ಮುಂಬಯಿ: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಿವಂಡಿ ಸ್ಥಳೀಯ ಕಚೇರಿಯ ವತಿಯಿಂದ ಭಿವಂಡಿ ಪರಿಸರದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಜೂ. 16 ರಂದು ಸಂಜೆ ನಗರದ ವರಳಾದೇವಿ ರೋಡ್‌ನ ಶ್ರೀ ಗುರುನಾರಾಯಣ ಮಂದಿರದಲ್ಲಿ ಜರಗಿತು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೂಜಾರಿ ಟ್ರಾವೆಲ್ಸ್‌ನ ಮಾಲಕ ರಾಜೇಶ್ ಎಸ್. ಪೂಜಾರಿ, ನಿತ್ಯಾನಂದ ಭಕ್ತ ಸೇವಾ ಮಂಡಳಿ ಭಿವಂಡಿ ಇದರ ಅಧ್ಯಕ್ಷ ಜಯರಾಮ್ ಎಂ. ಪೂಜಾರಿ ಮತ್ತು ಪದ್ಮನಾಭ ಎಸ್. ಪೂಜಾರಿ ಅವರ ಮಾತೋಶ್ರೀ ಪುಷ್ಪಾ ಎಸ್. ಪೂಜಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅತಿಥಿ-ಗಣ್ಯರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು. ಸುಮಾರು 60 ಕ್ಕೂ ಮಿಕ್ಕಿದ ತುಳು-ಕನ್ನಡಿಗರ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಗಣ್ಯರು ಶಾಲಾ ಪರಿಕರಗಳನ್ನು ವಿತರಿಸಿ ಶುಭಹಾರೈಸಿದರು. ಮುಖ್ಯ ಅತಿಥಿ ಜಯರಾಮ ಎಂ. ಪೂಜಾರಿ ಇವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್ ದಾನಿಗಳ ಸಹಕಾರದಿಂದ ಇಂತಹ ಒಳ್ಳೆಯ ಸಮಾಜಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಇನ್ನು ಮುಂದೆಯೂ ಇಂತಹ ಕಾರ್ಯಕ್ರಮ ಗಳಿಗೆ ದಾನಿಗಳು ಕೈಜೋಡಿಸಿದರೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮತ್ತು ಪ್ರತಿಭಾ ಪುರಸ್ಕಾರದಂತಹ ಯೋಜನೆಯು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗುತ್ತದೆ ಎಂದು ನುಡಿದರು.
ಸಮಿತಿಯ ಕಾರ್ಯಾಧ್ಯಕ್ಷ ಮೋಹನ್‌ದಾಸ್ ಎ. ಪೂಜಾರಿ ಇವರು ಮಾತನಾಡಿ, ವಿದ್ಯಾರ್ಥಿಗಳು ಸಮಿತಿಯು ನೀಡಿದ ಸಹಕಾರವನ್ನು ಶ್ರೀ ನಾರಾಯಣ ಗುರುಗಳ ಪ್ರಸಾದ ಎಂದು ಸ್ವೀಕರಿಸಿ ಉನ್ನತ ಶಿಕ್ಷಣವನ್ನು ಪಡೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಮಾಜಕ್ಕೆ ಮತ್ತು ಪಾಲಕರಿಗೆ ಹೆಸರು ತರಬೇಕು. ಮಕ್ಕಳು ಸಮಾಜ ಸೇವೆಯಲ್ಲಿ ಎಳವೆಯಿಂದ ತೊಡಗಿಸಿಕೊಂಡಾಗ ಸಮಾಜ ಉದ್ಧಾರವಾಗುತ್ತದೆ ಎಂದರು.
ವೇದಿಕೆಯಲ್ಲಿ ಉಪಕಾರ್ಯಾಧ್ಯಕ್ಷ ರತ್ನಾಕರ ಜಿ. ಪೂಜಾರಿ, ಮಹಿಳಾ ವಿಭಾಗದ ಪ್ರತಿನಿಧಿ ಶಶಿಕಲಾ ಡಿ. ಪೂಜಾರಿ, ಯುವ ವಿಭಾಗದ ಪ್ರತಿನಿಧಿ ಪ್ರಶಾಂತ್ ಎನ್. ಪೂಜಾರಿ, ಸ್ಥಳೀಯ ಕಚೇರಿಯ ಗೌರವ ಕಾರ್ಯದರ್ಶಿ ಜಯಂತ್ ಎಸ್. ಸಾಲ್ಯಾನ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಯುವ ವಿಭಾಗ, ಮಹಿಳಾ ವಿಭಾಗ, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಗೌರವ ಕಾರ್ಯದರ್ಶಿ ಜಯಂತ್ ಎಸ್. ಸಾಲ್ಯಾನ್ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಮತ್ತು ಪರಿಸರದ ಗಣ್ಯರಿಗೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.