Advertisement

ಕೊರೊನಾ ವೈರಸ್‌ ಶಂಕೆ: ಡಿಸಿ ತುರ್ತು ಸಭೆ

05:26 PM Mar 05, 2020 | Naveen |

ಬೀದರ: ನಾರ್ವೇ ಮತ್ತು ಕತಾರ್‌ನಿಂದ ಬೀದರಗೆ ಆಗಮಿಸಿರುವ ಮೂವರು ವ್ಯಕ್ತಿಗಳಿಗೆ ಕೊರೊನಾ ವೈರಸ್‌ ಸೋಂಕು ಹರಡಿದ ಶಂಕೆ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಬುಧವಾರ ವೈದ್ಯಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.

Advertisement

ವೈರಸ್‌ ಸೋಂಕಿತ ಮೂವರಿಗೆ ಜ್ವರ, ನೆಗಡಿ, ಕೆಮ್ಮು ಇರುವ ಹಿನ್ನೆಲೆಯಲ್ಲಿ ಬ್ರಿಮ್ಸ್‌ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ರಕ್ತ ಮತ್ತು ಕಫದ ಮಾದರಿಯನ್ನು ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ಸೋಂಕಿತರಿಗೆ ಈಗ ಚಿಕಿತ್ಸೆ ಕೊಡಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿ ಮೊದಲು ಮುನ್ನೆಚ್ಚರಿಕೆ ವಹಿಸಬೇಕು. ಕಡ್ಡಾಯ ಎನ್‌
-95 ಮಾಸ್ಕ್ ಬಳಸುವುದು ಸೇರಿದಂತೆ ಇನ್ನಿತರ ಸುರಕ್ಷತಾ ಕ್ರಮ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚಿಸಿದರು.

ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ: ವೈರಸ್‌ ಸೋಂಕಿತರ ಜತೆಗೆ ನಾವು ಮುಖಾಮುಖೀಯಾದಲ್ಲಿ, ಅವರ ಕೈ ಕುಲುಕಿದಲ್ಲಿ, ಕೊರೊನಾ ವೈರಸ್‌ ಸೋಂಕಿತ ರೋಗಿಗಳು ಕೆಮ್ಮುವುದು, ಸೀನುವುದರಿಂದ ಈ ಕಾಯಿಲೆ ತೀವ್ರ ಹರಡುತ್ತದೆ. ಆದ್ದರಿಂದ ಜನರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು. ಪ್ರತಿದಿನ ಕರವಸ್ತ್ರವನ್ನು ಬಿಸಿ ನೀರಿನಲ್ಲಿ ತೊಳೆದು ಬಳಸಬೇಕು. ಲಿಕ್ವಿಡ್‌ನಿಂದ ಸರಿಯಾಗಿ ಕೈ ತೊಳೆದುಕೊಳ್ಳಬೇಕು. ಶುಚಿತ್ವ ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಹೊರಗಿನಿಂದ ಬರುವವರ ಮೇಲೆ ಕಣ್ಣಿಡಿ: ಹೊರ ದೇಶ ಮತ್ತು ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವ್ಯಕ್ತಿಗಳನ್ನು ಕಡ್ಡಾಯ ಪರೀಕ್ಷೆಗೊಳಪಡಿಸಬೇಕು. ಕೊರೊನಾ ವೈರಸ್‌ ಇದ್ದ ಬಗ್ಗೆ ಖಚಿತವಾದಲ್ಲಿ ಅಂತವರನ್ನು ಕೂಡಲೇ ಚಿಕಿತ್ಸೆಗೊಳಪಡಿಸಬೇಕು. ಸೋಂಕು ಇತರರಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಹಿನ್ನೆಲೆಯಲ್ಲಿ ಪೊಲೀಸ್‌ ಸಹಕಾರ ಪಡೆದು ಗುಣಮುಖವಾಗುವವರೆಗೆ ವಿಶೇಷ ಚಿಕಿತ್ಸಾ ವಾರ್ಡ್‌ನಲ್ಲಿಯೇ ಸೋಂಕಿತರನ್ನು ಇರಿಸಬೇಕು ಎಂದು ಸೂಚಿಸಿದರು.

Advertisement

ಬ್ರಿಮ್ಸ್‌ನಲ್ಲಿ ಮತ್ತೆ ಐದು ಬೆಡ್‌: ಕೊರೊನಾ ವೈರಸ್‌ ಸಂಶಯಾಸ್ಪದ ಪ್ರಕರಣಗಳು ಕಂಡು ಬಂದ ವ್ಯಕ್ತಿಗಳನ್ನು ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡುವ ಸಂಬಂಧ ಈಗಾಗಲೇ ಬ್ರಿಮ್ಸ್‌ ಆಸ್ಪತ್ರೆಯಲ್ಲಿ 5 ವಿಶೇಷ ಚಿಕಿತ್ಸಾ ವಾರ್ಡ್‌ಗಳನ್ನು ಮೀಸಲಿರಿಸಿದ್ದಾಗಿ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು.

ಪ್ರತಿ ತಾಲೂಕು ಕೇಂದ್ರದಲ್ಲಿ ತಲಾ ಎರಡು ಮತ್ತು ಬ್ರಿಮ್ಸ್‌ನಲ್ಲಿ ಮತ್ತೆ ಐದು ವಿಶೇಷ ವಾರ್ಡ್ಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಪೌರಾಯುಕ್ತರಿಗೆ ನಿರ್ದೇಶನ: ಜನರು ಸಾಧ್ಯವಾದಷ್ಟು ಮಾಂಸಹಾರ ಸೇವನೆ ಬಿಡುವಂತೆ, ಕಡ್ಡಾಯ ಶೌಚಾಲಯ ಬಳಸುವಂತೆ, ಶುಚಿತ್ವಕ್ಕೆ ಒತ್ತು ಕೊಡುವಂತೆ, ಕಸವನ್ನು ಆಯಾ ದಿನವೇ ವಿಲೆ ಮಾಡುವಂತೆ ನಗರದ ಜನರಿಗೆ ವ್ಯಾಪಕ ಪ್ರಚಾರದ ಮೂಲಕ ತಿಳಿಸಲು ಕ್ರಮವಹಿಸುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಲಾಯಿತು.

ಶಾಲೆಗಳಲ್ಲಿ ತಿಳಿವಳಿಕೆ ಕಾರ್ಯಕ್ರಮ ಮಾಡಿ: ಶಾಲೆ-ಕಾಲೇಜು ವಿದ್ಯಾರ್ಥಿಗಳಲ್ಲಿ ಯಾರಿಗಾದರು ಕೆಮ್ಮು, ನೆಗಡಿ, ಜ್ವರ ಕಾಣಿಸಿದರೆ ಅಂತ ವಿದ್ಯಾರ್ಥಿಗಳಿಗೆ ಕೂಡಲೇ ರಜೆ ನೀಡಿ ಮನೆಯಲ್ಲಿರುವಂತೆ ತಿಳಿಸಬೇಕು. ಕಡ್ಡಾಯ ಕೈತೊಳೆದುಕೊಂಡೇ ಉಪಹಾರ ಊಟ ಮಾಡಲು ತಿಳಿಸಬೇಕು. ಕೆಮ್ಮು, ಜ್ವರ, ನೆಗಡಿ ಇರುವ ವಿದ್ಯಾರ್ಥಿಗಳು ಹೇಗೆ ಮಾಸ್ಕನ್ನು ಬಳಸಬೇಕು ಎಂಬುದರ ಬಗ್ಗೆ ಕಡ್ಡಾಯ ಶಾಲಾ ಶಿಕ್ಷಕರಿಂದ ಮಕ್ಕಳಿಗೆ ತುರ್ತಾಗಿ ಮಾಹಿತಿ ನೀಡಲು ಕ್ರಮ ವಹಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಯಿತು.

ಪಿಡಿಒ ಸಭೆ ಮಾಡಲು ಸೂಚನೆ: ಎಲ್ಲ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ, ತಹಶೀಲ್ದಾರರು ಗ್ರಾಮ ಲೆಕ್ಕಾಧಿಕಾರಿಗಳ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಲ್ಲ ಶಿಕ್ಷಕರ ಸಭೆ ಕರೆದು ಚರ್ಚಿಸಿ ಕೊರೊನಾ ವೈರಸ್‌ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ನೌಕರರಿಗೆ ತರಬೇತಿ ನೀಡಿ: ಜಿಲ್ಲೆಯಲ್ಲಿ ಎಲ್ಲ ಆಶಾಗಳು ಮತ್ತು ಅಂಗನವಾಡಿ ನೌಕರರಿಗೆ ತರ್ತಾಗಿ ತರಬೇತಿ ನೀಡಿ ಅವರಿಗೆ ಕೊರೊನಾ ವೈರಸ್‌ ಬಗ್ಗೆ ತಿಳಿಸಿ ಅವರ ಮೂಲಕ ಹಳ್ಳಿಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕು. ಅಂಗನವಾಡಿಗೆ ಹೋಗುವ ಬಾಲ ಮಕ್ಕಳಿಗೆ ಜ್ವರ, ನೆಗಡಿ ಕಂಡು ಬಂದಲ್ಲಿ ಅಂತಹ ಮಕ್ಕಳನ್ನು ಮನೆಯಲ್ಲಿರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್‌., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರಾದ ಅಕ್ಷಯ ಶ್ರೀಧರ, ಭವರ್‌ ಸಿಂಗ್‌ ಮೀನಾ ಮತ್ತು ಎಲ್ಲ ತಾಲೂಕುಗಳು ತಹಶೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next