ಯುಧಿಷ್ಠಿರನು, “ಪಿತಾಮಹ, ನೀವು ಹೀಗೆ ಒಂದೇ ಸಮನೆ ನಮ್ಮ ಮೇಲೆ ಬೆಂಕಿಯಂಥ ಬಾಣಗಳನ್ನು ಸುರಿಸುವಾಗ ನಾವು ಗೆಲ್ಲುವುದು ಹೇಗೆ? ಯುದ್ಧಭೂಮಿಯಲ್ಲಿ ನೀವು ಸೂರ್ಯನಂತೆ ಪ್ರಜ್ವಲಿಸುತ್ತಿದ್ದೀರಿ’ ಎಂದು ಅಭಿಮಾನ ಮತ್ತು ಅಚ್ಚರಿಯಿಂದ ಹೇಳಿದ.
ಪಾಂಡವರು ಮತ್ತು ಕೌರವರ ಮಧ್ಯೆ ಕುರುಕ್ಷೇತ್ರ ಯುದ್ಧ ನಡೆಯುತ್ತಿತ್ತು. ಯುದ್ಧದಲ್ಲಿ ಕೌರವರ ಕೈ ಮೇಲಾಗುತ್ತಿತ್ತು. ಭೀಷ್ಮ, ದ್ರೋಣರ ಪರಾಕ್ರಮದ ಮುಂದೆ ಪಾಂಡವ ಸೈನ್ಯ ಸಂಕಷ್ಟಕ್ಕೆ ಸಿಲುಕಿತ್ತು. ಭೀಷ್ಮರನ್ನು ಎದುರಿಸುವುದು ಪಾಂಡವರಿಗೆ ದೊಡ್ಡ ಸವಾಲಾಗಿ ಕಾಡಿತು. ಅದೇ ವಿಷಯವಾಗಿ ಪಾಂಡವರು ಚಿಂತೆಯಲ್ಲಿ ಮುಳುಗಿದ್ದರು.
ಯುಧಿಷ್ಠಿರನು ಕೃಷ್ಣನಿಗೆ, “ಭೀಷ್ಮರು ಕಾಡ್ಗಿಚ್ಚಿನಂತೆ ಎದುರಿಲ್ಲದೆ ವಿಜೃಂಭಿಸುತ್ತಿದ್ದಾರೆ. ನನ್ನಿಂದ ಇಷ್ಟು ಕಷ್ಟಗಳಿಗೆ ದಾರಿಯಾಯಿತು. ಭೀಷ್ಮರ ವಿರುದ್ಧ ಯುದ್ಧ ಮಾಡುವುದು ಯಾರಿಗೆ ಸಾಧ್ಯ? ಕೌರವರ ಮೇಲೆ ಯುದ್ಧ ಸಾರಿ ನಾನು ತಪ್ಪು ಮಾಡಿದೆ’ ಎಂದ.
ಆಗ ಕೃಷ್ಣ ಅವನನ್ನು ಸಮಾಧಾನ ಪಡಿಸುತ್ತಾ, “ಯುಧಿಷ್ಠಿರ, ಧೃತಿಗೆಡಬೇಡ. ನಿನ್ನ ತಮ್ಮಂದಿರು ಸಾಧಾರಣ ವೀರರೇ? ಅವರ ಪರಾಕ್ರಮದ ಮೇಲೆ ಅಪನಂಬಿಕೆ ಬೇಡ. ಅರ್ಜುನನು ಭೀಷ್ಮರನ್ನು ಕೊಲ್ಲದಿದ್ದರೆ ನಾನೇ ಕೊಲ್ಲುತ್ತೇನೆ’ ಎಂದ. ಯುಧಿಷ್ಠಿರನು, “ಕೃಷ್ಣಾ, ನೀನು ಆಯುಧವನ್ನು ಹಿಡಿಯುವುದಿಲ್ಲ ಎಂದು ಶಪಥ ಮಾಡಿದ್ದೀಯ. ನಿನ್ನ ಮಾತು ಸುಳ್ಳಾಗುವುದು ಬೇಡ. ಭೀಷ್ಮ ಪಿತಾಮಹರು ತಾವು ನಮ್ಮ ಮೇಲೆ ಯುದ್ಧ ಮಾಡುವುದಿಲ್ಲ, ಆದರೆ ಮಾರ್ಗದರ್ಶನ ನೀಡುತ್ತೇನೆ ಎಂದು ಹೇಳಿದ್ದಾರೆ. ಅವರ ಸಾವನ್ನು ಸಾಧಿಸುವುದು ಹೇಗೆ ಎಂದು ಅವರನ್ನೇ ಕೇಳ್ಳೋಣ’ ಎಂದ. ಕೃಷ್ಣನೂ, ಉಳಿದ ಪಾಂಡವರೂ ಅದಕ್ಕೆ ಒಪ್ಪಿಕೊಂಡರು.
ಅಂದು ರಾತ್ರಿ ಕೃಷ್ಣನೂ, ಪಾಂಡವರೂ ಭೀಷ್ಮರ ಶಿಬಿರಕ್ಕೆ ಹೋದರು. ಪಿತಾಮಹರು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡರು. ಬಂದ ಕಾರಣವೇನೆಂದು ಕೇಳಿದರು. ಆಗ ಯುಧಿಷ್ಠಿರನು, “ಪಿತಾಮಹ, ನೀವು ಹೀಗೆ ಒಂದೇ ಸಮನೆ ನಮ್ಮ ಮೇಲೆ ಬೆಂಕಿಯಂಥ ಬಾಣಗಳನ್ನು ಸುರಿಸುವಾಗ ನಾವು ಗೆಲ್ಲುವುದು ಹೇಗೆ? ಯುದ್ಧಭೂಮಿಯಲ್ಲಿ ನೀವು ಸೂರ್ಯನಂತೆ ಪ್ರಜ್ವಲಿಸುತ್ತಿದ್ದೀರಿ’ ಎಂದು ಅಭಿಮಾನ ಮತ್ತು ಅಚ್ಚರಿಯಿಂದ ಹೇಳಿದ.
ಭೀಷ್ಮರು ನಸುನಕ್ಕು, “ನಾನು ಬಿಲ್ಲನ್ನು ಹಿಡಿದಿರುವವರೆಗೆ ನೀವು ನನ್ನನ್ನು ಸೋಲಿಸಲಾರಿರಿ. ಆದರೆ ನನ್ನ ಸೋಲಿಗೆ ಕಾರಣನಾಗಬಲ್ಲ ಶಿಖಂಡಿ ನಿಮ್ಮ ಸೈನ್ಯದಲ್ಲಿದ್ದಾನೆ. ಆತ ಧೀರ, ಶೂರ. ಆದರೆ ಅವನು ಹುಟ್ಟಿದ್ದು ಹೆಣ್ಣಾಗಿ. ನಾನು ಅವನೊಡನೆ ಯುದ್ಧ ಮಾಡುವುದಿಲ್ಲ. ಅವನು ನನಗೆ ಎದುರಾಗಲಿ, ಅರ್ಜುನನು ಅವನ ಹಿಂದೆ ನಿಂತು ಬಾಣಗಳನ್ನು ಹೂಡಲಿ. ಆಗಷ್ಟೇ ನಿಮಗೆ ನನ್ನನ್ನು ನಿವಾರಿಸಿಕೊಳ್ಳಲು ಸಾಧ್ಯ’ ಎಂದು ಉಪಾಯ ಹೇಳಿಕೊಟ್ಟರು. ಪಾಂಡವರು ಭೀಷ್ಮರಿಗೆ ಪ್ರಣಾಮಗಳನ್ನು ಸಲ್ಲಿಸಿ ಹಿಂದಿರುಗಿದರು.
ಭೀಷ್ಮರ ಮಾತುಗಳನ್ನು ಕೇಳಿ ಅರ್ಜುನನ ಎದೆಯಲ್ಲಿ ನಾಚಿಕೆ ಮತ್ತು ದುಃಖ ತುಂಬಿದ್ದವು. ಅವನು, “ಕೃಷ್ಣ, ನಾನು ಇದೇ ತಾತನ ತೊಡೆಯ ಮೇಲೆ ಆಡಿ ಬೆಳೆದವನು. ಈಗ ಇವರನ್ನೇ ಕೊಲ್ಲಬೇಕು ಅಂದರೆ ಹೇಗೆ? ಇದು ನನ್ನಿಂದ ಸಾಧ್ಯವಿಲ್ಲ’ ಎಂದು ಹೇಳಿದ. ಆಗ ಕೃಷ್ಣ ಅವನ ಬೆನ್ನುತಟ್ಟಿ, “ನಿನ್ನನ್ನು ಬಿಟ್ಟು ಬೇರೆ ಯಾರೂ ರಣರಂಗದಲ್ಲಿ ಭೀಷ್ಮರನ್ನು ಎದುರಿಸಲಾರರು. ಅವರನ್ನು ಮಣಿಸದಿದ್ದರೆ ಪಾಂಡವ ಸೈನ್ಯಕ್ಕೆ ಗೆಲುವು ಸಿಗುವುದು ಸಾಧ್ಯವೇ ಇಲ್ಲ. ನೀನು ಕ್ಷತ್ರಿಯ. ಯುದ್ಧ ಮಾಡುವುದು ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ’ ಎಂದು ಸಮಾಧಾನ ಪಡಿಸಿದ.
ಮರುದಿನದ ಯುದ್ಧದಲ್ಲಿ ಭೀಷ್ಮರು ಸಲಹೆ ನೀಡಿದಂತೆಯೇ, ಶಿಖಂಡಿಯನ್ನು ಮುಂದಿಟ್ಟುಕೊಂಡು ಅರ್ಜುನನು ಭೀಷ್ಮ ಪಿತಾಮಹರನ್ನು ಮಣಿಸಿದ.
– (ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಅವರ “ಕಿರಿಯರ ಮಹಾಭಾರತ’ ಪುಸ್ತಕದಿಂದ ಆಯ್ದ ಭಾಗ)