Advertisement
“ಇಲ್ಲಿ ನೋಡಿ. ಹನಿ ನೀರಾವರಿಯಲ್ಲಿ ರಾಗಿ ಹೇಗೆ ಬೆಳೆದಿದೆ ಅಂತ’ ಮಹೇಶ್ ತಮ್ಮ ಹೊಲದ ಮಧ್ಯೆ ನಿಂತು ವಿವರಿಸುತ್ತಿದ್ದರು. ಹನಿ ನೀರಾವರಿಯಲ್ಲಿ ಟೊಮೇಟೊ ಮಾತ್ರ ಬೆಳೆಯುತ್ತಿದ್ದ ಅವರಿಗೆ ಇದು ಹೊಸ ಅನುಭವ. ಏನೋ ಹೊಸದನ್ನು ಸಾಧಿಸಿದ್ದೇನೆಂಬ ಖುಷಿ. ಚಿಕ್ಕ ಮುಕ್ಕೋಡ್ಲು ಗ್ರಾಮದಲ್ಲೇ ಈ ರೀತಿ ರಾಗಿ ಬೆಳೆದ ಮೊದಲಿಗ ನಾನು ಎನ್ನುವ ಹೆಮ್ಮೆ.
Related Articles
Advertisement
ಇದೀಗ ಟೊಮೆಟೊ ಬೆಳೆಯುತ್ತಿದ್ದ ಜಾಗದಲ್ಲಿ ಉಳುಮೆ ಮಾಡಿ ರಾಗಿ ನಾಟಿ ಮಾಡಿದ್ದಾರೆ. ಒಂದೆಡೆ ನಾಟಿ ಮಾಡಲೆಂದು ರಾಗಿ ಪೈರಿನ ಮಡಿ ಎದ್ದು ನಿಂತಿದೆ. ಟೊಮೆಟೊ ಸಾಲುಗಳ ನಡುವೆ ಹಾದು ಹೋಗಿದ್ದ ಡ್ರಿಪ್ ಪೈಪ್‌ಗ್ಳು ಈಗ ರಾಗಿ ಪೈರಿನ ಮಧ್ಯೆ ಇವೆ. ಮೂರ್‍ನಾಲ್ಕು ದಿವಸಕ್ಕೊಮ್ಮೆ ಹೊಲ ಪೂರ್ತಿ ನೆನಸಿದರೆ ರಾಗಿ ಚೆನ್ನಾಗಿ ಬರುತ್ತದೆ ಎನ್ನುವ ಆತ್ಮವಿಶ್ವಾಸ ಅವರಿಗೆ.
ಮುಂಗಾರು ಹಂಗಾಮಿನ ರಾಗಿ ಕೈಕೊಡ್ತಾ ಇದೆ ಎಂದು ಗೊತ್ತಾಗುತ್ತಿದ್ದಂತೆ ಅದರಲ್ಲೇ ಸ್ವಲ್ಪ ಭಾಗಕ್ಕೆ ಡ್ರಿಪ್ ಪೈಪ್‌ನಲ್ಲಿ ನೀರು ಹಾಯಿಸುವ ಪ್ರಯೋಗ ಮಾಡಿದ್ದರು ಮಹೇಶ್. ನೀರುಣಿಸಿದ ಪೈರು ಚೆನ್ನಾಗಿ ಬೆಳೆದು ಕಾಳು ಕಟ್ಟಿತ್ತು. ಹದಿನೈದು ಗುಂಟೆ ಜಮೀನಿನಲ್ಲಿ ಹತ್ತು ಚೀಲ ರಾಗಿ ಬರಬಹುದೆಂಬ ಲೆಕ್ಕಾಚಾರ ಹೇಳುತ್ತಾರೆ. ಒಂದು ಟ್ರ್ಯಾಕ್ಟರ್ ಲೋಡ್ ಹುಲ್ಲು ಸಿಗಬಹುದೆಂಬ ಅಂದಾಜು ಮಾಡುತ್ತಾರೆ. ಒಕ್ಕಣೆ ಮಾಡಲೆಂದು ಹರಡಿದ್ದ ಹುಲ್ಲಿನ ರಾಶಿಯಿಂದ ಒಂದು ತೆನೆ ಕಿತ್ತು ಅಂಗೈಯಿಂದ ಉಜ್ಜಿ ಕಾಳು ವಿಂಗಡಿಸಿ ನೋಡಿ ಕಾಳು ಎಷ್ಟು ಕೆಂಪಗಿದೆ. ಇದನ್ನು ಮಾರಿದ್ರೆ ಕೇಜಿಗೆ ನಲ್ವತ್ತು ರೂ. ಖಂಡಿತಾ ಸಿಗುತ್ತೆ ಎಂದು ವಿವರಣೆ ನೀಡುತ್ತಾರೆ.
ಈ ಒಂದು ಸಣ್ಣ ಪ್ರಯೋಗದ ಯಶಸ್ಸೇ ಅವರನ್ನು ಹನಿ ನೀರಾವರಿಯಲ್ಲಿ ರಾಗಿ ಬೆಳೆಯುವಂತೆ ಪ್ರೇರೇಪಿಸಿತು. ಟೊಮೆಟೊ ಬೆಳೆಗೆ ವಿರಾಮ ಕೊಟ್ಟು ರಾಗೀನೇ ಸೈ ಎನ್ನುವಂತೆ ಮಾಡಿತು. ಕಳೆದ ಒಂದೆರಡು ತಿಂಗಳುಗಳಿಂದ ಟೊಮೆಟೊ ಬೆಳೆದವರೂ ಕೂಡಾ ಏನು ಸಂಪಾದನೆ ಮಾಡಲಾಗುತ್ತಿಲ್ಲ. ಟೊಮೆಟೊ ಮಾರುಕಟ್ಟೆ ತಳ ಕಂಡಿದ್ದು ಇನ್ನೂ ತೇಜಿ ಬಂದಿಲ್ಲ. ಆದ್ದರಿಂದ ಆದ್ಯತೆಗಳು ಬದಲಾಗಿವೆ. ರಾಗಿ ಯಾವುದೇ ಖರ್ಚಿಲ್ಲದ ಬೆಳೆ. ನೀರು ಕಡಿಮೆ ಇದ್ದರೂ ಬೆಳೆಯಬಹುದು. ಕಾಳಿಗಂತೂ ದಾಖಲೆಯ ಬೆಲೆ ಬಂದಿದೆ. ರಾಗಿಗೆ ಈಗ ಅಕ್ಕಿಯ ಬೆಲೆ. ಹುಲ್ಲಿಗೂ ಅಷ್ಟೆ. ಕೇಳಿದಷ್ಟು ದುಡ್ಡು ಕೊಟ್ಟು ಒಯ್ಯಲು ಜನರು ಬರುತ್ತಾರೆ. ಒಂದು ಲೆಕ್ಕದಲ್ಲಿ ನೋಡಿದರೆ ಈಗ ರಾಗಿಗೆ ವಾಣಿಜ್ಯ ಬೆಳೆ ಪಟ್ಟ ಕಟ್ಟಿದರೂ ತಪ್ಪಿಲ್ಲ ಅನಿಸುತ್ತದೆ.
ಹಾಗೆ ನೋಡಿದ್ರೆ ರಾಗಿ ವರ್ಷವಿಡೀ ಬೆಳೆಯಬಹುದಾದ ಸರ್ವಋತು ಬೆಳೆ. ಮೊದಲೆಲ್ಲಾ ಬೇಸಿಗೆಯಲ್ಲಿ ಕೆರೆಯ ಕೆಳಗಿರುವ ಗದ್ದೆಗಳಲ್ಲಿ ಭತ್ತ ಕಟಾವಾದ ನಂತರ ರಾಗಿ ಬೆಳೆಯುತ್ತಿದ್ದರು. ಅದನ್ನೇ “ಕಾರ್‌ರಾಗಿ’ ಎನ್ನುತ್ತಿದ್ದರು. ಆದರೆ ಕೆರೆಗಳು ತುಂಬಿ ಅದೆಷ್ಟು ವರುಷಗಳಾದವೋ !
ಇದು ಬರದಿಂದಾಗಿ ಆಗಿರುವ ಬವಣೆ. ಬದಲಾವಣೆ ಕೂಡಾ ಹೌದು. ನಮ್ಮ ರೈತರು ಈಗ ಚಿಂತಿಸುತ್ತಿರುವುದು ದನಕರುಗಳ ಜೀವ ಉಳಿಸಿಕೊಳ್ಳುವುದರ ಬಗ್ಗೆ ಮಾತ್ರ. ತರಕಾರಿ ಬೆಳೆದು ದುಡ್ಡು ಮಾಡಬೇಕೆಂಬ ಆಸೆ ಕೈ ಬಿಟ್ಟಿದ್ದಾರೆ. ಅದಕ್ಕೇ ಬರವನ್ನು ಎದುರಿಸಲು ಸಜಾjಗುತ್ತಿದ್ದಾರೆ. ಹೊಸ ಹೊಸ ಪ್ರಯೋಗಕ್ಕೆ ಚಾಲನೆ ನೀಡುತ್ತಿದ್ದಾರೆ. ಸರ್ಕಾರದ ಬರ ಪರಿಹಾರ ಕಾರ್ಯಕ್ರಮಕ್ಕೆ ಕಾಯುತ್ತಾ ಕೂರುವುದರ ಬದಲು ಇಂತಹ ಪ್ರಯೋಗಕ್ಕೆ ಸಿದ್ದರಾಗುವುದು ಲೇಸು.