ಕನ್ನಡ ಚಿತ್ರವೊಂದರ ಮೋಶನ್ ಪೋಸ್ಟರ್ ಒಂದನ್ನು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಿಲೀಸ್ ಮಾಡಿದ್ದಾರೆ! ಸ್ವತಃ ಚಿತ್ರತಂಡವೇ ಇಂಥ ಹ ದೊಂದು ಸುದ್ದಿಯನ್ನು ಹಂಚಿಕೊಂಡಿದೆ. ಇದನ್ನು ಕೇಳಿ ನೀವು ಅಚ್ಚರಿ ಪಡಬಹುದು ಅಥವಾ “ಭ್ರಮೆ’ ಎಂದೂ ಮೂಗು ಮುರಿಯಬಹುದು. ಹಾಗೇನಾದರೂ ಇದನ್ನು ನೀವು “ಭ್ರಮೆ’ ಎಂದು ಭಾವಿಸಿದ್ದರೆ, ನಿಮ್ಮ ಊಹೆ ಖಂಡಿತ ನಿಜ.
ಹೌದು, ಬಹುತೇಕ ಹೊಸ ಪ್ರತಿಭೆಗಳು ಸೇರಿ ನಿರ್ಮಿಸುತ್ತಿರುವ “ಭ್ರಮೆ’ ಚಿತ್ರದ ಮೋಶನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಮೆರಿಕಾದ ವೈಟ್‌ಹೌಸ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಭ್ರಮೆ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ರೀತಿಯಲ್ಲಿ ತೋರಿಸುವಂಥ ಪೋಸ್ಟರ್‌ಗಳನ್ನು ಚಿತ್ರತಂಡ ಬಿಡುಗಡೆಗೊಳಿಸಿದ್ದು, ಪ್ರೇಕ್ಷಕರನ್ನು ಒಂದು ಕ್ಷಣ “ಭ್ರಮೆ’ಯಲ್ಲಿ ತೇಲುವಂತೆ ಮಾಡಿದೆ.
ಈ ಹಿಂದೆ ನೆನಪಿರಲಿ ಪ್ರೇಮ್ ಅಭಿನಯದ “ಮಸ್ತ್ ಮೊಹಬ್ಬತ್’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದ, ಚರಣ್‌ರಾಜ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. “ಹನೀಷ್ ರಾಜ್ ಫಿಲಂಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ “ಭ್ರಮೆ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಸದ್ಯ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇಂಥದ್ದೊಂದು “ಭ್ರಮೆ’ ಹುಟ್ಟಿಸುವ ಮೋಶನ್ ಪೋಸ್ಟರ್ ಬಿಡುಗಡೆ ಮಾಡಿದೆ.
ಸೈಕಲಾಜಿಕಲ್ ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ನವೀನ್ ರಘು, ಮಜಾ ಟಾಕೀಸ್ ಪವನ್, ಮುತ್ತುರಾಜ್, ಹಾಗೂ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೊನಲ್ಲಿ ಅಭಿನಯಿಸಿದ್ದ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ ಮುಂತಾದ ಕಡೆಗಳಲ್ಲಿ “ಭ್ರಮೆ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ಸಿನಿಟೆಕ್ ಸೂರಿ ಛಾಯಾಗ್ರಹಣ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಹಾಗೂ ಸಂಗೀತ ನಿರ್ದೇಶನವಿದೆ. ಚಿತ್ರ ದಲ್ಲಿ ಒಂದು ಹಾಡು ಹಾಗೂ ಒಂದು ಸಾಹಸ ಸನ್ನಿವೇಶವಿದೆ.