Advertisement

ಬ್ರಹ್ಮಚಾರಿಯ ಬಗ್ಗೆ ನೀನಾಸಂ ಸತೀಶ್ ಹೇಳಿದ್ದೇನು?

09:54 AM Nov 29, 2019 | Team Udayavani |

ಅಯೋಗ್ಯ, ಚಂಬಲ್ ಮತ್ತು ಸಿಂಗ ಚಿತ್ರಗಳ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದ ನೀನಾಸಂ ಸತೀಶ್ ಆ ನಂತರದಲ್ಲಿ ನಟಿಸಿರೋ ಚಿತ್ರ ಬ್ರಹ್ಮಚಾರಿ. ಚಂಬಲ್ ಚಿತ್ರದಲ್ಲಿಯಂತೂ ಖಡಕ್ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದ ಸತೀಶ್ ಬ್ರಹ್ಮಚಾರಿಯ ಮೂಲಕ ನಗಿಸೋದನ್ನೇ ಪ್ರಧಾನವಾಗಿರುವ, ಬೇರೆ ಬೇರೆ ಚಹರೆಗಳನ್ನು ಹೊಂದಿರುವ ಪಾತ್ರದಲ್ಲಿ ಮಿಂಚಿದ್ದಾರೆ. ಈಗಾಗಲೇ ಸತೀಶ್ ಅವರ ಫಸ್ಟ್ ನೈಟ್ ಫಜೀತಿಗಳು ಫೇಮಸ್ ಆಗಿವೆ. ಟ್ರೇಲರ್‌ನ ಡೈಲಾಗುಗಳೆಲ್ಲವೂ ಜನರನ್ನು ಸೆಳೆದುಕೊಂಡಿವೆ. ಆದರೆ ಇದರ ಉದ್ದಕ್ಕೂ ಇಂಥಾ ಡೈಲಾಗುಗಳಿರಬಹುದಾ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಅದಕ್ಕೆ ಖುದ್ದು ಸತೀಶ್ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ.

Advertisement

ಇದು ಪಕ್ಕಾ ಮನೋರಂಜನಾತ್ಮಕ ಚಿತ್ರ. ಮೇಲು ನೋಟಕ್ಕೆ ಡಬಲ್ ಮೀನಿಂಗ್‌ನಂತೆ ಕಂಡರೂ ಯಾವುದೇ ವಲ್ಗರ್ ಅನ್ನಿಸುವಂಥಾ ಸಂಭಾಷಣೆ ಚಿತ್ರದಲ್ಲೆಲ್ಲೂ ಇಲ್ಲ. ಇದು ಪಕ್ಕಾ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ಸಣ್ಣ ಮುಜುಗರವೂ ಇಲ್ಲದೆ ಇದು ಎಲ್ಲರನ್ನು ನೋಡಿಸಿಕೊಂಡು ಹೋಗುತ್ತದೆ ಎಂಬ ಮಾತುಗಳನ್ನು ಸತೀಶ್ ಅವರಾಡಿದ್ದಾರೆ. ಈ ಮೂಲಕ ಈ ಸಿನಿಮಾದ ಮತ್ತೊಂದು ಗುಣಲಕ್ಷಣವನ್ನು ಪ್ರೇಕ್ಷಕರೆದುರು ತೆರೆದಿಟ್ಟಿದ್ದಾರೆ. ಚಿತ್ರ ತಂಡವೂ ಇದೇ ಮಾತುಗಳನ್ನು ಹೇಳುತ್ತದೆ. ಬ್ರಹ್ಮಚಾರಿ ರೂಪುಗೊಂಡಿರೊ ಪರಿಯೇ ಭಿನ್ನವಾಗಿರೋದರಿಂದ ಅದರ ಮೋಡಿಗೆ ಪ್ರತೀ ಪ್ರೇಕ್ಷಕರೂ ತಲೆದೂಗಲಿದ್ದಾರೆಂಬ ಭರವಸೆ ಎಲ್ಲರಲ್ಲಿದೆ.

ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ಇಲ್ಲಿ ಈವರೆಗೂ ಕಾಣಿಸಿರದಂಥಾ ಪಾತ್ರಗಳಲ್ಲಿ ಲಕಲಕಿಸಿದ್ದಾರೆ. ಮಿಕ್ಕುಳಿದ ಪಾತ್ರಗಳೂ ಅಷ್ಟೇ ಸೊಗಸಾಗಿವೆಯಂತೆ. ದತ್ತಣ್ಣ, ಅಚ್ಯುತ್ ಕುಮಾರ್, ಶಿವರಾಜ್ ಕೆ ಆರ್ ಪೇಟೆ, ಅಶೋಕ್, ಪದ್ಮಜಾ ರಾವ್ ಮುಂತಾದವರು ವಿಶಿಷ್ಟವಾದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆ ಪಾತ್ರಗಳೆಲ್ಲವೂ ಪ್ರೇಕ್ಷಕರಿಗೆ ಹೊಸಾ ಅನುಭುತಿ ತುಂಬುವಂತಿವೆಯಂತೆ. ರವಿ ಕುಮಾರ್ ಛಾಯಾಗ್ರಹಣ, ಮುರಳಿ ಅವರ ನೃತ್ಯ ನಿರ್ದೇಶನ ಮತ್ತು ಧರ್ಮವಿಶ್ ಅವರ ಸಂಗೀತ ಈ ಚಿತ್ರಕ್ಕಿದೆ. ಬ್ರಹ್ಮಚಾರಿಯ ಬಗ್ಗೆ ಈಗಾಗಲೇ ಒಂದಷ್ಟು ವಿಚಾರಗಳು ಬಯಲಾಗಿವೆ. ಆದರೆ ಬಿಚ್ಚಿಟ್ಟಿದ್ದಕ್ಕಿಂತ ಬಚ್ಚಿಟ್ಟ ವಿಚಾರಗಳು ಬಹಳಷ್ಟಿವೆ. ಮತ್ತವುಗಳು ರೋಚಕವಾಗಿವೆ. ಅದೆಲ್ಲವೂ ಈ ವಾರವೇ ನಿಮ್ಮೆಲ್ಲರೆದುರು ತೆರೆದುಕೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next