Advertisement

ಹೊಟ್ಟೆಪಾಡಿಗಾಗಿ ಭೋಪಾಲ್‌ನಿಂದ ಕೋಟೆಗೆ ವಲಸೆ

01:05 PM Feb 28, 2017 | |

ಎಚ್‌.ಡಿ.ಕೋಟೆ: ಮಳೆ ಇಲ್ಲದೆ ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದೆ ಕೆಲಸ ಹುಡುಕಿಕೊಂಡು ಮಧ್ಯಪ್ರದೇಶದ ರಾಜಾಧಾನಿ ಭೋಪಾಲ್‌ನಿಂದ ಕಮ್ಮಾರ ಕುಟುಂಬವೊಂದು ಎಚ್‌.ಡಿ. ಕೋಟೆ ಪಟ್ಟಣಕ್ಕೆ ಗುಳೆ ಬಂದು ಕಬ್ಬಿಣದ ಕೆಲಸ ಮಾಡುತ್ತಿದೆ. 

Advertisement

ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಬರಗಾಲ ತಾಂಡವವಾಡುತ್ತಿದೆ. ಸರ್ಕಾರ ಮಾಡುತ್ತಿರುವ ಬರ ನಿರ್ವಹಣೆಯಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಇಡೀ ಕುಟುಂಬವೇ ಸಾವಿರಾರು ಕಿಮೀ ದೂರ ಕೆಲಸ ಹುಡುಕಿಕೊಂಡು ಬಂದಿದೆ.  ಕುಟುಂಬಕ್ಕೆ ಎಚ್‌.ಡಿ.ಕೋಟೆ ಮೊದಲೂ ಅಲ್ಲ ಕೊನೆಯೂ ಅಲ್ಲ. ಕಬ್ಬಣದ ಕೆಲಸ ಸಿಗುವವರೆಗೂ ಇಲ್ಲಿರುವ ಕುಟುಂಬ ನಂತರ ಮುಂದಿನ ಊರು ನೋಡುತ್ತದೆ.

ಸಾವಿರಾರು ಕಿಮೀ ದೂರದಿಂದ ಜೀವನೋಪಾಯ ಕ್ಕಾಗಿ ಪುಟಾಣಿ ಮಕ್ಕಳೊಂದಿಗೆ ಗುಳೇ ಬಂದಿರುವ ಕಬ್ಬಿಣದ ಕೆಲಸ ಮಾಡುವ ಈ ಶ್ರಮಜೀವಿಗಳಿಗೆ ಗೊತ್ತಿರುವುದು ಕುಲುಮೆ ಕೆಲಸವೊಂದೇಯಂತೆ. ಹಾಗಾಗಿ ಭೋಪಾಲ್‌ನಲ್ಲಿ ಬರಗಾಲ ಬಿದ್ದಾಗ ಕೃಷಿ ಕೆಲಸ ನಿಂತು ಹೋದಾಗ ಇವರಿಗೆ ಕೆಲಸ ಸಿಗುವುದೆಂತು. ಸ್ವಲ್ಪ ಮಳೆಯಾಗುವ ಕಡೆ ಕೆಲಸ ಹುಡುಕಿಕೊಂಡು ಬಂದಿದ್ದಾರೆ.

ಇವರು ಹೋದ ಕಡೆಗಳಲ್ಲಿ ಸ್ಥಳದಲ್ಲಿಯೇ ಕುಲುಮೆ ಹೂಡಿ ಲಾರಿ, ಬಸ್‌ಗಳ ಕಬ್ಬಿಣದ ಕಟ್ಟೆ ಪ್ಲೇಟುಗಳನ್ನು ಬಳಸಿಕೊಂಡು ನೇಗಿಲು, ಹಾರೆ, ಕೊಡಲಿ, ಪಿಕಾಶಿ, ಗುದ್ದಲಿ, ಕುಡುಗೋಲು, ಮಚ್ಚು, ಚಾಕು ಸೇರಿದಂತೆ ವಿವಿಧ ಕಬ್ಬಿಣದ ಕೃಷಿ ಪರಿಕರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಾರೆ. ಅದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಾರೆ.

ರಸ್ತೆ ಬದಿಯಲ್ಲಿರುವ ಕುಲುಮೆಗಳಲ್ಲಿ ಅವರೇ ಮಾಡುವ ವಸ್ತುಗಳ ಜೊತೆ ಹಳೆದ ವಸ್ತುಗಳಿಗೂ ಸಾಣೆ ಹಿಡಿಯುವ, ರಿಪೇರಿ ಮಾಡಿಕೊಡುವ ಕೆಲಸವನ್ನೂ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಜನರ ಚೌಕಾಸಿ ವ್ಯವಹಾರದ ಜೊತೆ ಇವರೂ ಚೌಕಾಸಿ ಮಾಡಿ ಬರುವ ಹಣದಲ್ಲಿ ಜೀವನ ಮಾಡಬೇಕು.

Advertisement

ಹೆಂಗಸರೇನೂ ಕಮ್ಮಿ ಇಲ್ಲ: ನಮ್ಮಲ್ಲಿ ಕುಲುಮೆ ಕೆಲಸಗಳನ್ನು ಪುರುಷರೇ ಮಾಡುವುದು ಹೆಚ್ಚು. ಆದರೆ ಭೋಪಾಲ್‌ನಿಂದ ಬಂದಿರುವ ಕುಟುಂಬದ ಮಹಿಳೆಯರು ಕಾದ ಕಬ್ಬಿಣಕ್ಕೆ ಸುತ್ತಿಗೆಯಿಂದ ಹಾಕುವ ಏಟುಗಳನ್ನು ನಮ್ಮ ಪುರುಷರೂ ಹಾಕುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಆ ಮಹಿಳೆಯರು ಏಟು ಹಾಕುತ್ತಿರ್ತುತಾರೆ. ಕಾದ ಕಬ್ಬಿಣವು ಬಿಸಿ ಕಳೆದುಕೊಳ್ಳುವುದರೊಳಗೆ ಕಬ್ಬಿಣಕ್ಕೆ ಆಕಾರ ಕೊಡುವ ಕುಲುಮೆ ಕೆಲಸ ಹೆಚ್ಚಿನ ದೈಹಿಕ ಸಾಮರ್ಥ್ಯ ಬೇಡುವ ಕೆಲಸ. ಆ ಮಹಿಳೆಯರು ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಾರೆ.

ಶಿಕ್ಷಣ ವಂಚಿತ ಮಕ್ಕಳು: ಭೂಪಾಲ್‌ ಕಾರ್ಮಿಕ ರೊಟ್ಟಿಗೆ ಬಂದಿರುವ ಸುಮಾರು ಪುಟಾಣಿ ಮಕ್ಕಳು ಪೋಷಕರೊಟ್ಟಿಗೆ ಬಯಲಿನಲ್ಲಿ ಆಶ್ರಯ ಪಡೆದು ಕೊಂಡಿವೆ. ಪ್ರತಿ 5-6 ದಿನಗಳಿಗೊಮ್ಮೆ ಬೇರೆಡೆ ಸ್ಥಳಾಂತರಗೊಳ್ಳುವ ಪುಟಾಣಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಂದೇ ಕಡೆ ಕನಿಷ್ಠ 3, 4 ತಿಂಗಳಾದರೂ ವಾಸ್ತವ್ಯ ಹೂಡಿದರೆ ಟೆಂಟ್‌ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬಹುದು.

ಆದರೆ ಪದೇಪದೆ ಸ್ಥಳಾಂತರಗೊಳ್ಳುವ ಭೋಪಾಲ್‌ ಮಂದಿ ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸದಿದ್ದರೆ ಮಕ್ಕಳೂ ಕೂಡ ಶಿಕ್ಷಣ ವಂಚಿತರಾಗಿ ತಂದೆ ತಾಯಿಗಳಂತೆಯೇ ಜೀವನೋಪಾಯಕ್ಕೆ ಅಲೆಮಾರಿ ಜೀವನ ನಡೆಸಬೇಕಾಗುತ್ತದೆ. ಇದನ್ನು ಭೋಪಾಲ್‌ವುಂದಿ ಅರಿತುಕೊಳ್ಳಬೇಕಿದೆ. ಜೀವನೋಪಾಯಕ್ಕಾಗಿ ಸಾವಿರಾರು ಕಿಮೀ ದೂರದಿಂದ ಮನೆ ತೊರೆದು ಜೀವನೋಪಾಯಕ್ಕಾಗಿ ವಲಸೆ ಬಂದಿರುವ ಕುಲುಮೆ ಕಾರ್ಮಿಕರು ಸೇರಿದಂತೆ ಅವರ ಪುಟಾಣಿಗಳಿಗೆ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆಯಾಗಿದೆ.

ಸರ್ಕಾರ ಎಲ್ಲರಿಗೂ ಎಷ್ಟು ಅಂತ ಸಹಾಯ ಹಸ್ತ ಚಾಚಲು ಸಾಧ್ಯ, ನಮ್ಮ ತೋಳುಗಳು ಗಟ್ಟಿಯಾಗಿವೆ ನಾವು ಎಲ್ಲಿ ಹೋದರೂ ಸರ್ಕಾರದ ಸಹಾಯ ಇಲ್ಲದೆ ಜೀವನ ನಡೆಸುತ್ತೇವೆ ಅನ್ನುವ ನಂಬಿಕೆ ನಮಗಿದೆ.
-ಗೋಧಾಬಾಯಿ

* ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next