ವಾಡಿ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆಯಾಗುವ ಸಮೀಪದ ಕುಂದನೂರ ಗ್ರಾಮದ ಭೀಮಾನದಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ.
ಜೀವಜಲಕಲುಷಿತವಾಗಿದ್ದು, ಜನತೆ ರೋಗ ಭೀತಿಗೆ ಒಳಗಾಗಿದ್ದಾರೆ. ಸನ್ನತಿ ಭೀಮಾ ಬ್ಯಾರೇಜ್ ಗೇಟ್ ಹಾಕಿದ್ದರಿಂದ ಹಿನ್ನೀರು ಕುಂದನೂರು ವರೆಗೂ ಹರಿದು ಬಂದಿದೆ. ಪರಿಣಾಮ ಕಳೆದ ವರ್ಷಕ್ಕಿಂತ ಈ ಬಾರಿ ಬೇಸಿಗೆಯಲ್ಲೂ ಭೀಮಾ ನದಿಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದ್ದು, ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ.
ಆದರೆ ಏಕಾಏಕಿ ನದಿಯೊಳಗಿನ ಸಾವಿರಾರು ಮೀನುಗಳು ಚಡಪಡಿಸಿ ನದಿ ದಂಡೆಯಲ್ಲಿ ಬಿದ್ದು ಪ್ರಾಣಬಿಟ್ಟಿವೆ. ಬಿಸಿಲ ಧಗೆಯಿಂದ ನೀರಿನೊಳಗೆ ಆಮ್ಲಜನಕದ ಕೊರತೆಯಾಗಿ ಮೀನುಗಳು ಉಸಿರುಗಟ್ಟಿ ಸಾವನ್ನಪ್ಪಿವೆ ಎನ್ನಲಾಗಿದೆ.
ಹೀಗೆ ಮೃತಪಟ್ಟ ಮೀನಿನ ರಾಶಿಯೇ ನದಿಪಾತ್ರದಲ್ಲಿ ತೇಲುತ್ತಿದೆ. ಬ್ಯಾರೇಜ್ ಹಿನ್ನೀರು ಪಾಚಿಗಟ್ಟಿದ್ದು, ಗಬ್ಬು ವಾಸನೆ ಹರಡಿದೆ. ಈಗ ನದಿಯೊಳಗೆ ಮೀನುಗಳು ವಿಲವಿಲ ಒದ್ದಾಡಿ ಜೀವ ಬಿಟ್ಟಿದ್ದರಿಂದ ಕುಡಿಯುವ ನೀರು ಕಲುಷಿತವಾಗಿದೆ. ನಗರದ ಸುಮಾರು ಐವತ್ತು ಸಾವಿರ ಜನಕ್ಕೆ ಪೂರೈಕೆಯಾಗುವಈ ನೀರು ಸಾಂಕ್ರಾಮಿಕ ರೋಗ ಹರಡುವ ಆತಂಕ ಮೂಡಿಸಿದೆ. ಪುರಸಭೆ ಅಧಿ ಕಾರಿಗಳು ಜಲ ಮೂಲದತ್ತ ಗಮನ ಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಭೀಮಾ ನದಿಯಲ್ಲಿ ಸಾವಿರಾರು ಮೀನುಗಳು ಮೃತಪಟ್ಟು ಕೊಳೆತಿವೆ. ಕುಡಿಯುವ ನೀರು ಕಲುಷಿತವಾದರೂ ಪುರಸಭೆ ಅಧಿಕಾರಿಗಳಾಗಲಿ ಅಥವಾ ಪುರಸಭೆ ಕಾಂಗ್ರೆಸ್ ಆಡಳಿತವಾಗಲಿ ನದಿಯತ್ತ ಮುಖಮಾಡಿಲ್ಲ. ವಾಡಿ ನಗರ, ರೈಲ್ವೆ ಕಾಲೋನಿ, ಎಸಿಸಿ ಕಾರ್ಮಿಕ ಕಾಲೋನಿಗೆ ಸೇರಿದಂತೆ ಕುಂದನೂರುಗ್ರಾಮಸ್ಥರಿಗೂ ಇದೇ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮುಂಚೆ ಅಧಿಕಾರಿಗಳು ನದಿ ಸ್ವಚ್ಚತೆಗೆ ಮುಂದಾಗಬೇಕು. –
ಅರವಿಂದ ಚವ್ಹಾಣ, ಜಿಪಂ ಬಿಜೆಪಿ ಸದಸ್ಯ