ಬೀದರ: ಇಂದು ಇಡೀ ಜಗತ್ತು ಭಾರತದ ಕಡೆ ಮುಖ ಮಾಡಲು ಹಾಗೂ ದೇಶ, ದೇಶಗಳ ನಡುವೆ ಸಾಮರಸ್ಯ ಬಲಗೊಳ್ಳುವಲ್ಲಿ ಯೋಗ ಅತ್ಯಂತ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ಶಿವನಗರದಲ್ಲಿ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಪಾವನಧಾಮ ಕೇಂದ್ರದಿಂದ ರವಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಯೋಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಲ್ಲಿ ಪರಿವರ್ತನಾ ಭಾವ ಹಾಗೂ ಅಸಾಧಾರಣ ವ್ಯಕ್ತಿತ್ವ ಬೆಳೆಯಲು ಯೊಗ್ಯ ಉತ್ತಮ ಮಾರ್ಗವಾಗಿದೆ. ಅಲ್ಲದೆ, ಅಶಾಂತಿ, ಅವಿವೇಕತನ, ಆಲಸ್ಯತನ, ಅಹಂಕಾರ, ಅಸಂಹಿಷ್ಣತೆ ಇತ್ಯಾದಿ ಶಮನಗೊಳಿಸಲು ಯೋಗ, ಧ್ಯಾನ ಹಾಗೂ ವ್ಯಾಯಾಮ ಉತ್ತಮ ಮಾರ್ಗಗಳಾಗಿವೆ. ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸಲು ಹಾಗೂ ನಮ್ಮಲ್ಲಿ ಸದಾ ಧನಾತ್ಮಕ ಚಿಂತನೆ, ಮಾನವಿಯ ಮೌಲ್ಯಗಳನ್ನು ಜೀವಂತವಾಗಿಡುವಲ್ಲಿ ಯೋಗ ಸಹಕರಿಸುತ್ತದೆ. ಅಸಂಬದ್ಧ ಬದುಕು ಸುಸಂಸ್ಕೃತದತ್ತ ಮುಖ ಮಾಡಲು ಈಶ್ವರೀಯ ಸಂಸ್ಥೆ ಸಾರುವ ರಾಜಯೋಗ ಶಿಬಿರದತ್ತ ಮುಖ ಮಾಡುವಂತೆ ಹೇಳಿದರು.
ದೀಪದ ಬುಡದಲ್ಲಿ ಕತ್ತಲು ಎನ್ನುವಂತೆ ಇಡೀ ಜಗತ್ತು ಭಾರತದತ್ತ ಒಲಿಯುತ್ತಿರುವಾಗ ಬಹುಕೋಟಿ ಭಾರತೀಯರು ಇಂದಿಗೂ ಯೋಗದಿಂದ ವಿಮುಖರಾಗಿರುವುದು ವಿಪರ್ಯಾಸ. ಧಾರ್ಮಿಕ ಸಂಹಿಷ್ಣತೆ ಹಾಗೂ ಜಾತಿರಹಿತ ಸಮಾಜ ಸುಭದ್ರವಾಗಲು ಯೋಗವನ್ನೇ ತಮ್ಮ ದೈನಂದಿನ ಉಸಿರಾಗಿಸಿಕೊಳ್ಳುವಂತೆ ಹೇಳಿದರು.
ಶಾಹಿನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಅಬ್ದುಲ ಖದೀರ್ ಮಾತನಾಡಿ, ಯೋಗ ಯಾವುದೇ ಧರ್ಮದ ಸಂಪತ್ತು ಅಲ್ಲ. ಅದು ನಮ್ಮ ಭಾರತೀಯ ಸಂಸ್ಕೃತಿಯಾಗಿದೆ. ಇಂದು ಜಗತ್ತಿನ ನೂರಾರು ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ ದೇಶಗಳು ಯೋಗದ ಮೊರೆ ಹೋಗುತ್ತಿರುವಾಗ ಭಾರತೀಯ ಅಲ್ಪಸಂಖ್ಯಾತರು ಇದನ್ನು ಅನುಸರಿಸಬೇಕಿದೆ. ಪಾಶ್ಚಾತ್ಯ ಸಂಸ್ಕೃತಿಯ ದಾಸ್ಯದಲ್ಲಿ ಮುಳುಗಿರುವ ಬಹುತೇಕ ಯುವ ಸಮುದಾಯ ಯೋಗದ ಮೊರೆ ಹೋಗಿ ಬಲಿಷ್ಟ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ ಎಂದರು.
ಪ್ರಜಾಪಿತ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮ ಸಂಚಾಲಕಿ ಬಿ.ಕೆ. ಪ್ರತಿಮಾ ಸಹೊದರಿ ಸಾನ್ನಿಧ್ಯ ವಹಿಸಿ ಮಾತನಾಡಿ, ಯೋಗದಿಂದ ಮನುಷ್ಯನ ಆರೋಗ್ಯ ಸುಧಾರಿಸುವುದರ ಜೊತೆಗೆ ಮಾನಸಿಕ ವಿಕಾಸ ಹೊಂದುತ್ತದೆ. ಆತ್ಮವನ್ನು ಪರಮಾತ್ಮನ ಸನ್ನಿಧಿಗೆ ಕರೆದೊಯ್ಯುತ್ತದೆ. ಇವರಿಬ್ಬರ ಸಂಬಂಧ ಗಟ್ಟಿಗೊಳಿಸುತ್ತದೆ. ಮನಸ್ಸಿನ ಕೆಟ್ಟ ಶಕ್ತಿ ದಮನ ಮಾಡಿ, ಇಂದ್ರೀಯಗಳ ನಿಯಂತ್ರಣಗೊಳಿಸಿ, ಯೋಗಿ, ತ್ಯಾಗಿಯಾಗಿ ಪರಿರ್ವತನಾ ಭಾವ ಹುಟ್ಟು ಹಾಕುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಪ್ರತಿ ದಿನ ಜೀವನ ಪರ್ಯಂತ ಕನಿಷ್ಟ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡುವಂತೆ ಹೇಳಿದರು.
ಯೋಗ ಶಿಕ್ಷಕ ಧೋಂಡಿರಾಮ ಚಾಂದಿವಾಲೆ, ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದ ಪ್ರವರ್ತಕ ಬಿ.ಕೆ. ಪ್ರಭಾಕರ ಕೋರವಾರ ಅವರು, ಪರಮಾತ್ಮನ್ನು ಅರಿಯಲು, ಅನುಭವಿಸಲು, ಆಸ್ವಾದಿಸಲು, ಆನಂದಿಸಲು ಹಾಗೂ ಪರಸ್ಪರ ಸಂಬಂಧ ಸುಧಾರಣೆಗೊಳಿಸಲು ಯೋಗ ಮಹಾ ಮಾರ್ಗ ಎಂದರು.
ಬಿ.ಕೆ. ಗುರುದೇವಿ, ಬಿ.ಕೆ. ಜ್ಯೋತಿ ಸಹೊದರಿ, ಡಾ| ಎಚ್.ಬಿ. ಭರಶೆಟ್ಟಿ, ಶಿಲ್ಪಾ ಸಹೊದರಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.