ಭೋಪಾಲ್: ಪತ್ನಿ ಮುಂದೆ ʼಅಂಕಲ್ʼ ಎಂದು ಸಂಬೋಧಿಸಿ ಕರೆದಿದ್ದಕ್ಕೆ ವ್ಯಕ್ತಿಯೊಬ್ಬ ಅಂಗಡಿಯಾತನನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿರುವುದು ವರದಿಯಾಗಿದೆ.
ಈ ಕುರಿತು ಭೋಪಾಲ್‌ನ ಜತ್ಖೇಡಿ ಪ್ರದೇಶದಲ್ಲಿ ಸೀರೆ ಅಂಗಡಿಯನ್ನು ಹೊಂದಿರುವ ವಿಶಾಲ್ ಶಾಸ್ತ್ರಿ ಎನ್ನುವಾತ ಪೊಲೀಸರಿಗೆ ದೂರು ನೀಡಿದ್ದಾನೆ.
ಆರೋಪಿ ರೋಹಿತ್ ಎಂಬಾತ ಶನಿವಾರ (ನ.2ರಂದು) ವಿಶಾಲ್ ಅಂಗಡಿಗೆ ತನ್ನ ಪತ್ನಿಯೊಂದಿಗೆ ಸೀರೆ ಖರೀದಿಸಲು ಬಂದಿದ್ದ. ದಂಪತಿಗಳು ದೀರ್ಘಕಾಲದವರೆಗೆ ಹಲವಾರು ಸೀರೆಗಳನ್ನು ನೋಡಿದ್ದಾರೆ ಆದರೆ ಯಾವುದನ್ನೂ ಆಯ್ಕೆ ಮಾಡಲಿಲ್ಲ. ಇದೇ ಸಮಯದಲ್ಲಿ ವಿಶಾಲ್ ರೋಹಿತ್‌ಗೆ ಯಾವ ಬೆಲೆಯ ಸೀರೆಗಳನ್ನು ಖರೀದಿಸಲು ಬಯಸುತ್ತೀರಿ ಎಂದು ಕೇಳಿದ್ದಾರೆ. ಇದಕ್ಕೆ ರೋಹಿತ್ 1000 ರೂ. ರೇಂಜ್ ನಲ್ಲಿ ತೋರಿಸಿ ಎಂದಿದ್ದಾರೆ. ಆದರೆ ಅದಕ್ಕಿಂತ ಹೆಚ್ಚು ಬೆಲೆಬಾಳುವ ಸೀರೆಯನ್ನು ಸಹ ಖರೀದಿಸಬಹುದು ಎಂದು ವಿಶಾಲ್ ಹೇಳಿದ್ದಾರೆ.
ಇದೇ ವೇಳೆ ವಿಶಾಲ್, “ಅಂಕಲ್, ನಾನು ನಿಮಗೆ ಬೇರೆ ರೇಂಜ್ ಗಳಲ್ಲಿಯೂ ಸೀರೆಗಳನ್ನು ತೋರಿಸುತ್ತೇನೆ” ಎಂದಿದ್ದಾರೆ. ಇದನ್ನು ಕೇಳಿ ಕೆರಳಿದ ರೋಹಿತ್, ನನ್ನನ್ನು ಮತ್ತೆ ʼಅಂಕಲ್ʼ ಎಂದು ಕರೆಯಬೇಡಿ ಎಂದಿದ್ದು ಇದೇ ವಿಚಾರಕ್ಕೆ ಇಬ್ಬರ ನಡುವೆ ದೊಡ್ಡದಾಗಿಯೇ ವಾಗ್ವಾದ ನಡೆದಿದೆ.
ಇದಾದ ಬಳಿಕ ರೋಹಿತ್ ಅಂಗಡಿಯಿಂದ ಹೊರಬಂದಿದ್ದಾರೆ. ಸ್ವಲ್ಪ ಸಮಯದ ನಂತರ ಕೆಲ ಸ್ನೇಹಿತರೊಂದಿಗೆ ರೋಹಿತ್ ವಿಶಾಲ್ ಅಂಗಡಿಗೆ ಮತ್ತೆ ಬಂದಿದ್ದು, ಅವರನ್ನು ಅಂಗಡಿಯಿಂದ ರಸ್ತೆಗೆ ಎಳೆದುಕೊಂಡು ಹೋಗಿ ದೊಣ್ಣೆ, ಬೆಲ್ಟ್‌ಗಳಿಂದ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಕುರಿತು ವಿಶಾಲ್ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಶೀಘ್ರದಲ್ಲಿ ರೋಹಿತ್ ಹಾಗೂ ಸ್ನೇಹಿತರನ್ನು ಬಂಧಿಸಲಾಗುವುದೆಂದು ಹೇಳಿದ್ದಾರೆ.