ಭೋಪಾಲ್ : ಮಧ್ಯಪ್ರದೇಶದ ಭೋಪಾಲ್‌ನ ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಆಸ್ಪತ್ರೆಯ ತುರ್ತು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕು ನವಜಾತ ಶಿಶುಗಳು ಸಾವನ್ನಪ್ಪಿವೆ.
ನಗರದ ಕಮಲಾ ನೆಹರು ಮಕ್ಕಳ ಆಸ್ಪತ್ರೆಯ ವಿಶೇಷ ಶಿಶು ನಿಗಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ.
ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ, ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾವು ಇತರರೊಂದಿಗೆ ಸ್ಥಳಕ್ಕೆ ತಲುಪಿ ಮಕ್ಕಳನ್ನು ಪಕ್ಕದ ವಾರ್ಡ್‌ಗೆ ಸ್ಥಳಾಂತರಿಸಿದ್ದೇವೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.
ಐಸಿಯು ಹೊಂದಿರುವ ಆಸ್ಪತ್ರೆಯ ಮೂರನೇ ಮಹಡಿಯಲ್ಲಿರುವ ವಾರ್ಡ್‌ನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು,ಈ ವೇಳೆ ಘಟನಾ ಸ್ಥಳಕ್ಕೆ 8 -10 ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಫತೇಘರ್ ಅಗ್ನಿಶಾಮಕ ಠಾಣೆಯ ಉಸ್ತುವಾರಿ ಜುಬರ್ ಖಾನ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಳ್ತಂಗಡಿ ತಾಲೂಕಿನ ಏಕೈಕ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ ದೈವಾಧೀನ
ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಈ ಬಗ್ಗೆ ಮಾತನಾಡಿದ್ದು, ಘಟನೆಯನ್ನು ದುರದೃಷ್ಟಕರವಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದಕ್ಕೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕೆಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಈ ದುರಂತಕ್ಕೆ ಕಾರಣ ತಿಳಿಯಲು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ವೈದ್ಯಕೀಯ ವಿಭಾಗ ಹಾಗೂ ವೈದ್ಯಕೀಯ ಶಿಕ್ಷಣ ವಿಭಾಗದ ಎಸಿಎಸ್ ಮೊಹಮ್ಮದ್ ಸುಲೇಮಾನ್ ಈ ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.