Advertisement

ರಾಜಯೋಗದಿಂದ ದುಶ್ಚಟಗಳಿಗೆ ಕಡಿವಾಣ

12:51 PM Jun 02, 2019 | Naveen |

ಬೀದರ: ದುಷ್ಟ ಚಟಗಳು ನಮ್ಮ ಸುಂದರ ಶರೀರವನ್ನು ವಿದ್ರುಪಗೊಳಿಸುತ್ತವೆ. ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ, ಆಯುಷ್ಯ ಕ್ಷೀಣಿಸುತ್ತದೆ. ರಾಜಯೋಗ ಶಿಬಿರದಿಂದ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಕಡಿವಾಣ ಹಾಕಲು ಸಾಧ್ಯವಿದೆ ಎಂದು ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಪ್ರತಿಮಾ ಹೇಳಿದರು.

Advertisement

ನಗರದ ಕೇಂದ್ರ ಬಸ್‌ ನಿಲ್ದಾಣದಲ್ಲಿ ವಿಶ್ವ ತಂಬಾಕು ನಿಷೇಧ ದಿನಾಚರಣೆ ನಿಮಿತ್ತ ನಡೆದ ವ್ಯಸನಮುಕ್ತಿ ಶಿಬಿರದಲ್ಲಿ ಅವರು ಮಾತನಾಡಿದರು. ದುಶ್ಚಟಗಳಿಗೆ ಬಲಿಯಾಗಿ, ಜೀವ ಕಳೆದುಕೊಳ್ಳುವ ವ್ಯಕ್ತಿಯ ಕುಟುಂಬದ ಮೇಲೆ ಆರ್ಥಿಕ ಪರಿಣಾಮ ಬೀರುತ್ತದೆ. ಭಾವಿ ಪೀಳಿಗೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಮೂಲಕ ಇಡೀ ಸುಂದರ ಸಮಾಜ ನಶ್ವರದತ್ತ ಸಾಗುತ್ತದೆ. ಮನುಷ್ಯ ಒತ್ತಡಕ್ಕೆ ಸಿಲುಕಿ, ವ್ಯಸನಕ್ಕೆ ಜಾರುವುದು ಸಹಜ. ಜೀವನಕ್ಕೆ ದಿಕ್ಕು ತೋಚದೆ, ಬೀಡಿ, ಸಿಗರೇಟು, ತಂಬಾಕು, ಗುಟಕಾ, ಗಾಂಜಾ, ಮದ್ಯಪಾನಕ್ಕೆ ಬಲಿಯಾಗಿ ಸುಂದರ ಬದುಕನ್ನು ನರಕದ ಬಾಗಿಲಿಗೆ ತಂದು ನಿಲ್ಲಿಸುತ್ತದೆ. ಇಂಥ ದುರಾವಸ್ಥೆಯಿಂದ ವಿಮುಕ್ತನಾಗಲು ಮನಸ್ಸು ಹಾಗೂ ಬುದ್ಧಿ ಜೋಡಣೆ ಅಗತ್ಯವಾಗಿದೆ ಎಂದರು.

ಜೀವನದಲ್ಲಿ ಉತ್ತಮ ಗುಣಗಳು ಪ್ರಾಪ್ತವಾಗಲು ನಿತ್ಯ ಧ್ಯಾನ, ಯೋಗಾದಿ ಕ್ರಿಯೆಗಳನ್ನು ಮಾಡಬೇಕು. ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ರಾಜಯೋಗದ ಮೂಲಕ ದುಷ್ಟ ಆತ್ಮಗಳನ್ನು ಮತ್ತೆ ಪವಿತ್ರ ಆತ್ಮಗಳಾಗಿ ಪರಿವರ್ತಿಸುವ, ಕಳೆದು ಹೋದ ಸುಂದರ ಬದುಕನ್ನು ಮತ್ತೆ ಮರಳಿ ಪಡೆಯು ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದರು.

ಪಾವನಧಾಮದ ಬಿ.ಕೆ. ಗುರುದೇವಿ ಮಾತನಾಡಿ, ಮನುಷ್ಯ ಚಟಕ್ಕೆ ಜಾರಿದರೆ ಮುಂದೊಂದು ದಿನ ಆತನಿಗೆ ಚಟ್ಟ ಕಟ್ಟುವುದು ಗ್ಯಾರಂಟಿ. ಮೂಢ ನಂಬಿಕೆಗಳಿಗೆ ವಸಿಭೂತರಾಗಿ ಆಹಾರ ಪದಾರ್ಥಗಳ ತ್ಯಾಗ ಮಾಡುವ ಮೂರ್ಖ ಮನುಷ್ಯ ತನ್ನಲ್ಲಿನ ದುಷ್ಚಟಗಳನ್ನು ತ್ಯಾಗ ಮಾಡಿ, ಶಿಷ್ಟನಾಗಿ ಬದುಕಬೇಕು. ಪವಿತ್ರ ವಾತಾವರಣಕ್ಕಾಗಿ ಪ್ರತಿಯೊಬ್ಬರು ಸಂಸ್ಕಾರಿಗಳಾಗಿ ಸಂಸ್ಕೃತಿದತ್ತ ಜೀವನಕ್ಕೆ ಮಾರು ಹೋಗಬೇಕು. ಈ ಕಾರ್ಯ ಬ್ರಹ್ಮಾಕುಮಾರಿ ಈಶ್ವರೀಯ ಸಹೋದರ, ಸಹೋದರಿಯರು ನಿತ್ಯ ಮಾಡುತ್ತಾರೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ ವ್ಯಸನಮುಕ್ತ ಶಿಬಿರದ ಕುರಿತು ನಾಟಕ ಪ್ರದರ್ಶನಗೊಂಡಿತು. ದುಷ್ಚಟಗಳ ದುಷ್ಪರಿಣಾಮ ಕುರಿತು ಹಾಕಲಾದ ಭಿತ್ತಿಚಿತ್ರಗಳ ಕುರಿತು ವಿವರಿಸಿಸಲಾಯಿತು. ಇಡೀ ದಿನಪೂರ್ತಿ ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಹಾಗೂ ನೌಬಾದ್‌ ಬಸ್‌ ಘಟಕಗಳಲ್ಲಿ ವ್ಯಸನಮುಕ್ತಿ ಜಾಗೃತಿ ಕಾರ್ಯಕ್ರಮ ಜರುಗಿತು.

Advertisement

ಪಾವನಧಾಮ ಕೇಂದ್ರದ ಪ್ರವರ್ತಕ ಬಿ.ಕೆ. ಪ್ರಭಾಕರ ಕೋರವಾರ ಮಾತನಾಡಿದರು. ಬಸ್‌ ಘಟಕ ವ್ಯವಸ್ಥಾಪಕ ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸಿದರು. ರವಿಂದ್ರ ಸ್ವಾಮಿ, ನಿವೃತ್ತ ವೈದ್ಯಾಧಿಕಾರಿ ಗುಂಡಪ್ಪ ಚಿಲ್ಲರ್ಗಿ, ಬಿ.ಕೆ. ಮಂಗಲಾ, ಬಿ.ಕೆ. ಶಿಲ್ಪಾ, ಬಿ.ಕೆ. ವಿಜಯಲಕ್ಷ್ಮೀ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next