ಪ್ರಸಂಗದುದ್ದಕ್ಕೂ ಭೀಮ ಪಾತ್ರದ ಅಂತರಂಗ ಭಾವ ವಿಸ್ತಾರಕ್ಕೆ ಪ್ರಾಮುಖ್ಯ ನೀಡಿದ್ದು ವಿಶೇಷವಾಗಿತ್ತು. ಭೀಮಾಯಣ ಎನ್ನುವ ಕೃತಿ ಆಧರಿತ ಪ್ರಸಂಗವಾದ್ದರಿಂದ, ದ್ರೌಪದಿ ವಸ್ತ್ರಾಪಹಾರವೇ ಮೊದಲಾದ ಕೆಲವೊಂದು ಸನ್ನಿವೇಶಗಳು ವಿಭಿನ್ನವಾಗಿ, ಚಿಂತನೆಗೆ ಹಚ್ಚುವಂತಿದ್ದುದು ಆಪ್ಯಾಯಮಾನವಾಯಿತು.
ವಾಸುದೇವ ರಂಗ ಭಟ್ಟರು ಕಥಾ ಸಂಯೋಜಿಸಿದ, ಎಂ. ಕೆ. ರಮೇಶ ಆಚಾರ್ಯ ಪದ್ಯ ರಚಿಸಿದ ವಿಶಿಷ್ಟ ಆಖ್ಯಾನ ಭೀಮ ಭಾರತಕ್ಕೆ ವೇದಿಕೆ ಕಲ್ಪಿಸಿದ್ದು, ಎಂಟನೇ ವರ್ಷದ ಸರ್ಪಂಗಳ ಯಕ್ಷೋತ್ಸವ. ಕಥಾವಿಸ್ತಾರ ಹೊಂದಿದ ಪ್ರಸಂಗ ಹಾಗೂ ಪ್ರಥಮ ಪ್ರಯೋಗವಾದ್ದರಿಂದ ಪ್ರೇಕ್ಷಕರ ನಿರೀಕ್ಷೆಗೆ ತಕ್ಕ ಪ್ರದರ್ಶನವಾಗಿ ಮೂಡಿಬರದಿದ್ದರೂ, ಪ್ರಸಿದ್ಧ ಕಲಾವಿದರನೇಕರ ಉತ್ಕೃಷ್ಟ ಮಟ್ಟದ ಪ್ರದರ್ಶನದಿಂದ, ಭಾವಾಭಿವ್ಯಕ್ತಿಯಿಂದ ಒಟ್ಟಂದದಲ್ಲಿ ಗೆದ್ದಿತು.
ಭೀಮನ ಪಾತ್ರವನ್ನು ದಿವಾಕರ ರೈ ಸಂಪಾಜೆ(ಬಾಲ್ಯ), ಪೆರ್ಮುದೆ ಜಯಪ್ರಕಾಶ ಶೆಟ್ಟಿ(ಯೌವ್ವನ), ರವಿರಾಜ ಪನೆಯಾಲ(ಕಂಕಭಟ್ಟ) ಹಾಗೂ ಸುಣ್ಣಂಬಳ ವಿಶ್ವೇಶ್ವರ ಭಟ್(ಪ್ರೌಢ) ಮೊದಲಾದ ಸಮರ್ಥ ಕಲಾವಿದರಿಗೆ ಹಂಚಿದ್ದು, ನಿರೀಕ್ಷೆಗೆ ಮೀರಿದ ಫಲ ನೀಡಿತು.
ಭೀಮ- ಮಾಯಾ ಹಿಡಿಂಬೆಯರಾಗಿ ದಿವಾಕರ ರೈ ಸಂಪಾಜೆ- ಸಂತೋಷ ಕುಮಾರ್ ಹಿಲಿಯಾಣ ಪೂರ್ವಾರ್ಧದಲ್ಲಿ ಸ್ಪರ್ಧಾತ್ಮಕ ಪ್ರದರ್ಶನ ನೀಡಿ ಗಮನಸೆಳೆದರೆ, ದ್ರೌಪದಿಯ ಪಾತ್ರವನ್ನು ಭಾವಪೂರ್ಣವಾಗಿ ಕಟ್ಟಿಕೊಟ್ಟು ಶಶಿಕಾಂತ ಶೆಟ್ಟಿ ಕಾರ್ಕಳ ಗಮನ ಸೆಳೆದರು. ಗದಾಯುದ್ಧದ ಕೌರವನಾಗಿ ಇಳಿವಯಸ್ಸಿನ ಸೂರಿಕುಮೇರು ಗೋವಿಂದ ಭಟ್ಟರ ಪ್ರದರ್ಶನ ಪ್ರೇಕ್ಷಕರನ್ನು ಬೆರಗುಗೊಳಿಸಿದರೆ, ಕೌರವ-1 ಹಾಗೂ ಕೀಚಕನಾಗಿ ಲಕ್ಷ್ಮಣ ಕುಮಾರ ಮರಕಡ, ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿ ರಂಜಿಸಿದರು. ಘಟೋತ್ಕಚನಾಗಿ ಜಗದಾಭಿರಾಮ ಪಡುಬಿದ್ರೆ, ಅಭಿಮನ್ಯುವಾಗಿ ಗುಂಡಿಮಜಲು ಗೋಪಾಲ ಭಟ್ಟರ ಲವಲವಿಕೆಯ ಪ್ರದರ್ಶನ, ಪ್ರಶಂಸೆಗೆ ಪಾತ್ರವಾಯಿತು. ಕೃಷ್ಣ ಹಾಗೂ ಕುಂತಿಯಾಗಿ ಅಭಿನಯಿಸಿದ ಮಹೇಶ್ ಸಾಣೂರು ಭರವಸೆಯ ಕಲಾವಿದರಾಗಿ ಕಾಣಿಸಿಕೊಂಡರು.
ಪ್ರಸಂಗದುದ್ದಕ್ಕೂ ಭೀಮ ಪಾತ್ರದ ಅಂತರಂಗ ಭಾವ ವಿಸ್ತಾರಕ್ಕೆ ಪ್ರಾಮುಖ್ಯ ನೀಡಿದ್ದು ವಿಶೇಷವಾಗಿತ್ತು. ಭೀಮಾಯಣ ಎನ್ನುವ ಕೃತಿ ಆಧರಿತ ಪ್ರಸಂಗವಾದ್ದರಿಂದ, ದ್ರೌಪದಿ ವಸ್ತ್ರಾಪಹಾರವೇ ಮೊದಲಾದ ಕೆಲವೊಂದು ಸನ್ನಿವೇಶಗಳು ವಿಭಿನ್ನವಾಗಿ, ಚಿಂತನೆಗೆ ಹಚ್ಚುವಂತಿದ್ದುದು ಆಪ್ಯಾಯಮಾನವಾಯಿತು. ಪಾಂಡು ಮಹಾರಾಜ (ಜಯಾನಂದ ಸಂಪಾಜೆ)ನ ಪೀಠಿಕೆಯಿಂದ ಆರಂಭವಾಗಿ, ಭೀಮ ಜನನ, ಕೌರವನ ಹಗೆತನ, ಪರೀಕ್ಷಾರಂಗ, ಹಿಡಿಂಬಾ ವಿವಾಹ, ಬಕಾಸುರ ವಧೆ, ದ್ರೌಪದಿ ಸ್ವಯಂವರ, ದ್ರೌಪದಿ ವಸ್ತ್ರಾಪಹಾರ, ಜಟಾಸುರ ವಧೆ, ಸೈಂಧವ ಅಪಮಾನ, ಜಟ್ಟಿ ಕಾಳಗ, ಕೀಚಕ ವಧೆ, ಚಕ್ರವ್ಯೂಹ, ಕರ್ಣನೊಂದಿಗೆ ಯುದ್ಧ, ಘಟೋತ್ಕಚ ಮರಣ, ಕರ್ಣ ಜನ್ಮ ವೃತ್ತಾಂತ, ದುಃಶ್ಯಾಸನ ವಧೆ, ಗದಾಯುದ್ಧ ಹಾಗೂ ದ್ರೌಪದಿಯ ಸಾಮ್ರಾÿಯಾಗಬೇಕೆಂಬ ಅಭಿಲಾಷೆ ಈಡೇರಿಕೆಯಲ್ಲಿ ಭೀಮನ ಪಾತ್ರ ಮೊದಲಾದ ಸನ್ನಿವೇಶಗಳ ಜೋಡಣೆಯೊಂದಿಗೆ, ಈ ಎಲ್ಲ ಸಂದರ್ಭಗಳಲ್ಲಿ ಭೀಮನ ಪಾತ್ರ ಚಿತ್ರಣ ಯಾ ಭಾವ ಚಿತ್ರಣವೇ ಭೀಮ ಭಾರತ ಎನ್ನಬಹುದು. ಸೀಮಿತ ಅವಧಿಯಲ್ಲಿ ಭೀಮ ಭಾವವಿಸ್ತಾರಕ್ಕೆ ಪ್ರಾಮುಖ್ಯತೆ ನೀಡುವ ಈ ಪ್ರಸಂಗದ ಪ್ರದರ್ಶನ, ಕಲಾವಿದರಿಗೆ ಸವಾಲಾಗಿ ಮೂಡಿಬಂತು. ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ರವಿಚಂದ್ರ ಕನ್ನಡಿಕಟ್ಟೆ ಸಹಕರಿಸಿದರೆ, ಚೆಂಡೆ-ಮದ್ದಳೆ ವಾದನದಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಚೈತನ್ಯ ಪದ್ಯಾಣ, ಮುರಾರಿ ಕಡಂಬಳಿತ್ತಾಯ, ಕೃಷ್ಣಪ್ರಕಾಶ ಉಳಿತ್ತಾಯ ಹಾಗೂ ಯೋಗೀಶ ಆಚಾರ್ಯ ಉಳೆಪಾಡಿ ಸಹಕರಿಸಿದರು.
ಶೈಲೇಶ್ ಭಟ್