ಬೀದರ: ಶಾರೀರಿಕ ಪರಿಶುದ್ಧಿಗಾಗಿ ಷಟ್ಕರ್ಮ ಸಾಧನ ಅಗತ್ಯವಾಗಿದೆ ಎಂದು ಪುಣೆ ಪಂಚಕೋಶ ಯೋಗಶಾಲೆ ಯೋಗತಜ್ಞ ಯೋಗೇಶ ಚೌಧರಿ ಹೇಳಿದರು.
ನಗರದ ಗುಂಪಾದಲ್ಲಿನ ಎನ್.ಕೆ. ಜಾಬಶಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಷಟ್ಕರ್ಮ ಹಾಗೂ ಪ್ರಕೃತಿ ಚಿಕಿತ್ಸೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಷಟ್ಕರ್ಮವನ್ನು ಷಟಕ್ರಿಯ ಅಥವಾ ಸ್ವಚ್ಛ ಕ್ರಿಯ ಎಂತಲೂ ಕರೆಯಲಾಗುತ್ತದೆ. ಮೂಗಿನಿಂದ ಉಸಿರಾಡಲು ಅನುಕುಲವಾಗಬೇಕಾದರೆ ಶ್ವಾಸಕೋಶ ಶುದ್ಧವಾಗಿರಬೇಕು. ಇದರಿಂದ ದಮ್ಮು, ಅಸ್ತಮಾದಂತಹ ಸಮಸ್ಯೆಗಳಿಂದ ವಿಮುಕ್ತರಾಗಲು ಸಾಧ್ಯವಿದೆ. ಷಟ್ಕರ್ಮದಲ್ಲಿ ಆರು ಪ್ರಕಾರಗಳಾಗಿದ್ದು, ಜಲನೇತಿ, ಧೌತಿ, ನೌಲಿ, ಬಸ್ತಿ, ಕಪಾಲಭಾತಿ ಹಾಗೂ ಕಾಟಕ ಎಂಬ ಈ ರೀತಿಯ ಕ್ರಿಯಗಳು ಪ್ರತಿ ನಿತ್ಯ ಮಾಡಿದಲ್ಲಿ ನಮ್ಮ ಶರೀರ ಪರಿಶುದ್ಧವಾಗಿರುತ್ತದೆ ಎಂದರು.
ಭೂಮಿ, ಆಕಾಶ, ಜಲ, ವಾಯು ಹಾಗೂ ಅಗ್ನಿ ಎಂಬ ಪಂಚಭೂತಗಳ ಮಾದರಿಯಲ್ಲಿ ನಮ್ಮ ಶರೀರವೂ ಸಹ ಸಾಮಾನ್ಯವಾಗಿ ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ಚರ್ಮ ಎಂಬ ಪಂಚಭೂತಗಳಿಂದ ಆವೃತ್ತವಾಗಿದೆ. ಚರ್ಮದ ಸಂಕೇತವಾದ ನಮ್ಮ ಕೈಕಾಲುಗಳ ಮೂಳೆಗಳು ನೋವುಂಟಾಗಿದ್ದರೆ ಬಿಸಿ ನೀರಲ್ಲಿ ಸ್ವಲ್ವ ಹೊತ್ತು ಇಡಬೇಕು. ಇದರಿಂದ ತನ್ನಿಂದ ತಾನೆ ಕೀಲುನೋವು ಕಡಿಮೆಯಾಗುತ್ತದೆ. ಇದನ್ನು ಹೈಡ್ರೋ ತೆರಫಿ ಎಂದು ಕರೆಯುತ್ತಾರೆ. ನಮ್ಮ ಶರೀರದಲ್ಲಿ ಖಾಲಿ ಇರುವ ಜಾಗವನ್ನು ಆಕಾಶಕ್ಕೆ ಹೋಲಿಸಲಾಗುತ್ತದೆ. ಅನಾರೋಗ್ಯದಿಂದ ಬಳಲುವವರು ಕಡ್ಡಾಯವಾಗಿ ಹದಿನೈದು ದಿವನಕ್ಕೆ ಒಂದುಬಾರಿಯಾದರು ಉಪವಾಸ ಮಾಡಿದರೆ ಆರೋಗ್ಯ ಸುಧಾರಣೆಯಾಗುತ್ತದೆ. ಇದನ್ನು ನಿರ್ಜಲ ಉಪವಾಸ ಕ್ರಿಯ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ತಿಂಗಳಿಗೊಮ್ಮೆಯಾದರೂ ಉಪವಾಸ ಮಾಡಿದರೆ ಉತ್ತಮ. ಅದು ಧಾರ್ಮಿಕ ಆಚರಣೆ ಜೊತೆಗೆ ಆರೋಗ್ಯ ಸುಧಾರಣೆಯಾಗುತ್ತದೆ ಎಂದರು.
ದ್ರವ ರೂಪದ ಪದಾರ್ಥಗಳನ್ನು ಸೇವಿಸಿ ಉಪವಾಸ ಮಾಡುವ ಪದ್ಧತಿ ಸಹ ನಡೆಯುತ್ತದೆ. ಅದಕ್ಕೆ ಜಲ ತೆರಫಿ ಚಿಕಿತ್ಸಾ ವಿಧಾನ ಎಂತಲೂ ಕರೆಯಬಹುದು. ಫಲಾಹಾರ ಸೇವಿಸಿ ಉಪವಾಸ ಮಾಡುವ ಪದ್ಧತಿ ಸಹ ನಮ್ಮಲ್ಲಿದ್ದು, ಅದಕ್ಕೆ ಫಲ ತೆರಫಿ ಎಂದು ಕರೆಯಲಾಗುತ್ತದೆ. ಒಟ್ಟಾರೆ ಉಪವಾಸ ಮಾಡುವುದು ಉತ್ತಮ ಚಿಕಿತ್ಸಾ ವಿಧಾನವಾಗಿದೆ ಎಂದರು.
ಯೋಗ ಹಾಗೂ ಪ್ರಾಣಾಯಾಮಗಳು ನಮ್ಮ ದೈನಂದಿನ ಬದುಕು ಬಲಿಷ್ಟವಾಗಿಸುತ್ತವೆ. ಶಾರೀರಿಕ ಹಾಗೂ ಮಾನಸಿಕ ವಿಕಾಸಗೊಳ್ಳಲು ಪ್ರೇರೆಪಿಸುತ್ತವೆ. ಧನಾತ್ಮಕ ಚಿಂತನೆ ಹಾಗೂ ಮಾನವೀಯ ಮೌಲ್ಯ ವೃದ್ಧಿಸಲು ಇವು ಇಂಬು ನೀಡುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಚಿದಂಬರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ ಮಾತನಾಡಿ, ಮನುಷ್ಯನ ದೈನಂದಿನ ಒತ್ತಡದ ಬದುಕಿನಲ್ಲೂ ಕನಿಷ್ಟ ಅರ್ಧ ಗಂಟೆಯಾದರೂ ದಿನಾಲು ಯೋಗ ಮಾಡಬೇಕು. ಮಿತ ಹಾಗೂ ಹಿತ ಆಹಾರ ಸೇವನೆ, ಅಧಿಕ ಜಲ ಭಕ್ಷಣೆ, ಉತ್ತಮ ಗುಣ ನಡತೆ ಇವು ನಮ್ಮ ಆಪಮೃತ್ಯುವನ್ನು ಸಹ ದೂರ ಮಾಡುತ್ತವೆ. ಆದ್ದರಿಂದ ಇದನ್ನು ನಮ್ಮ ದೈನದಂದಿನ ಉಸಿರಾಗಿಸಿಕೊಂಡಲ್ಲಿ ನಿರೋಗಿ ಜೀವನ ಸಾಧ್ಯವಿದೆ ಎಂದವರು ಹೇಳಿದರು. ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ ಮೇಡಿಕಲ್ ಕಾಲೇಜಿನ ಉಪ ಪ್ರಾಚಾರ್ಯ ಡಾ| ಚಂದ್ರಕಾಂತ ಹಳ್ಳಿ, ಕಾಲೇಜಿನ ಅಕಾಡೆಮಿಕ ಉಸ್ತುವಾರಿ ಪರಮೇಶ್ವರ ಭಟ್ ಹಾಗೂ ಇತರರು ವೇದಿಕೆಯಲ್ಲಿದ್ದರು. ಪ್ರಾಚಾರ್ಯ ಡಾ|ನಾಗರಾಜ ಮೂಲಿಮನಿ, ಡಾ| ಜ್ಯೋತಿ ಜಲಕೋಟಿ, ಡಾ| ದೀಪಾ ಭೈರಶೆಟ್ಟಿ, ಡಾ| ಸುರೇಖಾ ಬಿರಾದಾರ, ಡಾ| ಬ್ರಹ್ಮಾನಂದ ಸ್ವಾಮಿ, ಡಾ| ರವಿಂದ್ರನ್ ಮೆಂತೆ, ಡಾ| ವಿಜಯ ಬಿರಾದಾರ, ಡಾ| ಚನ್ನಬಸವಣ್ಣ, ಡಾ| ಮಲ್ಲಿಕಾರ್ಜುನ್ ಮರಕುಂದಾ, ಡಾ| ಪ್ರವಿಣ ಸಿಂಪಿ ಸೇರಿದಂತೆ ಇತರ ಸಿಬ್ಬಂದಿ ಭಾಗವಹಿಸಿದ್ದರು.