Advertisement
ಒಂದು ಪ್ಲೇಟ್ ನೀರ್‌ದೋಸೆ… ಚುಂಯ್!ಫ್ರಿಡ್ಜ್ ಎನ್ನುವ ತಂಗಳುಪೆಟ್ಟಿಗೆ ಬಂದ ಮೇಲೆ ಅಡುಗೆ ಎಷ್ಟೊಂದು ಸುಲಭವಾಗಿದೆ. ಹಿಂದೆಲ್ಲ ಸಂಜೆಯಾದರೆ ಸಾಕು, ಅಮ್ಮ ರುಬ್ಬುವ ಕಲ್ಲಿನ ಮುಂದೆ ಗಂಟೆಗಟ್ಟಲೆ ಕುಳಿತು ಅಕ್ಕಿಯನ್ನೋ, ತೆಂಗಿನಕಾಯಿಯನ್ನೋ ರುಬ್ಬುತ್ತ ಇದ್ದರು. ಆದರೆ, ಈಗ ಆ ದೃಶ್ಯವೇ ಕಾಣುವುದಿಲ್ಲ. ವಾರದಲ್ಲಿ ಒಂದು ದಿನ ದೋಸೆ ಹಿಟ್ಟನ್ನು ರುಬ್ಬಿಟ್ಟುಕೊಂಡರೆ, ಬೇಕು ಬೇಕಾದಾಗ ಬಿಸಿ ದೋಸೆ ತಿನ್ನಬಹುದು. ಫ್ರಿಜ್‌ನಲ್ಲಿ ಹಿಟ್ಟು ರೆಡಿ. ಗ್ಯಾಸ್ ಹಚ್ಚಿದರೆ ಒಲೆ ರೆಡಿ. ಊದಿ ಊದಿ ಒಲೆ ಉರಿಸುವ ಉಸಾಬರಿಯೇ ಇಲ್ಲ. ಹಾಗಾಗಿ, ದೋಸೆ ಎನ್ನುವುದು ಬಹು ಸುಲಭ. ನೀರುದೋಸೆಯಾದರೆ ಅದಕ್ಕೆ ಮೀನು ಸಾರು, ಕೋಳಿಗಸಿ, ಕೆಂಪು ಚಟ್ನಿ, ಸುಮ್ಮನೇ ಒಂದಿಷ್ಟು ಚಟ್ನಿಪುಡಿ ಹಾಕ್ಕೊಂಡು ತಿನ್ನಬಹುದಲ್ಲವೆ?
Related Articles
ಕರಾವಳಿಯಲ್ಲಿ ಪತ್ರೊಡೆ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾಡುವ ಈ ತಿನಿಸನ್ನು, ಈಗ ಎಲ್ಲ ಕಾಲದಲ್ಲಿಯೂ ಮಾಡುತ್ತಾರೆ. ಕೆಸುವಿನ ಎಲೆ ಸಿಗುವಂತಿದ್ದರೆ ಪತ್ರೊಡೆ ಮಾಡಲು ಕಷ್ಟವೇನಿಲ್ಲ. ಸ್ವಲ್ಪ ಉತ್ಸಾಹವಿದ್ದರೆ ಬೆಳಗ್ಗಿನ ತಿಂಡಿಗೆ ಸಿಹಿ, ಖಾರ ಮತ್ತು ಕರಿದ ಪತ್ರೊಡೆ ಮಾಡುವುದು ಕಷ್ಟವಲ್ಲ.
Advertisement
ಬೆಳ್ತಿಗೆ ಅಕ್ಕಿಯ ಜೊತೆಗೆ ಒಂದು ಕಪ್‌ನಷ್ಟು ಮೆಂತ್ಯೆ, ಉದ್ದಿನಬೇಳೆ ನೆನೆಸಿಟ್ಟುಕೊಳ್ಳಬೇಕು. ಮತ್ತೂಂದೆಡೆ ಮೆಣಸು, ಅರಸಿನ, ಉಪ್ಪು, ಹುಳಿ, ಕೊತ್ತಂಬರಿ, ಜೀರಿಗೆ, ಓಂಕಾಳು ಸೇರಿಸಿ ಚೆನ್ನಾಗಿ ರುಬ್ಬಬೇಕು. ಈ ಮಸಾಲೆ ಮಿಶ್ರಣ ನಯವಾದ ಮೇಲೆ ಅಕ್ಕಿ-ಬೇಳೆ ಸೇರಿಸಿ ಮತ್ತೆ ರುಬ್ಬಿಕೊಳ್ಳಬೇಕು. ಒಂದು ಕೆಸುವಿನೆಲೆಯ ನಾರನ್ನು ತೆಗೆದು, ಸ್ವತ್ಛ ಮಾಡಿಕೊಂಡು ಅದರ ಮೇಲೆ ಈ ಹಿಟ್ಟನ್ನು ಸವರಬೇಕು. ಹೀಗೆ ಒಂದರಮೇಲೊಂದರಂತೆ ಮೂರು ಎಲೆಗಳ ಮೇಲೆ ಹಿಟ್ಟು ಸವರಿದ ಬಳಿಕ ಅದನ್ನು ಚೊಕ್ಕವಾಗಿ ಮಡಚಿಟ್ಟುಕೊಳ್ಳಿ.
ಹೀಗೆ ಮಡಚಿದ ಪತ್ರೊಡೆಯನ್ನು ಇಡ್ಲಿ ಕುಕ್ಕರ್‌ನಲ್ಲಿ ಬೇಯಿಸಬಹುದು ಅಥವಾ ಮಡಚಿದ ಬಳಿಕ ಕತ್ತರಿಸಿ, ಅದನ್ನು ಮಸಾಲೆ ಮಿಶ್ರಣದಲ್ಲಿ ಅದ್ದಿ ದೋಸೆ ಕಾವಲಿಯಲ್ಲಿರಿಸಿ ಎಣ್ಣೆಯಲ್ಲಿ ಬೇಯುವಂತೆ ಮಾಡಬಹುದು. ಬೇಯಿಸಿದ ಪತ್ರೊಡೆಯನ್ನು ಹಾಗೆಯೇ ತಿನ್ನಲೂಬಹುದು. ಅದನ್ನು ಮತ್ತೆ ಕತ್ತರಿಸಿ, ಕಾಯಿಬೆಲ್ಲ ಸೇರಿಸಿದ ಒಗ್ಗರಣೆ ಹಾಕಿಯೂ ತಿನ್ನಬಹುದು. ಈ ಮೂರೂ ಖಾದ್ಯವಿದ್ದರೆ ಮಕ್ಕಳು ಒಂದಲ್ಲ ಒಂದು ತಿನಿಸನ್ನು ಇಷ್ಟಪಟ್ಟು ತಿನ್ನುವುದು ಖಚಿತ.
ಪ್ರದೀಪ್ ಕುಮಾರ್ ಕಲ್ಕೂರ
ಐ ಮೀನ್ ಅಂಜಲ್!ಮನೆಗೆ ಪ್ರೀತಿಯ ಅತಿಥಿಗಳು ಬಂದರೆ ಅಂಜಲ್ ಗಸಿ ಮಾಡುವುದು ವಾಡಿಕೆ. ಅಂಜಲ್ ಮೀನು ಬಹಳ ಮೆದು. ಫ್ರಿಜ್‌ನಲ್ಲಿಟ್ಟ ಮೀನಿಗಿಂತ ಮಾರುಕಟ್ಟೆಗೆ ಹೋಗಿ, ಫ್ರೆಶ್ ಮೀನು ತಂದು ಅಡುಗೆ ಮಾಡಿದರೆ ಬಹಳ ರುಚಿ. ಬೇರೆ ಮೀನುಗಳಿಗೆ ಹೋಲಿಸಿದರೆ ಮುಳ್ಳು ಕಡಿಮೆ. ಪ್ರೈ ಮಾಡಿದರೆ ಕಟ್ಲೆàಟ್‌ನಂತೆ ಕಾಣುವುದರಿಂದ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಮೀನಿನ ಖಾದ್ಯಗಳನ್ನು ಮಣ್ಣಿನ ಪಾತ್ರೆಯಲ್ಲಿ ಮಾಡು ವುದು ನಮ್ಮಲ್ಲಿ ರೂಢಿಯಿಂದ ಬಂದದ್ದು. ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಖಾದ್ಯದ ಪರಿಮಳ ಬಹಳ ಆಪ್ತವಾಗಿರುತ್ತದೆ. ಮೊದಲು ಅಂಜಲನ್ನು ಚೆನ್ನಾಗಿ ತೊಳೆದು ಬ್ರೆಡ್ ಸ್ಲೆ„ಸ್‌ನಂತೆ ಹೆಚ್ಚಿಟ್ಟುಕೊಳ್ಳಬೇಕು. ಇನ್ನೊಂದು ಕಡೆ ಮಸಾಲೆಗೆ ಒಣಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ಕರಿಮೆಣಸು, ಓಂಕಾಳು, ನೀರುಳ್ಳಿ, ಅರಸಿನ, ಬೆಳ್ಳುಳ್ಳಿ ಎಸಳು, ಸಣ್ಣ ತುಂಡು ಶುಂಠಿ ಹಾಕಿ ತೆಂಗಿನೆಣ್ಣೆಯಲ್ಲಿ ಹುರಿದು ಇದಕ್ಕೆ ಕಾಯಿತುರಿ ಮತ್ತು ಲಿಂಬೆಗಾತ್ರದಷ್ಟು ಹುಣಸೆಹುಳಿ ಸೇರಿಸಿ ರುಬ್ಬಬೇಕು. ಮಿಕ್ಸಿಗಿಂತ ಗ್ರೈಂಡರ್‌ನಲ್ಲಿ ರುಬ್ಬುವುದರಿಂದ ಮಸಾಲೆ ಚೆನ್ನಾಗಿ ನಯವಾಗುತ್ತದೆ. ಯಾವಾಗಲೂ ಮೀನು ಸಾರು, ಗಸಿ ತಯಾರಿಸುವಾಗ ಮಸಾಲೆ ಆದಷ್ಟು ನಯವಾದರೆ ಸೊಗಸು ಜಾಸ್ತಿ. ಈ ಮಸಾಲೆಗೆ ಬೇಕಾದಷ್ಟು ಉಪ್ಪು ಸೇರಿಸಿ ಸ್ಟವ್‌ನಲ್ಲಿಟ್ಟು ಮಸಾಲೆ ಚೆನ್ನಾಗಿ ಕುದಿ ಬಂದ ನಂತರವೇ ಅದಕ್ಕೆ ಮೀನು ಸೇರಿಸಬೇಕು. ಮೀನು ಸೇರಿಸಿದ ಬಳಿಕ ಕುದಿಯುವಾಗ ಸೌಟು ಬಳಸಬಾರದು. ಪಾತ್ರೆಯನ್ನು ಸ್ವಲ್ಪ ಎತ್ತಿ ಅಲುಗಾಡಿಸಿದರೆ ಅಷ್ಟೇ ಸಾಕು. ಹೀಗೆ ಮಾಡುವುದರಿಂದ ಮೀನಿನ ಹೋಳುಗಳು ತುಂಡಾಗುವುದಿಲ್ಲ. ಕುಚ್ಚಲಕ್ಕಿ ಅನ್ನಕ್ಕೆ ಬಹಳ ರುಚಿಕರ ಸಾಥಿಯಿದು. ನೀರುದೋಸೆ, ಪುಂಡಿ, ಆಪಮ್, ಓಡುದೋಸೆಗೆ ಈ ಗಸಿ ಹೊಂದಿಕೊಳ್ಳುತ್ತದೆ. ರೇಮಂಡ್ ಡಿ’ಸೋಜಾ ಅರೆಪಿನಲ್ಲಿ ಅಡ್ಯ – ಅಡ್ಯಯಲ್ಲಿ ಅರೆಪು ಮಾಯಾಪಾಕ!
ಅರೆಪಡ್ಯ ಎಂದರೆ ಅದು ತುಳು ಪದ. ಕರಾವಳಿಯಲ್ಲಿ ಹಿಂದೆ ಸಾಮಾನ್ಯವಾಗಿದ್ದ “ಪುಂಡಿ’ಯನ್ನು “ಅರೆಪ್ಪು’ವಿನಲ್ಲಿ ಹಾಕಿದರೆ ಅರೆಪಡ್ಯ ಸಿದ್ಧ. ಕುಚ್ಚಲಕ್ಕಿ ಅಥವಾ ಬೆಳ್ತಿಗೆ ಅಕ್ಕಿಯಲ್ಲಿಯೂ ಈ ತಿಂಡಿ ಮಾಡಬಹುದು. ಕುಚ್ಚಲಕ್ಕಿಯಲ್ಲಿ ಮಾಡಿದರೆ ರುಚಿ ಜಾಸ್ತಿ ಎನ್ನಿ. ಪುಂಡಿಯ ಬಗ್ಗೆ ನಾಲ್ಕು ಮಾತು ಹೇಳಲೇಬೇಕು. ಎರಡು ಪುಂಡಿ ತಿಂದು ಶಾಲೆಗೆ ಹೋದರೆ ಮಧ್ಯಾಹ್ನ ಊಟ ಮಾಡದೇ ಇದ್ದರೂ ಹಸಿವೆಂಬುದು ಕಾಡುವುದಿಲ್ಲ. ಅಷ್ಟು ಉತ್ತಮ ಆಹಾರ ಅದು. ಬರಬರುತ್ತಾ ಈ ಅಡುಗೆಗಳನ್ನು ಯುವಜನತೆ ಮರೆಯುತ್ತ, ಹೊಸ ಬರ್ಗರ್, ಪರೋಟಾಕ್ಕೆ ಶರಣಾದರು. ಆದರೆ, ಈಗ ಮತ್ತೆ ಹಳೆಯ ಅಡುಗೆಗಳ ಬಗ್ಗೆ ಜನರ ಆಸಕ್ತಿ ಹೆಚ್ಚಾಗಿದೆ. ಈಗ ನನ್ನ ಇಷ್ಟದ ಅರೆಪಡ್ಯ ತಯಾರಿಸುವ ವಿಧಾನ ನೋಡುವ: ಕುಚ್ಚಲಕ್ಕಿಯನ್ನು ಸುಮಾರು ಆರು ಗಂಟೆ ಕಾಲ ನೆನಸಿ, ತರಿತರಿಯಾಗಿ ರುಬ್ಬಿಕೊಳ್ಳಬೇಕು. ಅದನ್ನು ಹದವಾದ ಉರಿಯಲ್ಲಿ ಮಗಚಿ, ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿದರೆ ಪುಂಡಿ ಸಿದ್ಧವಾಗುತ್ತದೆ ತಾನೆ? ಅರೆಪಡ್ಯಕ್ಕೆ ಪುಂಡಿ ಕಟ್ಟುವಾಗ ಚಿಕ್ಕದಾಗಿದ್ದರೆ ಚೆನ್ನ ಅಥವಾ ಪುಂಡಿಯನ್ನು ಪುಡಿ ಮಾಡಿಕೊಳ್ಳಬಹುದು. ಮತ್ತೂಂದು ಕಡೆ ಸುಮಾರು ಒಂದು ಕಡಿ ತೆಂಗಿನಕಾಯಿ ತುರಿದಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಜೀರಿಗೆ, ಕೊತ್ತಂಬರಿ ಒಣಮೆಣಸು ಹುರಿದುಕೊಂಡು ಅದನ್ನು ಮಿಕ್ಸಿಗೆ ಹಾಕಿ ಕೊಳ್ಳಬೇಕು. ತೆಂಗಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಹುಣಸೆಹಣ್ಣು ಸೇರಿಸಿ ಇವನ್ನೆಲ್ಲ ರುಬ್ಬಿಕೊಂಡರೆ ಕೆಂಪಗೆ ಅರೆಪು ಸಿದ್ಧವಾಗುತ್ತದೆ. ಇದನ್ನು ಬಾಣಲಿಗೆ ಹಾಕ್ಕೊಂಡು ಒಂದು ಕುದಿ ಬರಿಸುತ್ತ, ಅದಕ್ಕೆ ಪುಂಡಿಯನ್ನು ಸೇರಿಸಿ ಕುದಿ ಬರಿಸಿದರೆ ಅರೆಪಡ್ಯ ರೆಡಿ. ಅರೆಪುಗೆ ಒಂದು ಒಣಮೆಣಸು, ಉದ್ದಿನಬೇಳೆ ಕರಿಬೇವು ಸೊಪ್ಪಿನ ಒಗ್ಗರಣೆ ಹಾಕಿದರೆ, “ಘಂ’ ಎನ್ನುವ ಪರಿಮಳಕ್ಕೆ ಹಸಿವು ಇನ್ನೂ ಹೆಚ್ಚುವುದು. ಕುದ್ರೋಳಿ ಗಣೇಶ್ ಪೊರಿಯಡ್ಯ ತಿನ್ನಲು ಎಡ್ಯ!
ಹಿಂದಿನ ಕಾಲದಲ್ಲಿ ಪೊರಿಯಡ್ಯ ಎಂಬ ತಿನಿಸು ಮಾಡುತ್ತಿದ್ದರು. ಬೆಳಗ್ಗಿನ ಉಪಾಹಾರಕ್ಕಾಗಿ ಮಾಡುವ ಈ ತಿನಿಸನ್ನು ಕೃಷಿ ಕೆಲಸ ಮಾಡುವವರು ಬಹಳ ಇಷ್ಟಪಡುತ್ತಿದ್ದರು. ಎಣ್ಣೆ ಬಳಸದೇ ಮಾಡುವ ತಿನಿಸಿದು. ಕುಚ್ಚಲಕ್ಕಿಯನ್ನು ಸುಮಾರು ಐದು ತಾಸು ನೆನಸಿದ ಬಳಿಕ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಯವಾಗಿ ರುಬ್ಬಿಕೊಳ್ಳಬೇಕು. ರುಬ್ಬುವಾಗ ಹೆಚ್ಚು ನೀರು ಬಳಸದೇ, ಅದು ಚಪಾತಿ ಹಿಟ್ಟಿನ ಹದಕ್ಕೆ ಬರುವಂತೆ ನೋಡಿಕೊಳ್ಳಬೇಕು. ಇದನ್ನು ಎಲೆಯೊಂದರ ಮೇಲೆ ವೃತ್ತಾಕಾರವಾಗಿ ತಟ್ಟಿ ರೊಟ್ಟಿಯಂತೆ ಹರಡಬೇಕು. ಇದರ ನಡುವೆ ತೆಂಗಿನ ತುರಿಯನ್ನು ಸೇರಿಸಿ ಅರ್ಧಚಂದ್ರಾಕಾರದಲ್ಲಿ ಮಡಚಬೇಕು. ಬಳಿಕ ಅದನ್ನು ಮಣ್ಣಿನ ಕಾವಲಿಯಲ್ಲಿ ಚೆನ್ನಾಗಿ ಸುಡಬಹುದು. ಉತ್ತಮವಾದ ಕೆಂಡವಿದ್ದರೆ, ಸುಡಲೂಬಹುದು. ಈಗೆಲ್ಲ ತೆಂಗಿನಕಾಯಿಗೆ ಸ್ವಲ್ಪ ಬೆಲ್ಲ ಸೇರಿಸಿ ತಿನಿಸನ್ನು ಆಕರ್ಷಕ ಮಾಡುವುದುಂಟು. ಹಿಂದಿನ ಕಾಲದಲ್ಲಿ ಗರ್ಭಿಣಿಯರಿಗೆ ಮೂರು ಬಾರಿ “ಬಯಕೆ’ ಊಟ ಏರ್ಪಡಿಸುತ್ತಿದ್ದರು. ಐದು, ಏಳು ಮತ್ತು ಎಂಟೂವರೆ ತಿಂಗಳಲ್ಲಿ ಈ ಆಚರಣೆ ಮಾಡುವುದು ವಾಡಿಕೆ. ಐದನೆಯ ತಿಂಗಳ ಬಯಕೆ ಊಟದಲ್ಲಿ ಈ ಪೊರಿಯಡ್ಡೆ ಮಾಡುವ ಸಂಪ್ರದಾಯವಿತ್ತು. ಗ್ಯಾಸ್ ಒಲೆಯ ಮೇಲೆ ಮಣ್ಣಿನ ಕಾವಲಿ ಇಟ್ಟರೆ ಅದು ಬಿಸಿಯೇರಲು ಬಹಳ ಗ್ಯಾಸ್ ಖರ್ಚಾಗುತ್ತದೆ. ಹಾಗಾಗಿ, ಇಡ್ಲಿ ಕುಕ್ಕರ್‌ನಲ್ಲಿಯೂ ಈ ತಿನಿಸನ್ನು ಬೇಯಿಸಿಕೊಳ್ಳಬಹುದು. ಆದರೆ, ಮಣ್ಣಿನ ಘಮಲು ಬೇಕಿದ್ದರೆ ಕೆಂಡದೊಲೆಯಲ್ಲಿಯೇ ಈ ತಿನಿಸನ್ನು ತಯಾರಿಸಿದರೆ ಬಹಳ ಸೊಗಸು. ರವಿ ಪಾಣಾರ