ದೇವನಹಳ್ಳಿ: ಪರಿಸರ ಸಂರಕ್ಷಣೆ ಮತ್ತು ಮುಂದುವರಿಕೆ ಅಭಿಯಾನಕ್ಕೆ ಹೆಚ್ಚಿನ ಆದ್ಯತೆ ನೀಡುವುದಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು(ಬಿಎಲ್‌ಆರ್ ವಿಮಾನ ನಿಲ್ದಾಣ) ಸುಮಾರು 11 ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಿಬಿಎಂಪಿಯಿಂದ ಸ್ವೀಕರಿಸಿದೆ.
ರಸ್ತೆ ನಿರ್ಮಾಣಕ್ಕೆ ಬಳಕೆ: ಈ ಪ್ಲಾಸ್ಟಿಕ್ ಅನ್ನು ವಿಮಾನ ನಿಲ್ದಾಣ ಆವರಣದ ಒಳಗಿನ ರಸ್ತೆ ನಿರ್ಮಿಸುವ ಕಾರ್ಯಗಳಿಗಾಗಿ ಬಿಐಎಎಲ್ ಬಳಕೆ ಮಾಡಲಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ ಒಂದು ಬಾರಿ ಮಾತ್ರ ಬಳಸುವ ಪ್ಲಾಸ್ಟಿಕ್ ಅನ್ನು ನಿಷೇಧಿಸುವುದರೊಂದಿಗೆ ಪ್ಲಾಸ್ಟಿಕ್ ನಿರ್ವಹಣೆಯತ್ತ ಬಿಐಎಎಲ್ ಈಗಾಗಲೇ ಮೊದಲ ಹೆಜ್ಜೆಯಿಟ್ಟಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪ್ಲಾಸ್ಟಿಕ್ ಅನ್ನು ಬಿಐಎಎಲ್‌ನ ತಂಡಕ್ಕೆ ಹಸ್ತಾಂತರಿಸಿದರು.
ಶ್ಲಾಘನೀಯ: ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಬಿಕ ಮಾತನಾಡಿ, ಪ್ಲಾಸ್ಟಿಕ್‌ನಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಭೂಮಿಯೊಳಗೆ ಪ್ಲಾಸ್ಟಿಕ್ ಹೋಗುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಪ್ಲಾಸ್ಟಿಕ್ ನಿಂದ ಪರಿಸರದ ಅಂದಚೆಂದ ಹಾಳಾಗುತ್ತಿದೆ ಎಂದು ಹೇಳಿದರು.
50 ಟನ್‌ಗೂ ಹೆಚ್ಚಿನ ಪ್ಲಾಸ್ಟಿಕ್ ಅವಶ್ಯ: ಪರಿಸರ ಅಭಿವೃದ್ಧಿ ಹಾಗೂ ಸುಸ್ಥಿರತೆಯೆಡೆಗೆ ಗಮನ ಕೇಂದ್ರೀಕರಿಸಿರುವ ಬಿಐಎಎಲ್‌ಗೆ ಸುಮಾರು 50 ಟನ್‌ಗಳಿಗೂ ಹೆಚ್ಚಿನ ಪ್ಲಾಸ್ಟಿಕ್‌ನ ಅಗತ್ಯವಿದೆ. ಬಿಐಎಎಲ್ ಇತ್ತೀಚೆಗೆ ಪ್ಲಾಸ್ಟಿಕ್ ಅನ್ನು ಬಿಟುಮೆನ್ ಜೊತೆಗೆ ಮಿಶ್ರಣ ಮಾಡಿ ಪ್ರಯೋಗಾಲಯ ಪರೀಕ್ಷೆ ನಡೆಸಿತ್ತು. ಸ್ವೀಕಾರಾರ್ಹ ಮಿತಿಗಳಲ್ಲಿ ಫಲಿತಾಂಶಗಳು ಬಂದಿದ್ದವು. ವಿಪರೀತ ಹವಾಮಾನ ಸ್ಥಿತಿ ತಡೆದುಕೊಳ್ಳಬಲ್ಲದು.
ಸಾಧಾರಣ ರಸ್ತೆಗಳು ಮೂರು ವರ್ಷಗಳ ಕಾಲ ಉಳಿದುಕೊಳ್ಳುವ ನಿರೀಕ್ಷೆ ಇದ್ದರೆ, ಪ್ಲಾಸ್ಟಿಕ್ ಮಿಶ್ರಿತ ರಸ್ತೆಗಳು ದೀರ್ಘಬಾಳಿಕೆ ಹೊಂದಿವೆ. ಹೆಚ್ಚುವರಿ ಫಾಲಿಮರೈಸ್ಡ್ ರಸ್ತೆಗಳು ಪ್ಲಾಸ್ಟಿಕ್ ಹಾವಳಿ ನಿಭಾಯಿಸಲು ಅತ್ಯಂತ ಜನಪ್ರಿಯ ಮತ್ತು ಪರಿಸರ ಸ್ನೇಹಿ ಪರಿಹಾರಗಳಾಗಿ ಬೆಳಕಿಗೆ ಬರುತ್ತಿವೆ ಎಂದು ತಿಳಿಸಿದರು. ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್, ಬಿಬಿಎಂಪಿ ಆರೋಗ್ಯ ವಿಶೇಷ ಆಯುಕ್ತ ರವಿಕುಮಾರ್ ಸುರ್‌ಪುರ್ ಮತ್ತಿತರರಿದ್ದರು.