Advertisement

ಹಾಸ್ಟೆಲ್‌ ಸೌಲಭ್ಯ ಕೊಟ್ಟು ಕಸಿದುಕೊಂಡ್ರು!

03:39 PM Jan 01, 2020 | Naveen |

ಭೀಮಸಮುದ್ರ: ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಮಕ್ಕಳು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂಬುದಕ್ಕೆ ಭೀಮಸಮುದ್ರ ಕ್ಯಾಂಪ್‌ನಲ್ಲಿರುವ ಬಾಲಕರ ವಿದ್ಯಾರ್ಥಿನಿಲಯವೇ ಸಾಕ್ಷಿ.

Advertisement

ಸುಮಾರು 20 ವರ್ಷಗಳ ಹಿಂದೆ ಸಮಾಜಕಲ್ಯಾಣ ಇಲಾಖೆ ವತಿಯಿಂದ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈ ಹಾಸ್ಟೆಲ್‌ನಿಂದ ಬೆಟ್ಟದನಾಗೇನಹಳ್ಳಿ, ಪಾಳ್ಯ, ನಲ್ಲಿಕಟ್ಟೆ, ಮಳಲಿ ಹಾಗೂ ಭೀಮಸಮುದ್ರದ ಬಡ ಮಕ್ಕಳಿಗೆ ಅನುಕೂಲವಾಗಿತ್ತು.

ಆದರೆ ಹಲವಾರು ಕಾರಣಗಳಿಂದ ಹಾಸ್ಟೆಲ್‌ ಮುಚ್ಚಿ ಹತ್ತು ವರ್ಷಗಳಾಗಿವೆ. ಹೀಗಾಗಿ ಭೀಮಸಮುದ್ರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಈ ಹಾಸ್ಟೆಲ್‌ನಲ್ಲಿ ರಾತ್ರಿ ವೇಳೆ ವಾರ್ಡನ್‌ ಹಾಗೂ ಸಿಬ್ಬಂದಿ ಇರುತ್ತಿರಲಿಲ್ಲ, ಕೊಠಡಿಗಳಲ್ಲಿ ಸ್ವತ್ಛತೆ ಇಲ್ಲದಿರುವುದರಿಂದ ಮಕ್ಕಳು ಹಾಸ್ಟೆಲ್‌ನಲ್ಲಿರದೆ ಮನೆಗೆ ಹೋಗುವಂತಾಗಿತ್ತು.

ಸರ್ಕಾರದಿಂದ ಆಹಾರ ಪದಾರ್ಥ ಪೂರೈಕೆಯಾಗುತ್ತಿದ್ದರೂ ಮಕ್ಕಳಿಗೆ ಸರಿಯಾಗಿ ದೊರೆಯುತ್ತಿರಲಿಲ್ಲ. ಇವೇ ಮೊದಲಾದ ಕಾರಣಗಳಿಂದ ಹಾಸ್ಟೆಲ್‌ ಮುಚ್ಚಲಾಗಿದೆ. ಕಟ್ಟಡ ಪಾಳು ಬಿದ್ದಿರುವುದರಿಂದ ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ ಎಂಬುದು ಗ್ರಾಮಸ್ಥರ ಆರೋಪ.

ಹಾಸ್ಟೆಲ್‌ ಪುನಾರಂಭಕ್ಕೆ ಕ್ರಮವಿಲ್ಲ: ಈ ಮೊದಲು ಹಾಸ್ಟೆಲ್‌ ನಲ್ಲಿ 50 ಮಕ್ಕಳು ಇದ್ದರು. ಜಿ.ಎಸ್‌. ಪರಮೇಶ್ವರಪ್ಪ ಎಂಬ ವಾರ್ಡನ್‌ ಇದ್ದಾಗ ಹಾಸ್ಟೆಲ್‌ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಅವರ ನಂತರ ಬಂದ ವಾರ್ಡನ್‌ಗಳು ಹಾಗೂ ಸಿಬ್ಬಂದಿ ಹಾಸ್ಟೆಲ್‌ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸಲಿಲ್ಲ. ಸರಿಯಾದ ಆಹಾರ ನೀಡುತ್ತಿರಲಿಲ್ಲ ಎಂದು ಹಾಸ್ಟೆಲ್‌ ಅವ್ಯವಸ್ಥೆಯನ್ನು ತೆರೆದಿಡುತ್ತಾರೆ ಭೀಮಸಮುದ್ರ ಕ್ಯಾಂಪ್‌ನ ನಿವಾಸಿ ಬಿ.ಆರ್‌. ನಟರಾಜ್‌.

Advertisement

ನಮ್ಮ ಜಿಲ್ಲೆಯವರೇ ಆದ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದ ಎಚ್‌. ಆಂಜನೇಯ ಅವರು ಹಾಸ್ಟೆಲ್‌ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬಹುದಿತ್ತು. ಸ್ವತಃ ಸಮಾಜಕಲ್ಯಾಣ ಇಲಾಖೆ ಸಚಿವರಾಗಿದ್ದರೂ ಈ ಬಗ್ಗೆ ಗಮನ ನೀಡಲಿಲ್ಲ. ಅವ್ಯವಸ್ಥೆ ಸರಿಪಡಿಸಿದ್ದರೆ ಹಾಸ್ಟೆಲ್‌ಗೆ ಈ ದುಸ್ಥಿತಿ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಾಯಕಲ್ಪಕ್ಕೆ ಮುಂದಾಗಲಿ: 2003ರಲ್ಲಿ ನಾನು ಹಾಸ್ಟೆಲ್‌ ಗೆ ಹೋಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದೆ. ಮಕ್ಕಳು ಕೂಡ ಆಸಕ್ತಿಯಿಂದ ಬರುತ್ತಿದ್ದರು. ಅಂದಿನ ವಾತಾವರಣ ಕೂಡ ಕಲಿಕೆಗೆ ಉತ್ತಮವಾಗಿತ್ತು. ಇದಾದ ಬಳಿಕ ಶಾಲೆಯಿಂದ ನಿವೃತ್ತಿಯಾದ ನಂತರ ಒಂದೆರಡು ವರ್ಷ ಭೇಟಿ ನೀಡಿದ್ದೆ. ಆಗ ಹಾಸ್ಟೆಲ್‌ ಅವ್ಯವಸ್ಥೆಯಿಂದ ಕೂಡಿದ್ದನ್ನು ಕಂಡು ಬೇಸರವಾಗಿತ್ತು ಎಂದರು.

ನಿವೃತ್ತ ಮುಖ್ಯ ಶಿಕ್ಷಕ ಬಿ.ಕೆ. ಕಲ್ಲಪ್ಪ. ಭೀಮಸಮುದ್ರದ ಶ್ರೀ ಭೀಮೇಶ್ವರ ಬಾಲವಿಕಾಸ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಕ್ಕಳು ಹಾಸ್ಟೆಲ್‌ ನಲ್ಲಿದ್ದರು. ವಾರ್ಡನ್‌ ರಾತ್ರಿ ವೇಳೆ ಮಕ್ಕಳನ್ನು ಬಿಟ್ಟು ಮನೆಗೆ ಹೋಗುತ್ತಿದ್ದುದರಿಂದ ಸಮಸ್ಯೆಯಾಗುತ್ತಿತ್ತು. ಹಾಸ್ಟೆಲ್‌ ಕಟ್ಟಡದಲ್ಲಿ 3 ಕೊಠಡಿಗಳು, ಅಡುಗೆ ಕೋಣೆ, 2 ದೊಡ್ಡ ಹಾಲ್‌, 2 ಹೈಟೆಕ್‌ ಶೌಚಾಲಯಗಳಿವೆ. ಅಲ್ಲದೆ ಟಿವಿ ಹಾಗೂ ಕಂಪ್ಯೂಟರ್‌ ಕೂಡ ಇತ್ತು. ಇಂತಹ ಕಟ್ಟಡವನ್ನು ಉಪಯೋಗವಿಲ್ಲದಂತೆ ಮಾಡಿರುವುದು ತುಂಬಾ ನೋವಿನ ಸಂಗತಿ. ಹಾಸ್ಟೆಲ್‌ ಸ್ಥಿತಿ ಈ ರೀತಿ ಆಗಿರುವುದರಿಂದ ಪೋಷಕರು ಮಕ್ಕಳನ್ನು ಪಿ.ಜಿ. ಕೇಂದ್ರಗಳಲ್ಲಿ ಬಿಟ್ಟು ಓದಿಸುತ್ತಿದ್ದಾರೆ.

ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ ಪುನಶ್ಚೇತನಕ್ಕೆ ತಕ್ಷಣ ಕ್ರಮ ಕೈಗೊಂಡರೆ 2020-21ನೇ ಸಾಲಿನಲ್ಲಿ ಹಾಸ್ಟೆಲ್‌ ಪುನಾರಂಭ ಆಗಬಹುದು ಎಂಬ ವಿಶ್ವಾಸವಿದೆ ಎನ್ನುತ್ತಾರೆ. ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು ಬಾಲಕರ ವಿದ್ಯಾರ್ಥಿನಿಲಯವನ್ನು ಮತ್ತೆ ಆರಂಭಿಸಬೇಕಿದೆ. ಇದರಿಂದ ಭೀಮಸಮುದ್ರ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳ ಬಡ ಮಕ್ಕಳಿಗೆ ಅನುಕೂಲ ಕಲ್ಪಿಸಬಹುದು. ಆದರೆ ಸಂಬಂಧಿಸಿದವರು ಇದಕ್ಕೆ ಮನಸ್ಸು ಮಾಡಬೇಕಷ್ಟೇ.

ಹತ್ಯ ವರ್ಷಗಳ ಹಿಂದೆ ಮಕ್ಕಳು ಈ ಹಾಸ್ಟೆಲ್‌ ಸೌಲಭ್ಯ ಪಡೆಯುತ್ತಿದ್ದರು. ಸುಸಜ್ಜಿತ ಕಟ್ಟಡ ಇದ್ದರೂ ಪಾಳು ಬಿದ್ದಿದ್ದು, ಅನೈತಿಕ ಚಟುವಟಿಕೆಯ ಕೇಂದ್ರವಾಗಿದೆ. ಊರಿನ ಹೊರಗಿರುವುದರಿಂದ ಇದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಿದರೆ ಒಳಿತಾಗುತ್ತದೆ.
ಎಸ್‌. ವೀರೇಶ್‌ ಭೀಮಸಮುದ್ರ

ನೋಂದಣಿ ಕಡಿಮೆಯಾಗಿದ್ದರಿಂದ ಬಂದ್‌
ನೋಂದಣಿ ಕಡಿಮೆಯಾದ ಕಾರಣ ಹಾಸ್ಟೆಲ್‌ ಮುಚ್ಚಲಾಗಿದೆ. 20ಕ್ಕಿಂತ ಕಡಿಮೆ ನೋಂದಣಿ ಇದ್ದರೆ ಹಾಸ್ಟೆಲ್‌ ನಡೆಸಬಾರದು ಎಂಬುದು ಸರ್ಕಾರದ ಆದೇಶ. ಇತ್ತಿಚಿನ ದಿನಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಗಿರುವುದರಿಂದ ಇಲ್ಲಿ ನೋಂದಣಿ ಕಡಿಮೆಯಾಗಿದೆ. ಹಾಗಾಗಿ ಇಲ್ಲಿರುವ ಹಾಸ್ಟೆಲ್‌ ಬೇರೆಡೆ ವರ್ಗಾವಣೆಯಾಗಿದೆ ಎಂಬುದು ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ ಅವರ ಹೇಳಿಕೆ. ಎಲ್ಲೆಲ್ಲಿ ಹಾಸ್ಟೆಲ್‌ ನೋಂದಣಿ ಕಡಿಮೆಯಾಗಿದೆಯೋ ಅಲ್ಲೆಲ್ಲ ಹಾಸ್ಟೆಲ್‌ ಮುಚ್ಚುವಂತೆ ಸರ್ಕಾರ ಆದೇಶಿಸಿದೆ ಆದೇಶವಾಗಿದೆ. ಈ ಕಟ್ಟಡ ಗ್ರಾಮ ಪಂಚಾಯತ್‌, ಶಾಲೆ ಅಂಗನವಾಡಿ ಅಥವಾ ಸರ್ಕಾರದ ಯಾವುದೇ ಇಲಾಖೆಗಳಿಗೆ ಬಾಡಿಗೆ, ಉಚಿತವಾಗಿ ಬೇಕಾದಲ್ಲಿ ನೀಡಬಹುದು. ಅದಕ್ಕೆ ಸರ್ಕಾರದ ಅನುಮತಿಯ ಅಗತ್ಯವಿದ್ದು, ಕೆಲವು ನಿಬಂಧನೆಗಳನ್ನು ಪಾಲಿಸಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಜಾಗದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ವಿದ್ಯಾ ದೇಗುಲದಲ್ಲಿ ಆ ರೀತಿ ಮಾಡುವುದು ತಪ್ಪು ಎಂದು ಸಾರ್ವಜನಿಕರು ಮನವರಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕಟ್ಟಡ ಪಾಳು ಬಿದ್ದಿದ್ದರಿಂದ ನೋವು 2003ರಲ್ಲಿ ನಾನು ಹಾಸ್ಟೆಲ್‌ ವಾರ್ಡನ್‌ ಆಗಿದ್ದಾಗ ಇಲ್ಲಿ 50 ವಿದ್ಯಾರ್ಥಿಗಳಿದ್ದರು. ಅವರಿಗೆ ಇಲಾಖೆಯಿಂದ ಬರುತ್ತಿದ್ದ ಸೋಪು, ಬಟ್ಟೆ, ಎಣ್ಣೆ, ಬೆಳಿಗ್ಗೆ ಮತ್ತು ಸಂಜೆ ಉಪಾಹಾರ, ಮಧ್ಯಾಹ್ನ ಊಟ ನೀಡುತ್ತಿದ್ದೆವು. ಅಂದು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿದ್ದ ಗೌಡರ ನಿಜಲಿಂಗಪ್ಪ ಅವರು ಗ್ರಾಮಸ್ಥರ ಸಹಕಾರದೊಂದಿಗೆ ಹಾಸ್ಟೆಲ್‌ ಮಕ್ಕಳಿಗೆ 50 ಬೆಡ್‌ಶೀಟ್‌ ಹಾಗೂ ಹಾಸಿಗೆಗಳನ್ನು ಕೊಡುಗೆಯಾಗಿ ನೀಡಿದ್ದರು. ದಿ| ಬಿ.ಟಿ. ಚನ್ನಬಸಪ್ಪ ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಕುಡಿಯುವ ನೀರಿನ ಸಮಸ್ಯೆ ಇತ್ತು. ಹಾಸ್ಟೆಲ್‌ಗೆ ಶಾಂತಿಸಾಗರದಿಂದ (ಸೂಳೆಕೆರೆ) ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದರು ಎಂದು ಹಾಸ್ಟೆಲ್‌ ನಿವೃತ್ತ ವಾರ್ಡನ್‌ ಜಿ.ಎಸ್‌. ಪರಮೇಶ್ವರಪ್ಪ ನೆನಪಿಸಿಕೊಂಡರು.  ನಾವು ಹೋದ ಕಡೆಗಳಲ್ಲಿ “ಸರ್ಕಾರದ ಕೆಲಸ ದೇವರ ಕೆಲಸ ಎಂದು ಭಾವಿಸಿ ಕೆಲಸ ಮಾಡಬೇಕು. ಆದರೆ ಈ ಮಾತನ್ನೂ ಯಾರೂ ಪಾಲಿಸುವುದಿಲ್ಲ. ಹಾಸ್ಟೆಲ್‌ ಕಟ್ಟಡ ಪಾಳು ಬಿದ್ದಿರುವುದರಿಂದ ಇಲಾಖೆಗೆ ಮತ್ತು ಸಮಾಜಕ್ಕೆ ಉಪಯೋಗವಾಗುವುದಿಲ್ಲ. ಇಂತಹ ದೊಡ್ಡ ಕಟ್ಟಡವನ್ನು ಪಾಳು ಬಿಟ್ಟಿರುವುದನ್ನು ಕಂಡು ನೋವಾಗುತ್ತದೆ ಎಂದರು.

ಎಂ. ವೇದಮೂರ್ತಿ ಭೀಮಸಮುದ್ರ

Advertisement

Udayavani is now on Telegram. Click here to join our channel and stay updated with the latest news.

Next