಗಿನ ನಮ್ಮ ಚರ್ಚೆ ವೇಳೆ ಅಲ್ಲಿನ ವಿಷಯಗಳ ಕುರಿತು ಪ್ರಸ್ತಾವಿಸಿದ್ದೇವೆ. ಇದರಲ್ಲಿ ಅಮೆರಿಕದ ಜನಾಂಗೀಯ ದ್ವೇಷ, ಗನ್ ಹಿಂಸಾಚಾರ, ದ್ವೇಷ ಅಪರಾಧಗಳ ಬಗ್ಗೆಯೂ ಚರ್ಚಿಸಿದ್ದೇವೆ ಎಂದು ಹೇಳಿದೆ.
ಭಾರತದಲ್ಲಿ 2021ರಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಕೊಲೆ, ಹಲ್ಲೆಗಳಂಥ ಘಟನೆಗಳು ನಡೆದಿವೆ ಎಂದು ಅಮೆರಿಕದ ವರದಿ ಹೇಳಿದೆ. ಈ ವರದಿಯನ್ನು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಅವರು ಬಿಡುಗಡೆ ಮಾಡಿದ್ದಾರೆ.