ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಆಡಳಿತ ಮಂಡಳಿ ಗುತ್ತಿಗೆ ನವೀಕರಣ ಮಾಡದೆ 105 ಗುತ್ತಿಗೆ ಕಾರ್ಮಿಕರಿಗೆ ಕೆಲಸ ನೀಡದಿರುವುದನ್ನು ವಿರೋಧಿಸಿ ಕಾರ್ಮಿಕರು ಶುಕ್ರವಾರದಿಂದ ಆರಂಭಿಸಿದ್ದ ಹೋರಾಟಕ್ಕೆ ಆಡಳಿತ ಮಂಡಳಿ ಮಣಿದು ಸೋಮವಾರದಿಂದ ಕೆಲಸ ನೀಡಲು ಒಪ್ಪಿಗೆ ಸೂಚಿಸಿದೆ. ಕಾರ್ಮಿಕರು ಇದರಿಂದ ಧರಣಿ ಹಿಂಪಡೆದಿದ್ದು ಹೋರಾಟಕ್ಕೆ ಜಯ ದೊರಕಿದಂತಾಗಿದೆ.
105 ಗುತ್ತಿಗೆ ಕಾರ್ಮಿಕರನ್ನು ಕೆಲಸವಿಲ್ಲ ಎಂದು ಆಡಳಿತ ಮಂಡಳಿ ಕೆಲಸದಿಂದ ಹೊರಹಾಕಿದ್ದನ್ನು ವಿರೋಧಿಸಿ ಗುತ್ತಿಗೆ ಕಾರ್ಮಿಕರು, ಕಾಯಂ ಕಾರ್ಮಿಕರು ಶುಕ್ರವಾರದಿಂದ ಕಾರ್ಖಾನೆಯ ಪ್ರವೇಶ ದ್ವಾರದ ಬಳಿ ಮಾಜಿ ಶಾಸಕ ಎಂಜೆ. ಅಪ್ಪಾಜಿ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದರು.
ಯಶಸ್ವಿಯಾದ ಮಾತುಕತೆ: ಆಡಳಿತ ಮಂಡಳಿಯೊಂದಿಗೆ ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ ಹಲವು ಬಾರಿ ಮಾತುಕತೆ ನಡೆದ ಫಲವಾಗಿ ಅಂತಿಮವಾಗಿ ಆಡಳಿತ ಮಂಡಳಿ ಕೆಲಸದಿಂದ ಹೊರಗೆ ಹಾಕಿದ್ದ 105 ಗುತ್ತಿಗೆ ಕಾರ್ಮಿಕರಿಗೆ ಸೋಮವಾರದಿಂದ ಕೆಲಸ ನೀಡಲು ಒಪ್ಪಿಗೆ ಸೂಚಿಸಿದೆ.
ಅಸ್ವಸ್ಥಗೊಂಡ ಅಪ್ಪಾಜಿ: ಶುಕ್ರವಾರ ಬೆಳಗ್ಗೆಯಿಂದ ಪ್ರತಿಭಟನೆಯಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಶನಿವಾರ ಸಂಜೆ ಸ್ವಲ್ಪ ಅಸ್ವಸ್ಥರಾದರು. ಕೂಡಲೇ ಮನೆಗೆ ತೆರಳಿ ಕೆಲ ಗಂಟೆಗಳಲ್ಲಿಯೇ ಪ್ರತಿಭಟನಾ ಕಾರ್ಖಾನೆಯ ಪ್ರವೇಶ ದ್ವಾರದ ಬಳಿ ಆಗಮಿಸಿದರು. ಕಾರ್ಖಾನೆ ಒಳಗೆ ಹೋಗಲು ಅಲ್ಲಿದ್ದ ಪೊಲೀಸ್ ಸಿಬ್ಬಂದಿ ತಡೆದ ಕಾರಣ ಕೆಲ ಕಾಲ ಪೊಲೀಸರಿಗೂ ಪ್ರತಿಭಟನಾಕಾರರಿಗೂ ತೀವ್ರ ಚರ್ಚೆಯಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ವೃತ್ತ ನಿರೀಕ್ಷಕ ನಂಜಪ್ಪ ಪರಿಸ್ಥಿತಿ ತಿಳಿಗೊಳಿಸಿದ ನಂತರ ಅಪ್ಪಾಜಿ ಕಾರ್ಖಾನೆ ಒಳಗೆ ಹೋದರು.
ಕಾರ್ಖಾನೆಯ ಇಡಿ ಕೆ.ಎಲ್.ಎಸ್. ರಾವ್, ಜಿ.ಎಂ. ಮಿಶ್ರ, ಚಕ್ರವರ್ತಿ, ಗೋಸ್ವಾಮಿ ಸೇರಿದಂತೆ ಕಾರ್ಖಾನೆಯ ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಮಾಜಿ ಶಾಸಕ ಎಂ.ಜೆ. ಅಪ್ಪಾಜಿ, ಬಿ.ಕೆ. ಸಂಗಮೇಶ್ವರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಧರ್ಮಪ್ರಸಾದ್, ಕಾಂಗ್ರೆಸ್ ನಗರಾಧ್ಯಕ್ಷ ಟಿ. ಚಂದ್ರೇಗೌಡ ನಡೆಸಿದ ಸಾಮೂಹಿಕ ಪ್ರಯತ್ನದ ಫಲವಾಗಿ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಜಯ ದೊರಕಿದ್ದು ಸೋಮವಾರದಿಂದ ಕೆಲಸಕ್ಕೆ ಹೋಗಲು ಅವರಿಗೆ ಅವಕಾಶ ಲಭಿಸಿದೆ.