Advertisement

ಈ ವಾರ ಬಹುನಿರೀಕ್ಷಿತ ಬ್ರಹ್ಮಚಾರಿಯ ಆಗಮನ!

09:55 AM Nov 29, 2019 | Naveen |

ಉದಯ್ ಕೆ ಮೆಹ್ತಾ ನಿರ್ಮಾದಲ್ಲಿ ರೂಪುಗೊಂಡಿರುವ ಬಹುನಿರೀಕ್ಷಿತ ಬ್ರಹ್ಮಚಾರಿ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಗಾಣುತ್ತಿದೆ. ಈ ಚಿತ್ರ ಇದುವರೆಗೂ ಸಾಗಿ ಬಂದಿರುವ ರೀತಿಯೇ ರೋಚಕ. ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕವೇ ಹಂತ ಹಂತವಾಗಿ ಪ್ರೇಕ್ಷರನ್ನೆಲ್ಲ ಬ್ರಹ್ಮಚಾರಿ ಸೆಳೆದುಕೊಂಡಿದ್ದೇ ಒಂದು ಸೋಜಿಗ. ಈ ಮೂಲಕವೇ ಈ ಸಿನಿಮಾದಲ್ಲಿ ಗಹನವಾದದ್ದೇನೋ ಇದೆಯೆಂಬ ನಂಬಿಕೆ ಪ್ರತೀ ಪ್ರೇಕ್ಷಕರಲ್ಲಿಯೂ ಹುಟ್ಟಿಕೊಂಡಿದೆ. ಹೀಗೆ ಪ್ರತೀ ಹೆಜ್ಜೆಯಲ್ಲಿಯೂ ಕುತೂಹಲ ಮೂಡಿಸುತ್ತಾ ಸಾಗಿ ಬಂದಿದ್ದ ಬ್ರಹ್ಮಚಾರಿ ಈ ವಾರ ಪ್ರೇಕ್ಷಕರೆದುರು ಪ್ರತ್ಯಕ್ಷವಾಗಲಿದ್ದಾನೆ.

Advertisement

ಇದು ಚಂದ್ರಮೋಹನ್ ನಿರ್ದೇಶನ ಮಾಡಿರುವ ಚಿತ್ರ. ಈ ಹಿಂದೆ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಎಂಬೆರಡು ಸಿನಿಮಾಗಳನ್ನು ನಿರ್ದೇಶನ ಮಾಡೋ ಮೂಲಕ ಯಶಸ್ವಿಯಾಗಿದ್ದವರು ಚಂದ್ರಮೋಹನ್. ಇವೆರಡೂ ಚಿತ್ರಗಳು ಪ್ರೇಕ್ಷಕರನ್ನು ಸೆಳೆದುಕೊಂಡಿದ್ದದ್ದು ಭರಪೂರ ಹಾಸ್ಯದ ಝಲಕ್ಕಿನಿಂದ. ಒಂದಿಡೀ ಸಿನಿಮಾದಲ್ಲಿ ಹಾಸ್ಯದ ಹೊಳೆ ಹರಿಸುವಂಥಾ ಕಲೆ ಸಿದ್ಧಿಸಿಕೊಂಡು ಯಶ ಕಂಡಿದ್ದ ಅವರು ಭಿನ್ನವಾದ ಕಥೆಯೊಂದಿಗೆ ಮತ್ತಷ್ಟು ಹಾಸ್ಯದ ಹೊನಲಿನೊಂದಿಗೆ ಬ್ರಹ್ಮಚಾರಿಯನ್ನು ರೂಪಿಸಿದ್ದಾರೆ. ಅದರ ಖದರ್ ಎಂಥಾದ್ದಿದೆ ಅನ್ನೋದು ಈಗಾಗಲೇ ಪ್ರತೀ ಪ್ರೇಕ್ಷಕರಿಗೂ ಸ್ಪಷ್ಟವಾಗಿದೆ.

ಬ್ರಹ್ಮಚಾರಿಯ ಆಂತರ್ಯದಲ್ಲಿ ಯಾರೂ ಎಣಿಸಲಾಗದಂಥಾ ಕಥೆಯಿದೆ. ಇಲ್ಲಿ ಹಾಸ್ಯವೇ ಪ್ರಧಾನ ಅಂಶವಾಗಿದ್ದರೂ ಸಹ ಗಟ್ಟಿಯಾದ ಕಥೆ ಮತ್ತು ಎಲ್ಲರಿಗೂ ಒಂದೇ ಸಲಕ್ಕೆ ಕನೆಕ್ಟಾಗುವಂಥಾ ನಿರೂಪಣೆಯೊಂದಿಗೆ ಚಂದ್ರ ಮೋಹನ್ ಈ ಸಿನಿಮಾವನ್ನು ರೂಪಿಸಿದ್ದಾರಂತೆ. ಇದರಲ್ಲಿ ಕೇವಲ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟನೆ ಪಾತ್ರಗಳು ಮಾತ್ರವಲ್ಲದೇ ಎಲ್ಲ ಪಾತ್ರಗಳೂ ವಿಶೇಷವಾಗಿವೆಯಂತೆ. ದತ್ತಣ್ಣ, ಅಚ್ಯುತ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಪದ್ಮಜಾ ರಾವ್ ಮುಂತಾದವರು ವಿಶಿಷ್ಟವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಪಾತ್ರಗಳೆಲ್ಲವೂ ಪ್ರೇಕ್ಷಕರಿಗೆ ಮಾತ್ರವಲ್ಲದೇ ಅದನ್ನು ನಿರ್ವಹಿಸಿರುವ ಕಲಾವಿದರಿಗೂ ಹೊಸತೆನ್ನಿಸುವಂತಿದೆ. ರವಿ ಕುಮಾರ್ ಛಾಯಾಗ್ರಹಣ, ಮುರಳಿ ಅವರ ನೃತ್ಯ ನಿರ್ದೇಶನ ಮತ್ತು ಧರ್ಮವಿಶ್ ಅವರ ಸಂಗೀತ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next