ಹೊಸದಿಲ್ಲಿ: ಪ್ರಸಿದ್ಧ ಡಿಜಿಟಲ್ ಪೇಮೆಂಟ್ ಆ್ಯಪ್, ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಇಂಡಿಯಾ (ಎನ್‌ಸಿಪಿಐ) ಸ್ವಾಮ್ಯದ ಭೀಮ್ ಆ್ಯಪ್ ಶೀಘ್ರ ಜಾಗತಿಕ ಮಟ್ಟಕ್ಕೇರಲಿದೆ. ಈವರೆಗೆ ಭೀಮ್ ಆ್ಯಪ್ ಭಾರತದಲ್ಲಿ ಮಾತ್ರ ಬಳಕೆಯಲ್ಲಿತ್ತು. ಈಗ ಸಿಂಗಾಪುರದಲ್ಲೂ ಬಳಕೆಗೆ ಲಭ್ಯವಾಗಲಿದೆ. ಇದರಿಂದ ಅಲ್ಲೂ ಖರೀದಿ, ವ್ಯವಹಾರ ಸುಲಭವಾಗಲಿದೆ.
ಈ ಸಂಬಂಧ ಕೈಗಾರಿಕೆ ಒಕ್ಕೂಟ ಎಫ್ಐಸಿಸಿಐ ಸಿಂಗಾಪುರದ ಫಿನ್‌ಟೆಕ್ ಅಸೋಸಿಯೇಷನ್ (ಎಸ್‌ಎಫ್ಎ) ಜತೆಗೆ ಒಪ್ಪಂದಕ್ಕೆ ಬಂದಿದೆ. ಅದರಂತೆ ಭಾರತ-ಸಿಂಗಾಪುರದಲ್ಲಿ ಇವುಗಳ ಸಹಯೋಗದೊಂದಿಗೆ ಡಿಜಿಟಲ್ ಪಾವತಿ ಆಧುನಿಕ ಪಾವತಿ ತಂತ್ರಜ್ಞಾನ ವ್ಯವಸ್ಥೆಗಳ ಅಭಿವೃದ್ಧಿ ಮತ್ತು ಜಾರಿಗೆ ಕೆಲಸ ಮಾಡಲಿವೆ.
ಇದರಿಂದ ಸಿಂಗಾಪುರದ ಫಿನ್‌ಟೆಕ್ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನದ ಪಾವತಿ ವ್ಯವಸ್ಥೆಗಳು ಭಾರತದಲ್ಲೂ ಲಭ್ಯವಾಗಲಿವೆ. ಭಾರತ ಸೇರಿದಂತೆ ಆಫ್ರಿಕಾ, ಲ್ಯಾಟಿನ್ ಅಮೆರಿಕಾಗಳಲ್ಲಿ ಈ ಎರಡೂ ಕಂಪೆನಿಗಳು ಡಿಜಿಟಲ್ ಪಾವತಿಯ ಹೊಸ ತಂತ್ರಜ್ಞಾನಗಳನ್ನು ಜಂಟಿಯಾಗಿ ಪರಿಚಯಿಸಲಿವೆ. ಇದರ ಭಾಗವಾಗಿ ಭೀಮ್ ಆ್ಯಪ್ ಸಿಂಗಾಪುರದಲ್ಲೂ ಪರಿಚಯಿಸಲಾಗುತ್ತಿದೆ.
ನ.11ರಿಂದ 13ರವರೆಗೆ ನಡೆಯುವ ತಂತ್ರಜ್ಞಾನ ಕುರಿತ ಸಮ್ಮೇಳನದಲ್ಲಿ ಭೀಮ್ ಸಿಂಗಾಪುರಕ್ಕೆ ಪರಿಚಯಗೊಳ್ಳಲಿದೆ. ಇದರಲ್ಲಿ 130 ರಾಷ್ಟ್ರಗಳ 50 ಸಾವಿರ ಮಂದಿ ತಂತ್ರಜ್ಞರು ಭಾಗವಹಿಸಿದ್ದಾರೆ. ಸಿಂಗಾಪುರದಲ್ಲಿ ಆಗುವ ಭೀಮ್ ವ್ಯವಹಾರದ ನಿರ್ವಹಣೆಯನ್ನು ಅಲ್ಲಿ ಸ್ಥಾಪಿಸಲಾಗುವ ಎನ್‌ಇಟಿಎಸ್ ಟರ್ಮಿನಲ್‌ಗಳ ಮೂಲಕವೇ ನಿಭಾಯಿಸಲಾಗುತ್ತದೆ.