ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಭೂಪೇಂದ್ರ ಪಟೇಲ್ ಗುಜರಾತ್ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಧ್ಯಾಹ್ನ 2 ಗಂಟೆಗೆ ಹೊಸ ಸೆಕ್ರೆಟರಿಯೇಟ್ ಬಳಿಯ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಮೋದಿ ಮತ್ತು ಶಾ ಅವರಲ್ಲದೆ, ಬಿಜೆಪಿ ಆಡಳಿತವಿರುವ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಸಮಾರಂಭದಲ್ಲಿ ಭಾಗವಹಿಸಿದ್ದರು.
ಯುಪಿ ಸಿಎಂ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ತ್ರಿಪುರಾ ಸಿಎಂ ಮಾಣಿಕ್ ಸಹಾ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿದ್ದಾರೆ.
ಚುನಾವಣಾ ಫಲಿತಾಂಶದ ನಂತರ ಹೊಸ ಸರಕಾರ ರಚನೆಗಾಗಿ 60 ವರ್ಷದ ಪಟೇಲ್ ಅವರು ಶುಕ್ರವಾರ ತಮ್ಮ ಇಡೀ ಸಂಪುಟದೊಂದಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರು ಶನಿವಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು, ನಂತರ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮುಂದಿನ ಸರಕಾರ ರಚನೆಗೆ ಹಕ್ಕು ಮಂಡಿಸಿದ್ದರು.
ಇತ್ತೀಚೆಗಷ್ಟೇ ಮುಗಿದ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ, ಪಟೇಲ್ ಘಟ್ಲೋಡಿಯಾ ಕ್ಷೇತ್ರದಿಂದ ಭಾರಿ ಮತಗಳ ಅಂತರದಿಂದ ಗೆದ್ದಿದ್ದಾರೆ. 182 ಸದಸ್ಯ ಬಲದ ಸದನದಲ್ಲಿ ದಾಖಲೆಯ 156 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸತತ ಏಳನೇ ಅವಧಿಯನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 17 ಮತ್ತು ಎಎಪಿ 5 ಕ್ಷೇತ್ರಗಳನ್ನು ಗೆದ್ದಿದೆ.
ಆರ್ ಎಸ್ ಎಸ್ ಹಿನ್ನೆಲೆಯ, ಕಡ್ವಾ ಪಾಟಿದಾರ್ ಉಪ-ಗುಂಪಿನಿಂದ ಮುಖ್ಯಮಂತ್ರಿಯಾದ ಮೊದಲಿಗರಾಗಿರುವ ಪಟೇಲ್ ಸೆಪ್ಟೆಂಬರ್ 2021 ರಲ್ಲಿ ವಿಜಯ್ ರೂಪಾನಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಮೊದಲ ಬಾರಿ ಪ್ರಮಾಣವಚನ ಸ್ವೀಕರಿಸಿದ್ದರು.