ಬೆಂಗಳೂರು: ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್, ಸಚಿವ ಸ್ಥಾನ ಸಿಗದಿರುವ ಕಾರಣ ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದ್ದಾರೆ.
ಕೊಪ್ಪಳ, ರಾಯಚೂರು ಸೇರಿ ಬಳ್ಳಾರಿ ಹಾಲು ಒಕ್ಕೂಟದ ನಿರ್ದೇಶಕರೂ ಆಗಿರುವ ಭೀಮಾ ನಾಯ್ಕ್, ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡುವಂತೆ ಪಕ್ಷದ ರಾಜ್ಯ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮೈತ್ರಿ ಸರ್ಕಾರದಲ್ಲಿ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ, ಅದನ್ನು ತಮಗೆ ನೀಡುವಂತೆ ಭೀಮಾ ನಾಯ್ಕ್ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. ಸಚಿವ ಎಚ್.ಡಿ.ರೇವಣ್ಣ ಅವರೂ ಕೆಎಂಎಫ್ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದ್ದು, ಅವರು ಸಂಪುಟದಲ್ಲಿ ಪ್ರಭಾವಿ ಖಾತೆ ಹೊಂದಿರುವುದರಿಂದ ತಮಗೆ ಅವಕಾಶ ಕಲ್ಪಿಸುವಂತೆ ಭೀಮಾ ನಾಯ್ಕ್ ಪಟ್ಟು ಹಿಡಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಹೈ ಕಮಾಂಡ್ ಕೂಡ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಪಕ್ಷದ ಶಾಸಕರಿಗೆ ಕೊಡಿಸುವಂತೆ ಸೂಚನೆ ನೀಡಿದ್ದು, ಅದರಂತೆ ತಮಗೇ ಅಧ್ಯಕ್ಷ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಬೇರೆಯದೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಭೀಮಾ ನಾಯ್ಕ್ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಭೀಮಾ ನಾಯ್ಕ್ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಯನ್ನೂ ಭೇಟಿ ಮಾಡಿದ್ದು, ಸಚಿವ ಎಚ್.ಡಿ.ರೇವಣ್ಣ ಅವರ ಮನವೊಲಿಸಿ ತಮಗೆ ಅಧ್ಯಕ್ಷ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.