ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡಕ್ಕಾಗಿ ಭೂ ಸೇನಾ ನಿಗಮಕ್ಕೆ ಎರಡು ವರ್ಷಗಳ ಹಿಂದೆಯೇ 15 ಲಕ್ಷ ರೂ.ಗಳ ಚೆಕ್ ನೀಡಿದ್ದರೂ ನಿಗಮದವರು ತಳಪಾಯ ಹಾಕಿ ಕೈಬಿಟ್ಟಿದ್ದಾರೆ.
ಹೊಸ ಕಟ್ಟಡದ ಕನಸು ಇನ್ನೂ ನನಸಾಗಿಲ್ಲ. ರಾಜ್ಯ ಸರ್ಕಾರದ 15 ಲಕ್ಷ ರೂ. ಅನುದಾನದಲ್ಲಿ ಭೂಸೇನಾ ನಿಗಮದವರು ಕಟ್ಟಡದ ವಿನ್ಯಾಸ, ಬುನಾದಿ ಮತ್ತು ಕಾಲಂ ನಿರ್ಮಿಸಿಕೊಡುವ ಜವಾಬ್ದಾರಿ ಮಾತ್ರ. ಆದರೆ 2017 ರಲ್ಲಿಯೇ ಪಂಚಾಯತಿಯಿಂದ ನಿಗಮಕ್ಕೆ 15 ಲಕ್ಷ ರೂ. ಗಖಳ ಚೆಕ್ ನೀಡಿದ್ದರೂ ಇದುವರೆಗೂ ಕಟ್ಟಡ ನೆಲ ಬಿಟ್ಟು ಮೇಲೆದ್ದಿಲ್ಲದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಗ್ರಾಪಂ ಆರಂಭವಾದಾಗಿನಿಂದಲೂ ಕಂದಾಯ ಇಲಾಖೆಗೆ ಸೇರಿದ ಛಾವಡಿಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಈ ಕಟ್ಟಡ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲಿಯೇ ಇರುವ ಚಿಕ್ಕದಾದ ಯುವಕ ಮಂಡಳದ ಕೊಠಡಿಯಲ್ಲಿ ಗ್ರಾಪಂ ಕಾರ್ಯಾಲಯ ಕಾರ್ಯ ನಿರ್ವಹಿಸುತ್ತಿದೆ. ಈ ಪಂಚಾಯಿತಿ ಅಡರಕಟ್ಟಿ, ಕೊಂಡಿಕೊಪ್ಪ, ಅಡರಕಟ್ಟಿ ತಾಂಡಾ ಮತ್ತು ಹರದಗಟ್ಟಿ ಗ್ರಾಮಗಳನ್ನು ಒಳಗೊಂಡಿದೆ.
ಗ್ರಾಪಂ ಸದಸ್ಯರು ಸೇರಿ ಸಾರ್ವಜನಿಕರು ಕಿಷ್ಕಿಂದೆಯಂತಿರುವ ಕಟ್ಟಡದಲ್ಲಿಯೇ ಕಾಲ ಕಳೆಯಬೇಕಾಗಿದೆ. ಸ್ವಂತ ಕಟ್ಟಡ ಹೊಂದುವ ಉದ್ದೇಶದಿಂದ ಎನ್‌ಆರ್‌ಇಜಿಯಲ್ಲಿ 16.25 ಲಕ್ಷ, 14ನೇ ಹಣಕಾಸಿನಲ್ಲಿ 3.75 ಲಕ್ಷ ಹಣ ತೆಗೆದಿರಿಸಲಾಗಿದೆ. ಒಟ್ಟು 40 ಲಕ್ಷ ರೂ.ಗಳ ಅಂದಾಜು ವೆಚ್ಚದ ಕಟ್ಟಡಕ್ಕೆ ಬೇಕಾಗುವ 5 ಲಕ್ಷ ರೂ. ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕಟ್ಟಡ ಪೂರ್ಣ ಗೊಳಿಸುವ ಉದ್ದೇಶವನ್ನು ಗ್ರಾಪಂ ಆಡಳಿತ ಮಂಡಳಿ ಹೊಂದಿದೆ. ಕಳೆದ ಒಂದು ವರ್ಷದ ಹಿಂದೆಯೇ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿದ್ದರೂ ಭೂಸೇನಾ ನಿಗಮದ ನಿರ್ಲಕ್ಷ್ಯದಿಂದಾಗಿ ಕಟ್ಟಡ ಕಾಮಗಾರಿಯ ಹೊಣೆ ಮುಗಿಯುವಂತೆ ಕಾಣುತ್ತಿಲ್ಲ.
ಭೂಸೇನಾ ನಿಗಮದವರಿಗೆ 2 ವರ್ಷಗಳ ಹಿಂದೆಯೇ ಚೆಕ್ ನೀಡಲಾಗಿದೆ. ಕಳೆದ ಏಳೆಂಟು ತಿಂಗಳಿಂದ ತಮ್ಮ ಪಾಲಿನ ಕಾಮಗಾರಿ ಪೂರ್ಣಗೊಳಿಸಿ ಪಂಚಾಯಿತಿಗೆ ಹಸ್ತಾಂತರಿಸಿದರೆ ಕಟ್ಟಡವನ್ನು ಗ್ರಾಪಂ ವತಿಯಿಂದ ಪೂರ್ಣಗೊಳಿಸಲು ಸಿದ್ಧರಿದ್ದೇವೆ
. –ಗಣೇಶ ನಾಯಕ, ಗ್ರಾಪಂ ಅಧ್ಯಕ್ಷ
ಭೂಸೇನಾ ನಿಗಮದವರಿಗೆ ಕಾಮಗಾರಿ ಪೂರ್ಣಗೊಳಿಸಿ ಪಂಚಾಯಿತಿಗೆ ಹಸ್ತಾಂತರಿಸುವಂತೆ ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳ ಮೂಲಕ ತಿಳಿಸಿದ್ದರೂ ಸ್ಪಂದಿಸುತ್ತಿಲ್ಲ. ಈ ಬಾರಿಯ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.
–ಎಸ್.ಆರ್. ಸೋಮಣ್ಣವರ, ಪಿಡಿಒ