Advertisement

ಮಾಸ್ಕ್ ಅಭಾವ ಸೃಷ್ಟಿಸಿ ಸುಲಿಗೆ

12:19 PM Mar 07, 2020 | Naveen |

ಬೀದರ: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ಸೋಂಕು ಪಕ್ಕದ ತೆಲಂಗಾಣಕ್ಕೆ ಪ್ರವೇಶದಿಂದ ಗಡಿ ಜಿಲ್ಲೆ ಬೀದರನಲ್ಲಿ ರೋಗದ ಆತಂಕ ಹೆಚ್ಚಿದೆ. ಜನರಲ್ಲಿನ ಈ ಭೀತಿಯನ್ನೇ ಬಂಡವಾಳ ಮಾಡಿಕೊಂಡಿರುವ ಔಷಧ ವ್ಯಾಪಾರಿಗಳು ನಿಗದಿತ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ಕ್ಲಿನಿಕಲ್‌ ಮಾಸ್ಕ್ (ಮುಖಗವಸ)ಗಳನ್ನ ಮಾರಾಟ ಮಾಡುವ ಮೂಲಕ ಸುಲಿಗೆಗೆ ಇಳಿದಿದ್ದಾರೆ.

Advertisement

ತೆಲಂಗಾಣದ ಹೈದ್ರಾಬಾದ್‌ನ ವ್ಯಕ್ತಿಯಲ್ಲಿ ವೈರಸ್‌ ದೃಢಪಟ್ಟಿರುವುದು ಮತ್ತು ಜಿಲ್ಲೆಯಲ್ಲಿ ಶಂಕಿತ ಕೊರೊನಾ ಮೂರು ಪ್ರಕರಣಗಳು ವರದಿಯಾಗಿವೆ. ಆದರೆ, ಅನಗತ್ಯ ಭಯಗೊಳ್ಳುವ ಅಗತ್ಯವಿಲ್ಲ. ಆದರೂ ಮಹಾಮಾರಿ ಸೋಂಕು ವ್ಯಾಪಿಸದಂತೆ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದ್ದು, ಜ್ವರ, ಕೆಮ್ಮು ಇರುವವರು ಸೇರಿದಂತೆ ಸಾರ್ವಜನಿಕರು ಮಾಸ್ಕ್ಗಳನ್ನು ಬಳಸಿ ಮುಂಜಾಗ್ರತೆ ವಹಿಸುವಂತೆ ಜಾಗೃತಿ ಮೂಡಿಸುತ್ತಿವೆ. ಆದರೆ, ಜಿಲ್ಲೆಯಲ್ಲಿ ಹೋಲ್‌ ಸೇಲ್‌ ಮಾರಾಟಗಾರರು ಕ್ಲಿನಿಕಲ್‌ ಮಾಸ್ಕ್ ಗಳ ಕೃತಕ ಅಭಾವ ಸೃಷ್ಟಿಸುತ್ತಿದ್ದಾರಲ್ಲದೇ ಸುಮಾರು ಶೇ. 300 ಪಟ್ಟು ದರ ಹೆಚ್ಚಿಸಿ ಮಾರಾಟ ಮಾಡಲಾಗುತ್ತಿದೆ. ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮಕ್ಕಳು ಕಡ್ಡಾಯವಾಗಿ ಮಾಸ್ಕ್ ಗಳನ್ನು ಧರಿಸಬೇಕು ಎಂದು ಶಾಲಾ ಆಡಳಿತ ಮಂಡಳಿ ಸೂಚಿಸಿವೆ. ಹಾಗಾಗಿ ಕಳೆದ ಎರಡ್ಮೂರು ದಿನಗಳಿಂದ ನಗರ ಸೇರಿ ಜಿಲ್ಲೆಯಲ್ಲಿ ಮಾಸ್ಕ್ಗಳ ಬೇಡಿಕೆ ಹೆಚ್ಚಾಗಿದೆ. ಆದರೆ, ಪಾಲಕರು ಔಷಧ ಮಳಿಗೆಗಳಿಗೆ ಸುತ್ತಾಡಿದರೂ ಮಾಸ್ಕ್ಗಳು ಲಭ್ಯವಿಲ್ಲ ಎಂಬ ಉತ್ತರ ಸಿಗುತ್ತಿದೆ. ಇದ್ದರೂ 30 ರಿಂದ 40 ರೂ.ಗಳಿಗೆ ಕೊಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಕ್ಲಿನಿಕಲ್‌ ಮಾಸ್ಕ್ ರಿಟೈಲ್‌ ಮಾರಾಟ ದರ 5 ರೂ. ಇರುತ್ತದೆ. ಇದನ್ನು ಹೋಲ್‌ಸೇಲ್‌ ದರದಲ್ಲಿ ಖರೀದಿ ಮಾಡಿದರೆ 3ರಿಂದ 4 ರೂ. ವರೆಗೆ ದೊರೆಯುತ್ತದೆ. ಆದರೆ, ಪ್ರಸ್ತುತ ಹೋಲ್‌ಸೇಲ್‌ ಮಾರಾಟಗಾರರೇ ರೀಟೈಲ್‌ ವ್ಯಾಪಾರಿಗಳಿಗೆ 20 ರಿಂದ 25 ರೂ. ವರೆಗೆ ದರ ನಿಗದಿಪಡಿಸುತ್ತಿದ್ದಾರೆ. ಇನ್ನೂ ರಿಟೈಲ್‌ ಮಾರಾಟಗಾರರು ಅದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ಬೇಡಿಕೆ ಹೆಚ್ಚಾಗಿದ್ದು, ಅದಕ್ಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಹಾಗಾಗಿ ಹೋಲ್‌ಸೇಲ್‌ ಮತ್ತು ರಿಟೈಲ್‌ ಇಬ್ಬರು ವ್ಯಾಪಾರಿಗಳು ಜನರಿಂದ ಹೆಚ್ಚು ಹಣ ಕೀಳುತ್ತಿದ್ದಾರೆ.

ಜನರ ಭೀತಿಯನ್ನು ಲಾಭವಾಗಿಸಿಕೊಳ್ಳಲು ಫಾರ್ಮಸಿಸ್ಟ್‌ಗಳು ಮತ್ತು ಔಷಧ ವಿತರಕ ಕಂಪನಿಗಳು ಮಾಸ್ಕ್ಗಳ ಕೊರತೆ ಸೃಷ್ಟಿಸಿ, ಹೆಚ್ಚು ದರಕ್ಕೆ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸುವ ಕುರಿತು ಸರ್ಕಾರ ಎಚ್ಚರಿಕೆ ನೀಡಿದೆ. ಎಂಆರ್‌ಪಿ ದರಕ್ಕಿಂತ ಹೆಚ್ಚು ಬೆಲೆಗೆ ಮಾರಿದರೆ ಆರೋಗ್ಯವಾಣಿ 104ಗೆ ಕರೆ ಮಾಡಿ ದೂರು ನೀಡಬಹುದೆಂದು ಸೂಚಿಸಿದೆ. ಆದರೂ ವ್ಯಾಪಾರಿಗಳು ಜನರಿಂದ ಹಣ ಕೀಳುವುದು ನಿಲ್ಲಿಸುತ್ತಿಲ್ಲ. ಈ ಕೃತ್ಯಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆಕ್ರೋಶ.

ಈಗಲಾದರೂ ಆರೋಗ್ಯ ಇಲಾಖೆ ಎಚ್ಚೆತ್ತು ಮಾಸ್ಕ್ಗಳನ್ನು ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ದೊರಕಿಸಿಕೊಡುವತ್ತ ಕ್ರಮ ವಹಿಸಬೇಕಿದೆ.

Advertisement

ಕ್ಲಿನಿಕಲ್‌ ಮಾಸ್ಕ್ಗಳನ್ನು ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಶುಕ್ರವಾರ ಎಲ್ಲ ಔಷಧ ಅಂಗಡಿ ಮಾಲೀಕರ ಸಭೆ ನಡೆಸಿ ಮಾಸ್ಕ್ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಮತ್ತು ಫಾರ್ಮಸಿಸ್ಟ್‌ ಅಸೋಸಿಯೇಶನ್‌ ಮೂಲಕವೂ ಮನವಿ ಮಾಡಿಸಲಾಗಿದೆ. ಸಾರ್ವಜನಿಕರಿಂದ ಹಣ ಸುಲಿಗೆ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
ಶರಣಬಸಪ್ಪ, ಸಹಾಯಕ ಔಷಧ ನಿಯಂತ್ರಣಾಧಿಕಾರಿ

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next