ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಆನೆಯ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿರುವ “ಭೀಮ’ ಅಂಬಾರಿ ಹೊರಬೇಕಾದರೆ ಇನ್ನೂ 15 ವರ್ಷ ಕಾಯಬೇಕು ಎನ್ನುತ್ತಾರೆ ದಸರಾ ಗಜಪಡೆಯ ಮಾವುತರು.
ಆನೆ ದ್ರೋಣನ ನಂತರ 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಬಲರಾಮ ಆನೆ ಸುಮಾರು 20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 1978ರಲ್ಲಿ ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಅಂದಾಜು 59 ವರ್ಷ ವಯಸ್ಸಿನ ಈ ಆನೆಯು ತುಂಬಾ ಬಲಶಾಲಿಯಾಗಿದೆ. ಅಂಬಾರಿ ಆನೆ ಅರ್ಜುನನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ.
57 ವರ್ಷದ ಅರ್ಜುನನಿಗೆ ಕೇವಲ 17 ವರ್ಷ ವಯಸ್ಸಿನ ಭೀಮ ಆನೆ ಉತ್ತರಾಧಿಕಾರಿ, ಮುಂದಿನ ವರ್ಷವೇ ಅಂಬಾರಿ ಹೊತ್ತು ಬಿಡುತ್ತದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಆನೆಚೌಕೂರು ವಲಯದ ಭೀಮನಕಟ್ಟೆ ಬಳಿ ಅನಾಥವಾಗಿದ್ದ ಆನೆ ಮರಿಯನ್ನು ತಂದು ಮತ್ತಿಗೋಡು ಆನೆ ಶಿಬಿರದಲ್ಲಿ ಸಾಕಲಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಕರೆತರಲಾಗಿದೆ.
2800 ಕೆ.ಜಿ ತೂಕವಿರುವ ಭೀಮ, 750 ಕೆಜಿ ತೂಕದ ಅಂಬಾರಿ ಹೊರುವುದೆಂದರೇನು? ಅದರ ಮೂಳೆ ಬಲಿಯುವುದು ಬೇಡವಾ? ಎಂದು ಮಾವುತರು ಪ್ರಶ್ನಿಸುತ್ತಾರೆ. ಆನೆಯ ಮೂಳೆ ಬಲಿತು ಅದು ಭಾರ ಹೊರುವಂತಾಗಲು ಕನಿಷ್ಠ 30 ರಿಂದ 35 ವರ್ಷ ವಯಸ್ಸಾದರೂ ಆಗಬೇಕು. ಆ ಲೆಕ್ಕ ನೋಡಿದರೆ ಭೀಮ ಆನೆ ಇನ್ನೂ 15 ವರ್ಷ ಕಾಲ ದಸರಾಗೆ ಬರಬೇಕು. ಆ ನಂತರ ಅಂಬಾರಿ ಆನೆಯ ಉತ್ತರಾಧಿಕಾರಿಯನ್ನಾಗಿ ಯೋಚನೆ ಮಾಡಬಹುದು. ಹಾಗೆ ನೋಡಿದರೆ ಬಲರಾಮ ಇನ್ನೂ ಆರೋಗ್ಯವಾಗಿ ಗಟ್ಟಿ ಮುಟ್ಟಾಗಿ ಇದ್ದಾನೆ ಎನ್ನುತ್ತಾರೆ.
ಕಾಡಾನೆಯನ್ನು ಹಿಡಿದು ತಂದು ಪಳಗಿಸಲು ಕ್ರಾಲ್‌ನಲ್ಲಿ ಹಾಕಿದ ನಂತರ ಸೂಕ್ಷ್ಮ ಜೀವಿಗಳಾದ ಆನೆಗಳು ಬಹುಬೇಗ ಮನುಷ್ಯರ ಮಾತನ್ನು ಕೇಳಲಾರಂಭಿಸುತ್ತವೆ, ಉಟ್ ಎಂದರೆ ಎದ್ದೇಳು, ಮತ್ ಎಂದರೆ ಮುಂದೆ ಹೋಗು, ದೃಕ್ ಎಂದರೆ ಸೊಂಡಿಲು ಎತ್ತಿ ಆರ್ಶೀವಾದ ಮಾಡುವ ಭಾಷಾ ಸೂಚಕಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಆದರೆ, ಮಾವುತರು ಆನೆಗಳ ಜತೆ ಮಾತನಾಡುವುದಕ್ಕಿಂತ ಸನ್ನೆಯ ಮೂಲಕವೇ ಅವುಗಳ ಜತೆ ವ್ಯವಹರಿಸುವುದು ಹೆಚ್ಚು ಎನ್ನುತ್ತಾರೆ ಮಾವುತರು. ಆನೆಯ ಮೇಲೆ ಕುಳಿತ ಮಾವುತ, ಆನೆಯ ಕಿವಿಯ ಹಿಂಭಾಗ ಕಾಲಿನಿಂದ ನೀಡುವ ಸೂಚನೆಗಳನ್ನು ಆನೆ ಚಾಚು ತಪ್ಪದೆ ಪಾಲಿಸುತ್ತದೆ. ಕಿವಿಯ ಹಿಂಭಾಗದ ಕಾಲಿನ ಬೆರಳಿನಿಂದ ಒಂದು ಸುತ್ತು ಹಾಕಿದರೆ, ಆನೆ ತನ್ನ ಶರೀರವನ್ನು ಒಂದು ಸುತ್ತು ಹಾಕಿ ನಿಂತು ಕೊಳ್ಳುತ್ತದೆ. ಹೀಗಾಗಿ ಕಾಲಿನ ಹೆಬ್ಬೆರಳಿನಲ್ಲಿ ಬಲಕ್ಕೆ ಉಜ್ಜಿದರೆ ಬಲಕ್ಕೆ, ಎಡಕ್ಕೆ ಉಜ್ಜಿದರೆ ಎಡಕ್ಕೆ ಚಲಿಸುತ್ತದೆ ಎನ್ನುತ್ತಾರೆ.
ಆನೆಯೇನು ಇಂಥವರೇ ಮಾವುತ- ಕಾವಾಡಿ ಬೇಕು ಎಂದು ಕೇಳುವುದಿಲ್ಲ. ಯಾರೇ ಅದನ್ನು ಮುತುವರ್ಜಿಯಿಂದ ನೋಡಿಕೊಂಡರೂ ಅವರ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತದೆ ಎನ್ನುತ್ತಾರೆ.
ಹೀಗಾಗಿ ಅಂಬಾರಿ ಆನೆಯ ಮಾವುತನ ವಿಚಾರದಲ್ಲಿ ವಿನು-ಸಣ್ಣಪ್ಪ (ಮಹೇಶ) ಯಾರು ಮುನ್ನಡೆಸಬೇಕು ಎಂಬ ಪ್ರಶ್ನೆ ಬರುವುದೇ ಇಲ್ಲ. ಹಿಂದೆ ಅಂಬಾರಿ ಆನೆ ದ್ರೋಣ ಇದ್ದಾಗ ಭೋಜ, ಗೋಪಾಲ ಮೊದಲಾದ ಮಾವುತರು 10-12 ವರ್ಷ ಅಂಬಾರಿ ಆನೆಯನ್ನು ಮುನ್ನಡೆಸಿದವರಿದ್ದಾರೆ. ಹೀಗಾಗಿ ಅಂಬಾರಿ ಆನೆಯನ್ನು ಯಾರು ಮುನ್ನಡೆಸಬೇಕು ಎಂಬುದು ದೊಡ್ಡ ವಿಚಾರವೇ ಅಲ್ಲ ಎನ್ನುತ್ತಾರೆ ದಸರಾ ಗಜಪಡೆಯ ಬಹುತೇಕ ಮಾವುತರುಗಳು.
– ಗಿರೀಶ್ ಹುಣಸೂರು