ಬೆಂಗಳೂರು: “ಭೋವಿ ಅಭಿವೃದ್ಧಿ ನಿಗಮ ಈಗಷ್ಟೇ ಆರಂಭವಾಗಿದೆ. ಈಗಾಗಲೇ 50 ಕೋಟಿ ರೂ. ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಹಣವನ್ನು ಹೆಚ್ಚಿಸಲಾಗುವುದು. ಭೋವಿ ಜನಾಂಗದ ಮಠಕ್ಕೂ ಹಣ ನೀಡಲಾಗುವುದು. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕಲ್ಪಿಸಲಾಗುವುದು. ರಾಜಕೀಯದಲ್ಲೂ ಪ್ರಾತಿನಿಧ್ಯ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಡಾ.ಪ್ರಭಾಕರ ಕೋರೆ ಕನ್ವೆನ್ಸ್ನ್ ಸೆಂಟರ್‌ನಲ್ಲಿ ಭಾನುವಾರ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ’ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. “ನಿಮ್ಮ ಜತೆ (ಭೋವಿ ಸೇರಿ ಹಿಂದುಳಿದ ವರ್ಗಗಳು) ನಾವಿದ್ದೇವೆ; ನಮ್ಮ ಜತೆ ನೀವು ಇರಿ’ ಎಂದು ಮನವಿ ಮಾಡಿದ ಅವರು, “ಯಾರ್ಯಾರೋ ಪೊಳ್ಳು ಭರವಸೆಗಳನ್ನು ನೀಡಿ ದಿಕ್ಕುತಪ್ಪಿಸುತ್ತಾರೆ. ಆದರೆ, ಅವುಗಳಿಗೆ ಮಾರುಹೋಗಬೇಡಿ’ ಎಂದೂ ಕಿವಿಮಾತು ಹೇಳಿದರು. ಎದುರಾಳಿಗಳನ್ನು ಪುಡಿ ಮಾಡ್ತೀವಿ: ಶಾಸಕ ಶಿವರಾಜ್ ತಂಗಡಗಿ ಮಾತ ನಾಡಿ, “ನಮ್ಮದು ಕಲ್ಲು ಒಡೆದು ಪುಡಿ ಮಾಡುವ ಜನಾಂಗ. ನಿಮ್ಮ (ಸಿಎಂ) ಎದುರಾಳಿಗಳನ್ನೂ ಪುಡಿ ಮಾಡುತ್ತೇವೆ. ಧೈರ್ಯವಾಗಿ ಮುನ್ನುಗ್ಗಿ, ನಿಮ್ಮೊಂದಿಗೆ ನಾವಿದ್ದೇವೆ’ ಎಂದು ಹೇಳಿದರು. ಬರುವ ವಿಧಾನಸಭೆ ಚುನಾವಣೆಯಲ್ಲಿ ಜನಾಂಗ ಕನಿಷ್ಠ ಎಂಟು ಮಂದಿಗೆ “ಬಿ’ ಫಾರಂ ನೀಡಬೇಕು. ನೂತನ ಭೋವಿ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 500 ಕೋಟಿ ರೂ. ನೀಡಬೇಕು. ಅಲ್ಲದೆ, ಭೋವಿ ಜನಾಂಗಕ್ಕೆ ಕಲ್ಲು ಒಡೆಯಲು ಜಿಲ್ಲಾಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಆದ್ದರಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಅವಕಾಶ ನೀಡುವಂತೆ ಸೂಚಿಸಬೇಕೆಂದು ಆಗ್ರಹಿಸಿದರು.
ಎಚ್ಚರದಿಂದಿರಿ: ಸಚಿವ ಎಚ್. ಆಂಜನೇಯ ಮಾತನಾಡಿ, ಭೋವಿ ಜನಾಂಗದ ಕುಲದೇವರು ಸಿದ್ದರಾಮೇಶ್ವರ. ಭೋವಿಗುರುಪೀಠಾಧಿಪತಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ. ಅದೇ ರೀತಿ, ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಾಯಕರು ಕೂಡ ಸಿದ್ದರಾಮಯ್ಯ. ಸವಲತ್ತುಗಳನ್ನು ಕೊಟ್ಟರೆ, ಸಹಿಸದ ಜನ ಇದ್ದಾರೆ. ಅವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಬಾಗಲಕೋಟೆಯ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ರಾಜ್ಯದ 30 ಜಿಲ್ಲೆಗಳಲ್ಲೂ ನಿಗಮದ ಉಪಕಚೇರಿಗಳನ್ನು ತೆರೆಯಬೇಕು. ರಟ್ಟೆ ನಂಬಿ ಬದುಕುವ ಭೋವಿ ಜನಾಂಗಕ್ಕೆ ಅನ್ನ ಕೊಡುವುದರ ಬದಲಿಗೆ ಉದ್ಯೋಗ ಭಾಗ್ಯ ಕಲ್ಪಿಸಬೇಕು. ಆಗ ಸರ್ಕಾರಕ್ಕೆ ನಾವೂ ತೆರಿಗೆ ಕಟ್ಟುತ್ತೇವೆ ಎಂದು ಹೇಳಿದರು.
ಶಾಸಕರಾದ ಮಾನಪ್ಪ ವಜ್ಜಲ, ಮುನಿರತ್ನ, ಮಾಜಿ ಶಾಸಕ ಗೂಳಿಹಟ್ಟಿ ಶೇಖರ್, ನಿಗಮದ ಅಧ್ಯಕ್ಷ ಜಿ.ವಿ. ಸೀತಾರಾಮ್, ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.