ಭರಮಸಾಗರ: ಚಿತ್ರದುರ್ಗ ತಾಲೂಕಿನ ಗಡಿ ಗ್ರಾಮಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದ್ದು ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಕೋಗುಂಡೆ, ಬಹದ್ದೂರ್‌ಘಟ್ಟ, ಕೋಡಿಹಳ್ಳಿ, ಎಮ್ಮನಘಟ್ಟ, ಕಾಕಬಾಳ್, ಕಾಲಗೆರೆ ಹಾಗೂ ದಾವಣಗೆರೆ ತಾಲೂಕಿನ ಮುಚ್ಚನೂರು, ಹಾಲೇಕಲ್, ಚದರಗೊಳ್ಳ, ಹೆಬ್ಟಾಳು, ಹುಣಸೆಕಟ್ಟೆ, ಲಕ್ಕಮುತ್ತೇನಹಳ್ಳಿ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ.
ಬೆಳಗಿನ ಜಾವ 5:30ರಿಂದ ಮಳೆ ಆರಂಭವಾಯಿತು. ಒಂದೇ ಗಂಟೆಯಲ್ಲಿ ಕೋಗುಂಡೆ ಗ್ರಾಮದ ಸಾಗಲಗಟ್ಟೆ ರಸ್ತೆಯಲ್ಲಿರುವ ಹಳ್ಳಕ್ಕೆ ಕಾಕಬಾಳ್, ಕಾಲಗೆರೆ ಕಡೆಯಿಂದ ನೀರು ಹರಿದು ಬಂದಿದೆ. ಇದರಿಂದ ಚೆಕ್‌ಡ್ಯಾಂ ತುಂಬಿ ರಸ್ತೆ ಮೇಲೆ ಮಳೆ ನೀರು ಎರಡು ಅಡಿಗೂ ಎತ್ತರದಲ್ಲಿ ಹರಿಯಿತು. ಮುಂದೆ ಸಾಗುವ ವೇಳೆ ಸಣ್ಣ ಜಲಪಾತವನ್ನು ಸೃಷ್ಟಿಸಿರುವುದು ನೋಡುಗರ ಕಣ್ಮನ ಸೆಳೆಯುತ್ತಿತ್ತು.
ಹಳ್ಳದಲ್ಲಿ ನೀರು ಹರಿಯುತ್ತಿರುವ ಸುದ್ದಿ ಹರಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ವೀಕ್ಷಿಸಿದರು. ಈ ಹಳ್ಳದ ಮೂಲಕ ಹರಿಯುವ ನೀರು ದಾವಣಗೆರೆ ತಾಲೂಕಿನ ತುಪ್ಪದಹಳ್ಳಿ ಕೆರೆಗೆ ಬಿಳಿಚೋಡು ಮಾರ್ಗವಾಗಿ ಸುಮಾರು ಹತ್ತು ಕಿಮೀ ಉದ್ದಕ್ಕೆ ಹರಿದು ಕೆರೆ ಸೇರುತ್ತದೆ. ಗ್ರಾಮದ ಮತ್ತೂಂದು ಖಾಲಿ ಹೊಂಡಕ್ಕೆ ಡಿಸೇಲ್ ಎಂಜಿನ್ ಬಳಕೆ ಮಾಡಿ ಹಳ್ಳದಿಂದ ನೀರನ್ನು ಲಿಫ್ಟ್ ಮಾಡುವ ಮೂಲಕ ಅದನ್ನು ಭರ್ತಿ ಮಾಡುವ ಕೆಲಸದಲ್ಲಿ ರೈತರು
ಮಗ್ನರಾಗಿದ್ದರು.